ಬಡವರಿಗೆ ಸ್ವಂತ ಸೂರು ನೀಡುವುದಕ್ಕಾಗಿ ದಾಂಡೇಲಿ ನಗರಸಭೆ ಆಶ್ರಯಮನೆಗಳನ್ನು ನಿರ್ಮಿಸಿದೆ. ಆ ಆಶ್ರಯಮನೆಯ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದ್ದು, ಈವರೆಗೂ ವಂತಿಗೆ ಪಾವತಿಸದ ಫಲಾನುಭವಿಗಳಿಗೆ ನಗರಸಭೆ ನೋಟಿಸ್ ನೀಡಿದೆ.
ನಗರಸಭೆಯ ಮಾಹಿತಿ ಪ್ರಕಾರ ಆಶ್ರಯ ಮನೆಯ ಫಲಾನುಭವಿಗಳು 1.20 ಲಕ್ಷ ರೂ ವಂತಿಗೆ ಭರಿಸಬೇಕಿದೆ. ಆ ವಂತಿಗೆ ಭರಿಸಲು ಶಕ್ತಿ ಇಲ್ಲದವರಿಗೆ ನಗರಸಭೆ ನೋಟಿಸ್ ನೀಡಿದ್ದು, ಫಲಾನುಭವಿ ಪಟ್ಟಿಯಿಂದ ಅವರ ಹೆಸರನ್ನು ಕೈ ಬಿಡುವುದಾಗಿ ಎಚ್ಚರಿಕೆಯನ್ನು ನೀಡಿದೆ. ಇದರೊಂದಿಗೆ ಆಶ್ರಯ ಮನೆಯಲ್ಲಿ ವಾಸ ಇಲ್ಲದಿರುವವರನ್ನು ಹುಡುಕಿ ಅವರಿಗೆ ಸಹ ಸೂಚನೆ ನೀಡಲಾಗಿದೆ.
ಕಳೆದ ಆರೇಳು ವರ್ಷಗಳ ಕಾಮಗಾರಿ ನಂತರ ದಾಂಡೇಲಿಯಲ್ಲಿ ಆಶ್ರಯ ಮನೆ ನಿರ್ಮಿಸಲಾಗಿದೆ. ಮನೆ ಇಲ್ಲದ ಅನೇಕರು ಆಶ್ರಯ ಮನೆಗೆ ಅರ್ಜಿ ಸಲ್ಲಿಸಿದ್ದು, ಅವರವರ ಅರ್ಹತೆ ಆಧಾರದಲ್ಲಿ ಆಯ್ಕೆ ಪಟ್ಟಿ ಪ್ರಕಟಿಸಲಾಗಿದೆ. ಆಯ್ಕೆಯಾದವರಿಗೆ ನಗರಸಭೆ ಮನೆಯ ಹಸ್ತಾಂತರ ಕೆಲಸವನ್ನು ಮಾಡಿದೆ. ಆದರೆ, ಕೆಲವರು ಆ ಮನೆಯ ಪ್ರವೇಶ ಮಾಡಿಲ್ಲ. ಇನ್ನೂ ಕೆಲವರು ಮನೆಯ ವಂತಿಗೆಯನ್ನು ಪಾವತಿಸಿಲ್ಲ. ಹೀಗಾಗಿ ಅಂಥವರನ್ನು ನಗರಸಭೆ ಗುರುತಿಸಿ ನೋಟಿಸ್ ನೀಡುತ್ತಿದೆ.
ಕೆಲವರು ಅಲ್ಪ ಪ್ರಮಾಣದ ಮೊತ್ತವನ್ನು ಮಾತ್ರ ನಗರಸಭೆಗೆ ಭರಿಸಿದ್ದಾರೆ. ಪಿಎಂಎವೈ ಯೋಜನೆ ಅಡಿ ಮನೆ ಪಡೆದಿದ್ದರಿಂದ ಒಂದಷ್ಟು ಮೊತ್ತ ಮನ್ನಾ ಆಗಬಹುದು ಎಂಬ ನಿರೀಕ್ಷೆಯಲ್ಲಿ ಫಲಾನುಭವಿಗಳಿದ್ದಾರೆ. ಇನ್ನೂ ಕೆಲವರಿಗೆ ಮನೆ ಕಂತು ಪಾವತಿಸಲು ಯೋಗ್ಯ ಸಾಲ ಸಿಕ್ಕಿಲ್ಲ. ಒಂದಿಬ್ಬರು ಮನೆಪಡೆದಿದ್ದರೂ ಅವರಿಗೆ ಅಲ್ಲಿ ವಾಸಿಸುವ ಅಗತ್ಯವಿಲ್ಲ. ಹೀಗೆ ನಾನಾ ಕಾರಣಗಳಿಂದ ಜನ ನಗರಸಭೆಯ ನೋಟಿಸ್ ಸ್ವೀಕರಿಸಿದ್ದಾರೆ.
ಆಶ್ರಯ ಸಮಿತಿ ಸಭೆ, ಶಾಸಕರ ಸೂಚನೆ ಹಾಗೂ ಈ ಹಿಂದೆ ನೀಡಿದ ತಿಳುವಳಿಕೆ ಪತ್ರದ ಆಧಾರದಲ್ಲಿ ಮತ್ತೆ ನೋಟಿಸ್ ಜಾರಿಗೊಳಿಸಿರುವುದಾಗಿ ನಗರಸಭೆ ಹೇಳಿಕೊಂಡಿದೆ. `ಸರಿಯಾದ ಸಮಜಾಯಿಶಿ ನೀಡದೇ ಇದ್ದರೆ ತಮಗೆ ನೀಡಿದ ವಸತಿ ಸೌಲಭ್ಯವನ್ನು ಏಕೆ ಹಿಂಪಡೆಯಬಾರದು?’ ಎಂದು ಸಹ ನೋಟಿಸ್ಸಿನ ಮೂಲಕ ಪ್ರಶ್ನಿಸಲಾಗಿದೆ.