`ಕುಮಟಾ ಕೋಡ್ಕಣಿಯ ಸುಬ್ರಹ್ಮಣ್ಯ ಅಂಬಿಗ ಅವರ ಸಾವಿನಲ್ಲಿ ವೈದ್ಯರ ನಿರ್ಲಕ್ಷ್ಯ ಏನೂ ಇಲ್ಲ’ ಎಂದು ಹೈಟೆಕ್ ಆಸ್ಪತ್ರೆಯ ವೈದ್ಯ ಡಾ ನಿತೀಶ ಶಾನಭಾಗ್ ಅವರು ಹೇಳಿದ್ದಾರೆ. ಇದಕ್ಕೆ ಪೂರಕವಾಗಿ ಆ ದಿನ ನಡೆದ ಘಟನಾವಳಿಗಳ ಸಿಸಿ ಟಿವಿ ದಾಖಲೆಯನ್ನು S News ಡಿಜಿಟಲ್’ಗೆ ಒದಗಿಸಿದ್ದಾರೆ.
`ಬೆಂಗಳೂರಿನಲ್ಲಿ ರಿಕ್ಷಾ ಚಾಲಕನಾಗಿದ್ದ ಸುಬ್ರಹ್ಮಣ್ಯ ಅಂಬಿಗ ಅವರು ಸರಾಯಿ ಚಟಕ್ಕೆ ಅಂಟಿಕೊoಡಿದ್ದರು. ಬೆಂಗಳೂರಿನಲ್ಲಿರುವಾಗಲೇ ಅವರಿಗೆ ಹೊಟ್ಟೆನೋವು ಕಾಣಿಸಿದ್ದು, ಕುಮಟಾದ ಎರಡು ಆಸ್ಪತ್ರೆಗೆ ತೋರಿಸಿದರೂ ಗುಣವಾಗಿರಲಿಲ್ಲ. ಹೀಗಾಗಿ ಅವರು ಮೇ 31ರಂದು ಹೈಟೆಕ್ ಆಸ್ಪತ್ರೆಗೆ ಬಂದಿದ್ದರು. ಐದು ದಿನಗಳ ಕಾಲ ಜನರಲ್ ವಾರ್ಡಿನಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗಿದೆ. ಅವರು ಚೇತರಿಸಿಕೊಳ್ಳುತ್ತಿದ್ದ ವ್ಯಸನವಿಲ್ಲದ ಕಾರಣ ಚಡಪಡಿಕೆಯಿಂದ ಇದ್ದರು’ ಎಂದು ಆಸ್ಪತ್ರೆ ಸಿಬ್ಬಂದಿ ವಿವರಿಸಿದರು.
`ಕೇವಲ ಹೊಟ್ಟೆನೋವು ಆಗಿದ್ದರೆ ಮೊದಲು ಹೋದ ಆಸ್ಪತ್ರೆಯಲ್ಲಿಯೇ ಅದು ಗುಣಮುಖವಾಗಬೇಕಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಹೈಟೆಕ್ ಆಸ್ಪತ್ರೆಗೆ ಬಂದ ಕಾರಣ ಇಲ್ಲಿ ದಾಖಲಿಸಿಕೊಳ್ಳಲಾಗಿದ್ದು, ಚಿಕಿತ್ಸೆ ವೇಳೆ ಸುಬ್ರಹ್ಮಣ್ಯ ಅಂಬಿಗ ಅವರಿಗೆ ಮೇದೊಜೀರಕ ಗ್ರಂಥಿ ಊತಗೊಂಡಿರುವುದು ಗಮನಕ್ಕೆ ಬಂದಿತು. ಈ ರೋಗದಿಂದ ಬಳಲುತ್ತಿರುವವರು ಊಟ, ತಿಂಡಿ ಹಾಗೂ ನೀರು ಸೇವಿಸಿದರೂ ವಾಂತಿ ಮಾಡುವುದು ಸಾಮಾನ್ಯ. ಹೀಗಾಗಿ ಗ್ಲುಕೋಸ್‌ನ್ನು ಆಹಾರ ರೂಪದಲ್ಲಿ ನೀಡಿ ಅವರನ್ನು ಆರೈಕೆ ಮಾಡಲಾಗಿತ್ತು’ ಎಂದು ವೈದ್ಯಕೀಯ ಪರಿಸ್ಥಿತಿಯ ಬಗ್ಗೆ ತಿಳಿಸಿದರು.
`ಜನರಲ್ ವಾರ್ಡಿನಲ್ಲಿ 5 ದಿನ ಕಳೆದ ಸುಬ್ರಹ್ಮಣ್ಯ ಅಂಬಿಗ ಅವರು ವೈದ್ಯರ ಸೂಚನೆ ಪಾಲಿಸುತ್ತಿರಲಿಲ್ಲ. ಸುಬ್ರಹ್ಮಣ್ಯ ಅಂಬಿಗ ಅವರು ಸರಾಯಿ, ಐಸ್ ಕ್ರೀಂ ಹಾಗೂ ಹೆಚ್ಚಿನ ಪ್ರಮಾಣದಲ್ಲಿ ನೀರು ಅಗತ್ಯವೆಂದು ಬೇಡಿಕೆಯಿಡುತ್ತಿದ್ದರಿಂದ ಇತರೆ ರೋಗಿಗಳಿಗೆ ಸಹ ತೊಂದರೆಯಾಗುತ್ತಿತ್ತು. ಹೀಗಾಗಿ ಅವರನ್ನು ಇನ್ನೂ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕರೆದೊಯ್ಯುವಂತೆ ಆಸ್ಪತ್ರೆಯವರು ಶಿಫಾರಸ್ಸು ಮಾಡಿದ್ದರೂ ಆರ್ಥಿಕ ಸಂಕಷ್ಟದ ಕಾರಣದಿಂದ ಕುಟುಂಬದವರು ಇಲ್ಲಿಯೇ ಚಿಕಿತ್ಸೆ ಮುಂದುವರೆಸಿದ್ದರು. ಆ ದಿನ ಮಧ್ಯಾಹ್ನದವರೆಗೆ ಸರಿಯಿದ್ದ ಸುಬ್ರಹ್ಮಣ್ಯ ಅಂಬಿಗ ಅವರು ನಂತರ ಸರಾಯಿ ಬೇಕು ಎಂದು ಗಲಾಟೆ ಶುರು ಮಾಡಿದ್ದು, ಆಸ್ಪತ್ರೆ ಸಿಬ್ಬಂದಿ ಜೊತೆಯೂ ಅನುಚಿತವಾಗಿ ವರ್ತಿಸಿದರು’ ಎಂದು ಅಲ್ಲಿನವರು ಅಳಲು ತೋಡಿಕೊಂಡರು.
`ಈ ನಡುವೆ ಆಸ್ಪತ್ರೆ ಸಿಬ್ಬಂದಿ ಕಣ್ತಪ್ಪಿಸಿ ಸುಬ್ರಹ್ಮಣ್ಯ ಅಂಬಿಗ ಕ್ಯಾಂಟೀನ್‌ಗೆ ಹೋಗಿದ್ದಾರೆ. ಅಲ್ಲಿಂದ ಮರಳಿದ ನಂತರ ಅಸಭ್ಯವಾಗಿ ವರ್ತಿಸುತ್ತಿದ್ದ ಕಾರಣ ಸುಬ್ರಹ್ಮಣ್ಯ ಅಂಬಿಗ ಅವರನ್ನು ಪ್ರತ್ಯೇಕ ಕೋಣೆಗೆ ಸ್ಥಳಾಂತರಿಸಲಾಯಿತು. ಈ ವೇಳೆ ಆತ ಮತ್ತೆ ಅಲ್ಲಿಂದ ಪರಾರಿಯಾಗಬಹುದು ಎಂದು ಭಾವಿಸಿ ಆತನ ಕುಟುಂಬದವರೇ ಕೋಣೆಯ ಬಾಗಿಲು ಹಾಕಿದ್ದು, ಆಗ ಕಿಟಕಿಯಿಂದ ಹೊರಗೆ ಹೋಗುವ ಉದ್ದೇಶದಿಂದ ಆಸ್ಪತ್ರೆ ಗಾಜು ಒಡೆದಿದ್ದಾರೆ. ಆಗ ಅವರ ಕೈಗೆ ಸಹ ರಕ್ತವಾಗಿದ್ದು, ಆ ವೇಳೆಯಲ್ಲಿಯೂ ಅವರಿಗೆ ಸಿಬ್ಬಂದಿ ಆರೈಕೆ ಮಾಡಿದ್ದಾರೆ’ ಎಂದು ವಿಡಿಯೋ ದಾಖಲೆಗಳೊಂದಿಗೆ ಮಾಹಿತಿ ನೀಡಿದರು.
`ರಕ್ತಸ್ರಾವದಿಂದ ಉಸಿರಾಟದಲ್ಲಿ ಏರುಪೇರಾದಾಗಲೂ ಸುಬ್ರಹ್ಮಣ್ಯ ಅಂಬಿಗ ಅವರನ್ನು ಉಳಿಸಿಕೊಳ್ಳಲು ಸಾಕಷ್ಟು ಪ್ರಯತ್ನ ನಡೆಯಿತು. ಆದರೂ, ಅದು ಸಾಧ್ಯವಾಗಿಲ್ಲ’ ಎಂದು ಡಾ ನಿತೇಶ ಶಾನಭಾಗ್ ನೋವು ತೋಡಿಕೊಂಡರು. ಒಂದೇ ಒಂದು ರೂಪಾಯಿ ಹಣಪಡೆಯದೇ 5 ದಿನ ಆಸ್ಪತ್ರೆಯಲ್ಲಿ ಆರೈಕೆ ಮಾಡಿರುವುದಾಗಿಯೂ ಆಸ್ಪತ್ರೆಯವರು ಹೇಳಿದ್ದಾರೆ. ಸುಬ್ರಹ್ಮಣ್ಯ ಅಂಬಿಗ ಅವರ ಮರಣೋತ್ತರ ಪರೀಕ್ಷೆ ಬಂದ ನಂತರ ಸಾವಿನ ಸತ್ಯ ಎಲ್ಲರಿಗೂ ಅರಿವಾಗಲಿದೆ. ಇದರಲ್ಲಿ ವೈದ್ಯರ ನಿರ್ಲಕ್ಷö್ಯ ಇಲ್ಲದ ಬಗ್ಗೆಯೂ ಖಚಿತವಾಗಲಿದೆ’ ಎಂದವರು ವಿಶ್ವಾಸವ್ಯಕ್ತಪಡಿಸಿದರು.
ಆ ದಿನ ಆಸ್ಪತ್ರೆಯಲ್ಲಿ ನಡೆದಿದ್ದೇನು? ಸಿಸಿ ಟಿವಿ ದೃಶ್ಯಾವಳಿಗಳನ್ನು ಇಲ್ಲಿ ನೋಡಿ..