ಕಾರವಾರದಲ್ಲಿ ಗುತ್ತಿಗೆದಾರರಾಗಿ ಕೆಲಸ ಮಾಡುತ್ತಿದ್ದ ರವಿ ಶಿರೋಡ್ಕರ್ ಹಾಗೂ ವಿಜಯ ದೇಸಾಯಿ ಅಕಾಲಿಕ ಸಾವಿಗೆ ಶರಣಾಗಿದ್ದು, ಅವರ ನಿಧನಕ್ಕೆ ಕಾರವಾರ ನೋಂದಾಯಿತ ಸಿವಿಲ್ ಗುತ್ತಿಗೆದಾರರ ಸಂಘ ಕಂಬನಿ ಮಿಡಿದಿದೆ. ಸ್ನೇಹಿತರ ನಿಧನಕ್ಕೆ ಸಂತಾಪ ಸೂಚಿಸಿ ಗುತ್ತಿಗೆದಾರರೆಲ್ಲರೂ ಮೌನಾಚರಣೆ ನಡೆಸಿದ್ದಾರೆ.
ಶನಿವಾರ ನಡೆದ ಶೃದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಾಧವ ನಾಯಕ `ರವಿ ಶಿರೋಡ್ಕರ್ ಅವರು ಜನವರಿಯಲ್ಲಿ ನಮ್ಮನ್ನು ಅಗಲಿದ್ದರು. ಅವರ ಬಳಿಕ ವಿಜಯ ದೇಸಾಯಿಯವರು ನಮ್ಮನ್ನು ಅಕಾಲಿಕವಾಗಿ ಆಗಲಿದ್ದಾರೆ. ದಾಂಡೇಲಿಯ ರವಿಶಂಕರ್ ಜನ್ನು ಮೃತರಾಗಿದ್ದಾರೆ. ಕಾರವಾರ ಗ್ರಾಮೀಣ ಘಟಕದ ಮಾಜಿ ಅಧ್ಯಕ್ಷರಾದ ಉದಯ್ ಕೊಠಾರಕರ್ ಕೂಡ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದು, ಹೀಗೆ ಒಬ್ಬರ ಮೇಲೊಬ್ಬ ಗುತ್ತಿಗೆದಾರ ಮಿತ್ರರು ನಮ್ಮನ್ನು ಅಗಲುತ್ತಿದ್ದಾರೆ. ಇದು ಅತ್ಯಂತ ಕಳವಳಕಾರಿ’ ಎಂದರು.
`ಕಳೆದ ಅನೇಕ ವರ್ಷಗಳಿಂದ ಗುತ್ತಿಗೆದಾರರ ಬಿಲ್ ಗಳು ಸರಿಯಾಗಿ ಇಲಾಖೆ ಅಥವಾ ಸರ್ಕಾರದಿಂದ ಸಮಯಕ್ಕನುಗುಣವಾಗಿ ಪಾವತಿಯಾಗುತ್ತಿಲ್ಲ. ಎಲ್ಲಡೆ ಕಮಿಷನ್ ಕೇಳುತ್ತಿದ್ದಾರೆ. ಭ್ರಷ್ಟಾಚಾರ ನಿಲ್ಲದೇ ನಾವು ಮಾಡಿರುವ ಕೆಲಸಗಳಿಗೆ ಬಿಲ್ ಪಾವತಿಗೆ ಜನಪ್ರತಿನಿಧಿಗಳ, ಅಧಿಕಾರಿಗಳ ಕೈ- ಕಾಲು ಹಿಡಿಯುವ ಪರಿಸ್ಥಿತಿ ಬಂದಿದೆ. ಪಡೆದ ಸಾಲಗಳನ್ನು ಭರಿಸಲಾಗುತ್ತಿಲ್ಲ. ಬಡ್ಡಿ ತುಂಬಲಾಗದೆ ಬ್ಯಾಂಕ್ ಗಳು ಗುತ್ತಿಗೆದಾರರಿಗೆ ಒತ್ತಡ ಹೀರುತ್ತಿದ್ದಾರೆ. ಇದರಿಂದಾಗಿ ಗುತ್ತಿಗೆದಾರರು ಮಾನಸಿಕವಾಗಿ ಕುಗ್ಗುತ್ತಿದ್ದು, ಹೃದಯದೊತ್ತಡ, ಬ್ರೈನ್ ಸ್ಟ್ರೋಕ್ ನಂಥ ಸಮಸ್ಯೆಗಳಿಗೆ ಒಳಗಾಗುತ್ತಿದ್ದಾರೆ’ ಎಂಬ ವಿಷಯ ತೆರೆದಿಟ್ಟರು.
`ಯಾವ ಸರ್ಕಾರ ಬಂದರೂ ಗುತ್ತಿಗೆದಾರರ ಅಳಲು ಆಲಿಸುತ್ತಿಲ್ಲ. ಏನೇ ಆದರೂ ನಾವೆಲ್ಲರೂ ಒಗ್ಗಟ್ಟಿನಿಂದ ಇರಬೇಕಿದೆ. ಯಾರೂ ಮಾನಸಿಕವಾಗಿ ಕುಗ್ಗಬೇಡಿ. ಒಳ್ಳೆ ದಿನಗಳು ಬಂದೇಬರುತ್ತದೆ. ಒಬ್ಬರಿಗೊಬ್ಬರು ಧೈರ್ಯ ನೀಡಬೇಕಿದೆ. ಕಷ್ಟಕಾಲದಲ್ಲಿ ಜೊತೆಯಾಗಿರಬೇಕಿದೆ’ ಎಂದು ಅವರು ಕರೆನೀಡಿದರು. ಈ ಸಭೆಯಲ್ಲಿ ವಕೀಲ ಆರ್ ವಿ.ನಾಯ್ಕ ಅವರಿಗೂ ಮತ್ತು ಇತ್ತೀಚೆಗೆ ಸಾವಿಗೀಡಾದ ಸತೀಶ್ ಕೊಳಮಕರ ಅವರಿಗೂ ಶೃದ್ಧಾಂಜಲಿ ಸಲ್ಲಿಸಲಾಯಿತು.
ಸಂಘದ ಪ್ರಮುಖರಾದ ಅನಿಲ್ ಮಾಲ್ಸೇಕರ್, ಸಂತೋಷ್ ಸೈಲ್, ಸತೀಶ್ ವಿ.ನಾಯ್ಕ, ಸಂತೋಷ್ ಆರ್.ಪರುಳೇಕರ್, ವಿಜಯ್ ಬಿಳಿಯೆ, ಸಮೀರ್ ನಾಯ್ಕ, ಮಾನ್ಯಕುಮಾರ್ ನಾಯ್ಕ, ಛತ್ರಪತಿ ಮಾಲ್ಸೇಕರ್, ವಿಜಯ ಕಲ್ಗುಟಕರ್, ರಾಜೇಶ್ ಶೇಟ್, ಪ್ರೇಮಾನಂದ ಗುನಗಿ, ಮಹೇಶ್ ಗುನಗಾ, ರೂಪೇಶ್ ನಾಯ್ಕ, ಚಂದನ್ ಮಾಲ್ಸೇಕರ್, ನಿತಿನ್ ಕೊಳಂಬಕರ್, ಪ್ರಶಾಂತ್ ಕಲ್ಗುಟಕರ್, ಪ್ರೇಮನಾಥ್ ನಾಯ್ಕ, ಎಂ ಡಿ ಗೋವೇಕರ್, ಡಿ ಕೆ ನಾಯ್ಕ, ರಾಮಾ ಜೋಶಿ ಇದ್ದರು.