SSLC ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದ ಉತ್ತರ ಕನ್ನಡ ಜಿಲ್ಲೆಯ ಅನೇಕ ವಿದ್ಯಾರ್ಥಿಗಳು ಪತ್ರಿಕೆಯ ಮರುಮೌಲ್ಯಮಾಪನದಲ್ಲಿ ಉತ್ತೀರ್ಣರಾಗಿದ್ದಾರೆ. ಹೀಗಾಗಿ ಪರೀಕ್ಷಾ ಮೌಲ್ಯಮಾಪನ ವಿಷಯದಲ್ಲಿ ಶಿಕ್ಷಕರೇ ಪೇಲಾಗಿದ್ದಾರೆ!
ಎಸ್‌ಎಸ್‌ಎಲ್‌ಸಿ ಪರೀಕ್ಷೆ ಪತ್ರಿಕೆಗಳ ಮೌಲ್ಯಮಾಪನಕ್ಕೆ ತೆರಳುವ ಶಿಕ್ಷಕರಿಗೆ ಸರ್ಕಾರ ವಿವಿಧ ಸೌಲಭ್ಯ ಕಲ್ಪಿಸುತ್ತದೆ. ಅವರಿಗೆ ಸಿಗುವ ವೇತನದ ಜೊತೆ ಹೆಚ್ಚವರಿ ಭತ್ಯೆಯನ್ನು ನೀಡಲಾಗುತ್ತದೆ. ಶಿಕ್ಷಕರು ಕರ್ತವ್ಯ ನಿಭಾಯಿಸುವ ಸ್ಥಳದ ಆಧಾರದಲ್ಲಿ ಕನಿಷ್ಟ 450ರೂಪಾಯಿಯಿಂದ 800ರೂಪಾಯಿಯವರೆಗೆ ಭತ್ಯೆ ನೀಡಲಾಗುತ್ತದೆ. ಜೊತೆಗೆ ಪ್ರತಿ ಪತ್ರಿಕೆ ಮೌಲ್ಯಮಾಪನಕ್ಕೂ 22-25ರೂಪಾಯಿವರೆಗೆ ವಿಷಯದ ಆಧಾರದಲ್ಲಿ ಹಣ ಪಾವತಿಸುತ್ತದೆ. ಒತ್ತಡದ ನಡುವೆ ಮೌಲ್ಯ ಮಾಪನ ಮಾಡಬಾರದು ಎಂಬ ಕಾರಣಕ್ಕಾಗಿ ದಿನಕ್ಕೆ 20 ಪತ್ರಿಕೆಗಳನ್ನು ಮಾತ್ರ ಮೌಲ್ಯ ಮಾಪನಕ್ಕೆ ನೀಡಲಾಗುತ್ತದೆ. ಸಂಬಳದ ಜೊತೆ ಹೆಚ್ಚುವರಿಯಾಗಿ ಇಷ್ಟು ಸೌಕರ್ಯ ನೀಡಿದರೂ ಸಹ ಕೆಲ ಶಿಕ್ಷಕರು ಮೌಲ್ಯಮಾಪನದ ವಿಷಯದಲ್ಲಿ ವಿದ್ಯಾರ್ಥಿಗಳ ಭವಿಷ್ಯ ಹಾಳು ಮಾಡಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ 2025ರ ಮಾರ್ಚ 21ರಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಶುರುವಾಗಿತ್ತು. 125 ಸರಕಾರಿ, 150 ಅನುದಾನಿತ, 92 ಅನುದಾನರಹಿತ, 25 ವಸತಿ ಶಾಲೆಗಳ ವಿದ್ಯಾರ್ಥಿಗಳು ಪರೀಕ್ಷೆಗೆ ತಯಾರಿ ನಡೆಸಿದ್ದರು. ಒಟ್ಟು 74 ಪರೀಕ್ಷಾ ಕೇಂದ್ರಗಳಲ್ಲಿ 20035 ವಿದ್ಯಾರ್ಥಿಗಳಿಗೆ ಪರೀಕ್ಷೆ ಎದುರಿಸಲು ಸಿದ್ಧತೆ ನಡೆಸಿದ್ದರು. 220 ವಿದ್ಯಾರ್ಥಿಗಳನ್ನುಹೊರತುಪಡಿಸಿ ಉಳಿದವರೆಲ್ಲರೂ ಪರೀಕ್ಷೆ ಎದುರಿಸಿದ್ದರು. ಪರೀಕ್ಷಾ ಫಲಿತಾಂಶ ಬಂದಾಗ ಕೆಲವರು ಅನುತ್ತೀರ್ಣರಾದ ಕಾರಣ ಬೇಸರಗೊಂಡಿದ್ದರು. ಪೂರ್ವಭಾವಿ ಪರೀಕ್ಷೆಯಲ್ಲಿ ಶೇ 35ಕ್ಕಿಂತ ಕಡಿಮೆ ಅಂಕಪಡೆದಿದ್ದ ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳನ್ನು ನಡೆಸಿ, ಹೆಚ್ಚು ಅಂಕಗಳನ್ನು ಪಡೆಯುವ ಕಾಳಜಿವಹಿಸಲಾಗಿದ್ದರೂ ಫಲಿತಾಂಶದಲ್ಲಿ ವ್ಯತ್ಯಾಸ ಬಂದಿರುವುದಕ್ಕೆ ಶಿಕ್ಷಣ ತಜ್ಞರು ಅಚ್ಚರಿವ್ಯಕ್ತಪಡಿಸಿದ್ದರು. ಈ ವೇಳೆ ಅನುತ್ತೀರ್ಣರಾದ ಹಾಗೂ ಕಡಿಮೆ ಅಂಕಪಡೆದ ಕಾರಣ ಕೆಲ ವಿದ್ಯಾರ್ಥಿಗಳು ಸಾವಿನ ಬಾಗಿಲನ್ನು ತಟ್ಟಿದ್ದರು.
ಅದಾಗಿಯೂ ಕೆಲ ವಿದ್ಯಾರ್ಥಿಗಳು ಕಾಸು ಖರ್ಚು ಮಾಡಿ ಉತ್ತರ ಪತ್ರಿಕೆಯ ಮರು ಮೌಲ್ಯಮಾಪನಕ್ಕೆ ಮನವಿ ಮಾಡಿದ್ದು, ಮರು ಮೌಲ್ಯಮಾಪನದಲ್ಲಿ ಕಾರವಾರ ಶೈಕ್ಷಣಿಕ ಜಿಲ್ಲೆಯ 66 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಆ ಪೈಕಿ ಕಾರವಾರದಲ್ಲಿ 9, ಅಂಕೋಲಾದಲ್ಲಿ 6, ಕುಮಟಾ ಹಾಗೂ ಹೊನ್ನಾವರದಲ್ಲಿ ತಲಾ 16, ಭಟ್ಕಳದಲ್ಲಿ 19 ವಿದ್ಯಾರ್ಥಿಗಳು ಮರು ಮೌಲ್ಯಮಾಪನದ ಅದೃಷ್ಟ ಪರೀಕ್ಷೆಯಿಂದ ಮುಂದಿನ ವಿದ್ಯಾಬ್ಯಾಸಕ್ಕೆ ಪ್ರವೇಶ ಪಡೆದಿದ್ದಾರೆ. ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿಯೂ 35 ವಿದ್ಯಾರ್ಥಿಗಳು ಮರು ಮೌಲ್ಯಮಾಪನದಿಂದ ಪಿಯುಸಿ ಹಂತದ ಪ್ರವೇಶಕ್ಕೆ ಆಯ್ಕೆಯಾಗಿದ್ದಾರೆ. ಶಿರಸಿಯಲ್ಲಿ 10, ಯಲ್ಲಾಪುರದಲ್ಲಿ 3, ಜೊಯಿಡಾದಲ್ಲಿ 5, ಸಿದ್ದಾಪುರದಲ್ಲಿ 10 ಹಾಗೂ ಹಳಿಯಾಳ-ದಾಂಡೇಲಿ ಸೇರಿ 7 ವಿದ್ಯಾರ್ಥಿಗಳು ಮರು ಮೌಲ್ಯಮಾಪನದಿಂದ ಪಾಸಾಗಿದ್ದಾರೆ. ಮುಂಡಗೋಡದ ವಿದ್ಯಾರ್ಥಿಗಳು ಮರು ಮೌಲ್ಯಮಾಪನಕ್ಕೆ ಹೆಚ್ಚಿನ ಆಸಕ್ತಿ ತೋರಿಲ್ಲ.
`ಉತ್ತರ ಕನ್ನಡ ಜಿಲ್ಲೆಯ ವಿದ್ಯಾರ್ಥಿಗಳ ಉತ್ತರ ಪತ್ರಿಕೆ ಬೀದರ್, ಬೆಳಗಾವಿ, ವಿಜಯಪುರ ಭಾಗದ ಶಿಕ್ಷಕರ ಕೈ ಸೇರಿರುವುದು ಇಂಥ ಪ್ರಮಾದಗಳಿಗೆ ಕಾರಣ’ ಎಂಬುದು ಕೆಲ ಶಿಕ್ಷಕರ ಮಾತು. `ಇಲ್ಲಿನವರ ಭಾಷೆ, ಅವರ ಬರವಣಿಗೆಯ ಶೈಲಿಯನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗದ ಕೆಲ ಶಿಕ್ಷಕರು ಅವರದ್ದೇ ಆದ ರೀತಿಯಲ್ಲಿ ಮೌಲ್ಯಮಾಪನ ಮಾಡಿ ಕಡಿಮೆ ಅಂಕ ನೀಡುತ್ತಾರೆ. ಇದರಿಂದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೂ ಅನ್ಯಾಯವಾಗುವುದು ಸಹಜ’ ಎಂದು ಮೌಲ್ಯಮಾಪನದ ಸಮಸ್ಯೆ ಬಗ್ಗೆ ಅರಿತ ಶಿಕ್ಷಕರೊಬ್ಬರು ಕಾರಣ ತಿಳಿಸಿದರು.
`ಮರು ಮೌಲ್ಯಮಾಪನದಲ್ಲಿ ವಿದ್ಯಾರ್ಥಿ 6ಕ್ಕಿಂತ ಹೆಚ್ಚು ಅಂಕಪಡೆದರೆ ಮೊದಲು ಆ ಪತ್ರಿಕೆ ಮೌಲ್ಯಮಾಪನ ಮಾಡಿದ ಶಿಕ್ಷಕರಿಗೆ ದಂಡ ವಿಧಿಸಲಾಗುತ್ತದೆ. ಸರಿಸುಮಾರು 800ರಿಂದ 5 ಸಾವಿರ ರೂವರೆಗೆ ಶಿಕ್ಷಕ ಮಾಡಿದ ತಪ್ಪಿನ ಆಧಾರದಲ್ಲಿ ದಂಡದ ಮೊತ್ತ ಬರುತ್ತದೆ’ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.