ಯಲ್ಲಾಪುರ ವಿಧಾನಸಭಾ ಕ್ಷೇತ್ರ ಶಾಸಕ ಶಿವರಾಮ ಹೆಬ್ಬಾರ್ ಅವರು ಸೋಮವಾರ ವಿಧಾನ ಪರಿಷತ್ ಸದಸ್ಯ ಶಾಂತರಾಮ ಸಿದ್ದಿ ಅವರನ್ನು ಕೂರಿಸಿಕೊಂಡು ಪೊಲೀಸ್ ಜೀಪು ಏರಿದರು. ಕೆಲ ನಿಮಿಷಗಳ ಕಾಲ ಶಿವರಾಮ ಹೆಬ್ಬಾರ್ ಅವರು ಆ ಜೀಪು ಓಡಿಸಿದರು.
ರಾಜಕೀಯಕ್ಕೆ ಬರುವ ಮೊದಲು ಲಾರಿ ಚಾಲಕರಾಗಿದ್ದ ಶಿವರಾಮ ಹೆಬ್ಬಾರ್ ಅವರು ವಾಹನ ಚಾಲಕನೆಯಲ್ಲಿ ಪರಿಣಿತರು. ನೆರೆ ಪ್ರವಾಹದ ಅವಧಿಯಲ್ಲಿ ಅವರು ಕೆಎಸ್‌ಆರ್‌ಟಿಸಿ ಬಸ್ಸು ಹತ್ತಿ, ಚಾಲಕರಿಗೆ ಧೈರ್ಯ ಹೇಳಿದ್ದರು. ಸಾರಿಗೆ ನಿಗಮದ ಅಧ್ಯಕ್ಷರಾಗಿದ್ದ ಅವಧಿಯಲ್ಲಿಯೂ ವಾಹನ ಚಾಲನೆ ಮಾಡಿದ್ದರು. ಶಿರಸಿಯಲ್ಲಿ ಈಚೆಗೆ ಆಂಬುಲೆನ್ಸ ಓಡಿಸಿಯೂ ಸುದ್ದಿಯಾಗಿದ್ದರು.
ಗ್ರಾಮೀಣ ಪ್ರದೇಶದ ಓಡಾಟ ಹಾಗೂ ಪೊಲೀಸರ ಅನುಕೂಲಕ್ಕೆ ಬುಲೇರೋ ಜೀಪ್ ಅನುಕೂಲ. ಈ ಬಗ್ಗೆ ಅರಿತ ಶಿವರಾಮ ಹೆಬ್ಬಾರ್ ತಮ್ಮ ಶಾಸಕರ ಅನುದಾನದ ಅಡಿ ಪೊಲೀಸರ ಅನುಕೂಲಕ್ಕೆ ಹೊಸದಾಗಿ ಬುಲೆರೋ ಕೊಡಿಸಿದ್ದಾರೆ. ಆ ಬುಲೆರೋ ವಾಹನ ಹಸ್ತಾಂತರ ಈ ದಿನ ಕಿರವತ್ತಿಯಲ್ಲಿ ನಡೆದಿದ್ದು, ಸ್ವತಃ ಶಿವರಾಮ ಹೆಬ್ಬಾರ್ ಆ ಜೀಪು ಓಡಿಸಿ ಹಸ್ತಾಂತರ ಕಾರ್ಯಕ್ರಮವನ್ನು ಪೂರ್ಣಗೊಳಿಸಿದರು.
ಇನ್ನೂ ವಿಧಾನ ಪರಿಷತ್ ಸದಸ್ಯ ಶಾಂತರಾಮ ಸಿದ್ದಿ ಅವರು ಸಹ ತಮ್ಮ ಅನುದಾನದ ಅಡಿ ಪೊಲೀಸರ ಅನುಕೂಲಕ್ಕೆ ಈ ಹಿಂದೆಯೇ ವಾಹನವೊಂದನ್ನು ನೀಡಿದ್ದಾರೆ. ಪೊಲೀಸ್ ಅಧೀಕ್ಷಕ ಎಂ ನಾರಾಯಣ ಅವರು ಇದನ್ನು ಸ್ಮರಿಸಿದ್ದು, ಶಿವರಾಮ ಹೆಬ್ಬಾರ್ ಅವರು ಜೀಪು ಓಡಿಸುವಾಗ ಶಾಂತರಾಮ ಸಿದ್ದಿ ಅವರು ಅದನ್ನು ಏರಿದರು. ಇಬ್ಬರು ಶಾಸಕರು ಕೆಲಕಾಲ ಪೊಲೀಸ್ ಜೀಪ್ ಓಡಾಟ ನಡೆಸಿ, ನಂತರ ಮೂಲಸ್ಥಾನದಲ್ಲಿಯೇ ಆ ವಾಹನ ನಿಲ್ಲಿಸಿದರು.
ಇದಕ್ಕೂ ಮುನ್ನ ಶಿವರಾಮ ಹೆಬ್ಬಾರ್ ಅವರು ತಮ್ಮ ತಾಯಿ ಕಾವೇರಿ ಅವರ ಹೆಸರಿನಲ್ಲಿ ಹಲಸಿನ ಗಿಡ ನೆಟ್ಟರು. ಪೊಲೀಸ್ ಅಧೀಕ್ಷಕ ಎಂ ನಾರಾಯಣ ಅವರು ಗಿಡ ನೆಟ್ಟು ನೀರೆರದರು.