ಸ್ನೇಹಿತರಿಗೆ ಊಟ ಕೊಡಿಸಲು ಕಂಜೂಸ್ ಮಾಡಿದ ಕಾರಣ ಹಳಿಯಾಳದ ಪಕ್ಕಿರಪ್ಪಾ ಕಬ್ಬರಗಿ ಧರ್ಮದೇಟು ತಿಂದಿದ್ದಾರೆ. ಊಟ ಕೊಡಿಸುವಂತೆ ದುಂಬಾಲು ಬಿದ್ದರೂ ಊಟಕ್ಕೆ ಕರೆದೊಯ್ಯದ ಕಾರಣ ರಾಘು ಜೋಗಿನ್ ಹಾಗೂ ಸುಭಾನಿ ಜಾಂಗಳೆ ಸೇರಿ ಪಕ್ಕಿರಪ್ಪಾ ಕಬ್ಬರಗಿ ಅವರಿಗೆ ಹಿಗ್ಗಾಮುಗ್ಗ ಥಳಿಸಿದ್ದಾರೆ.
ಹಳಿಯಾಳದ ಭಾಗವತಿಯ ಪಕ್ಕಿರಪ್ಪಾ ಕಬ್ಬರಗಿ ಅವರು ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಾರೆ. ಈ ಹಿಂದೆ ಅವರ ಕೈಗೆ ಪೆಟ್ಟಾಗಿದ್ದು, ಆ ನೋವಿನಿಂದಲೂ ಅವರು ಬಳಲುತ್ತಿದ್ದಾರೆ. ಹೀಗಿರುವಾಗ ಮೇ 7ರ ಮಧ್ಯಾಹ್ನ ಅವರು ಸಂತೋಷ ರಾಥೋಡ್ ಅವರ ಅಂಗಡಿ ಮುಂದೆ ಪಕ್ಕಿರಪ್ಪ ಕಬ್ಬರಗಿ ಅವರು ನಿಂತಿದ್ದರು. ಆಗ, ಅಲ್ಲಿಗೆ ಬಂದ ಅದೇ ಊರಿನ ರಾಘು ಜೋಗಿನ್ ಹಾಗೂ ಸುಭಾನಿ ಜಾಂಗಳೆ `ಊಟದ ಪಾರ್ಟಿ ಕೊಡಿಸು’ ಎಂದು ದುಂಬಾಲು ಬಿದ್ದರು.
ಅದಕ್ಕೆ ಪಕ್ಕಿರಪ್ಪಾ ಕಬ್ಬರಗಿ ಒಪ್ಪಲಿಲ್ಲ. `ಊಟ ಹಾಕಿಸಲು ಆಗುವುದಿಲ್ಲ’ ಎಂದು ಪಕ್ಕಿರಪ್ಪಾ ಖಡಕ್ ಆಗಿ ಮಾತನಾಡಿದರು. ಇದರಿಂದ ಸಿಟ್ಟಾದ ಅವರಿಬ್ಬರೂ `ಯಾವಾಗ ಕೇಳಿದರೂ ಆಗುವುದಿಲ್ಲ ಎನ್ನುತ್ತೀಯಾ?’ ಎಂದು ನಿಂದಿಸಿದರು. ಅದೇ ಸಿಟ್ಟಿನಲ್ಲಿ ಪಕ್ಕಿರಪ್ಪ ಅವರ ಕೈ ಹಿಡಿದು ಎಳೆದರು. ಬಲಗೈಯನ್ನು ತಿರುವಿದ್ದರಿಂದ ಅವರಿಗೆ ಆಗಿದ್ದ ಹಳೆಯ ಗಾಯ ಮತ್ತೆ ಹೊಸದಾಯಿತು. ಆ ಜಾಗದಿಂದ ಭಾರೀ ಪ್ರಮಾಣದಲ್ಲಿ ರಕ್ತವು ಸುರಿಯಿತು.
ಅದಾಗಿಯೂ ರಾಘು ಜೋಗಿನ್ ಹಾಗೂ ಸುಭಾನಿ ಜಾಂಗಳೆ ಅವರು ಪಕ್ಕಿರಪ್ಪ ಅವರನ್ನು ಬಿಡಲಿಲ್ಲ. ಅಲ್ಲಿದ್ದ ಬಡಿಗೆ ತೆಗೆದುಕೊಂಡು ಥಳಿಸಿದರು. ನೋವಿನಿಂದ ಬಳಲಿದ ಪಕ್ಕಿರಪ್ಪ ಅವರು ಹಳಿಯಾಳ ಪೊಲೀಸ್ ಠಾಣೆಗೆ ಹೋಗಿ ಅಳಲು ತೋಡಿಕೊಂಡರು. ಪೊಲೀಸರು ಹೊಡೆದಾಟ ನಡೆಸಿದ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿಕೊಂಡರು.