ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿ ಪೊಲೀಸರಿಗೆ ಸಿಗದೇ ಯಾಮಾರಿಸುತ್ತಿದ್ದ ಮೋಹನ್ ಶಿಂಧೆ ಎಂಬಾತರನ್ನು ಶಿರಸಿ ಪೊಲೀಸ್ ಸಿಬ್ಬಂದಿ ವಿಶ್ವನಾಥ ಭಂಡಾರಿ ಅವರು ಚಾಣಾಕ್ಷತನದಿಂದ ಹಿಡಿದಿದ್ದಾರೆ. ಅವರ ಈ ಬುದ್ದಿವಂತಿಕೆ ಮೆಚ್ಚಿ ಶಿರಸಿ ಡಿವೈಎಸ್ಪಿ ಗೀತಾ ಪಾಟೀಲ್ ಅವರು ನಗದು ಬಹುಮಾನ ನೀಡಿದ್ದಾರೆ.
2010ರಲ್ಲಿ ಶಿರಸಿಯ ರಾಮನಬೈಲ್‌ನಲ್ಲಿ ಕಳ್ಳತನ ನಡೆದಿತ್ತು. ಆ ವೇಳೆ ಪೊಲೀಸರು ಶಿವಮೊಗ್ಗದ ಭದ್ರಾವತಿಯ ಮೋಹನ್ ಶಿಂಧೆ ಎಂಬಾತರನ್ನು ಬಂಧಿಸಿದ್ದರು. ನ್ಯಾಯಾಲಯದಿಂದ ಜಾಮೀನುಪಡೆದ ಮೋಹನ ಶಿಂಧೆ ನಂತರ ಪೊಲೀಸರ ಕೈಗೆ ಸಿಕ್ಕಿರಲಿಲ್ಲ. ಶಿಕಾರಿಪುರ, ಶಿರಾಳಕೊಪ್ಪ, ಚೆನ್ನಗಿರಿ, ಹೊನ್ನಾಳಿ ಹಾಗೂ ಭಟ್ಕಳದಲ್ಲಿ ಮೋಹನ್ ಶಿಂಧೆ ತಲೆಮರೆಸಿಕೊಂಡಿದ್ದು, ಕಳ್ಳನ ಹುಡುಕಾಟ ಪೊಲೀಸರಿಗೆ ಸವಾಲಾಗಿ ಪರಿಗಣಿಸಿತ್ತು.
ಪೊಲೀಸ್ ಅಧೀಕ್ಷಕ ಎಂ ನಾರಾಯಣ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಹಾಗೂ ಜಗದೀಶ ಎಂ ಅವರ ಸೂಚನೆ ಪ್ರಕಾರ ಶಿರಸಿ ಸಿಪಿಐ ಶಶಿಕಾಂತ ವರ್ಮ, ಪಿಎಸ್‌ಐ ನಾಗಪ್ಪ ನೇತ್ರತ್ವದಲ್ಲಿ ಮೋಹನ್ ಶಿಂಧೆ ಹುಡುಕಾಟ ಮುಂದುವರೆದಿತ್ತು. ಪೊಲೀಸ್ ಸಿಬ್ಬಂದಿ ವಿಶ್ವನಾಥ ಭಂಡಾರಿ, ಸದ್ದಾಂ ಹುಸೇನ್, ಚನ್ನಬಸಪ್ಪ ಕ್ಯಾರಗಟ್ಟಿ ಈ ಹುಡುಕಾಟದ ತಂಡದಲ್ಲಿದ್ದರು. ಜೂನ್ 7ರಂದು ಅವರೆಲ್ಲರೂ ಸೇರಿ 15 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಮೋಹನ್ ಶಿಂಧೆಯ ಚಲನ-ವಲನ ಕಂಡು ಹಿಡಿದಿದ್ದರು.
ಅದರಲ್ಲಿಯೂ ಪೊಲೀಸ್ ಸಿಬ್ಬಂದಿ ವಿಶ್ವನಾಥ ಭಂಡಾರಿ ಹೊನ್ನಾವರಕ್ಕೆ ತೆರಳಿದ್ದು, ಚಂದಾವರದಲ್ಲಿ ಅಲೆದಾಡುತ್ತಿದ್ದ ಮೋಹನ್ ಶಿಂಧೆಯನ್ನು ಕಂಡುಹಿಡಿದರು. ಇತರೆ ಪೊಲೀಸರ ನೆರವುಪಡೆದು ಆ ಆರೋಪಿಯನ್ನು ಅಲ್ಲಿಯೇ ಬಂಧಿಸಿದರು. ಈ ಸಾಧನೆ ಮೆಚ್ಚಿದ ಡಿವೈಎಸ್‌ಪಿ ಗೀತಾ ಪಾಟೀಲ್ ಅವರು ಮೇಲಧಿಕಾರಿಗಳಿಗೆ ವಿಷಯ ಮುಟ್ಟಿಸಿ ವಿಶ್ವನಾಥ ಭಂಡಾರಿ ಅವರಿಗೆ ನಗದು ಬಹುಮಾನ ನೀಡಿದರು.