ಮನೆ ಮನೆಗೂ ಕುಡಿಯುವ ನೀರು ಪೂರೈಸುವ ಜಲ ಜೀವನ ಯೋಜನೆಯನ್ನು ಕೇಂದ್ರ ಸರ್ಕಾರದ ಕೊಡುಗೆ ಇದ್ದರೂ ಅದರ ಉದ್ಘಾಟನೆ ಕಾರ್ಯಕ್ರಮಕ್ಕೆ ಸಂಸದರಿಗೆ ಆಮಂತ್ರಣವಿಲ್ಲ!
ಸೋಮವಾರ ಯಲ್ಲಾಪುರ ತಾಲೂಕಿನ ಆನಗೋಡು ಗ್ರಾ ಪಂ ವ್ಯಾಪ್ತಿಯ ದೇವಸ ಹಾಗೂ ಕಣ್ಣಿಗೇರಿ ಗ್ರಾ ಪಂ ವ್ಯಾಪ್ತಿಯ ಹಿಟ್ಟಿನಬೈಲಿನಲ್ಲಿ ಜಲಜೀವನ ಯೋಜನೆಯ ಲೋಕಾರ್ಪಣೆ ನಡೆಯಿತು. ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಆದರೆ, ಕೇಂದ್ರದ ಕಾರ್ಯಕ್ರಮವಾಗಿದ್ದರೂ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಬಂದಿರಲಿಲ್ಲ. ಕಾರಣ ಅವರಿಗೆ ಈ ವಿಷಯವೇ ಗೊತ್ತಿರಲಿಲ್ಲ!
ಜಲ ಜೀವನ ಯೋಜನೆಗೆ ಕೇಂದ್ರ ಸರ್ಕಾರ ಶೇ 60ರಷ್ಟು ಅನುದಾನ ನೀಡುತ್ತದೆ. ರಾಜ್ಯ ಸರ್ಕಾರ ಉಳಿದ ಶೇ 40ರಷ್ಟು ಹಣ ವಿನಿಯೋಗಿಸುತ್ತದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಯೋಗದಲ್ಲಿ ಈ ಯೋಜನೆ ಅನುಷ್ಠಾನವಾಗುವುದರಿಂದ ಸಂಸದರು ಹಾಗೂ ಶಾಸಕರನ್ನು ಉದ್ಘಾಟನೆಗೆ ಕರೆಯಿಸಬೇಕಾಗಿರುವುದು ಅಧಿಕಾರಿಗಳ ಕರ್ತವ್ಯ. ಆದರೆ, ಅಧಿಕಾರಿಗಳು ಈ ವಿಷಯದಲ್ಲಿ ಶಿಷ್ಟಾಚಾರ ಪಾಲಿಸದೇ ಕರ್ತವ್ಯಲೋಪ ಎಸಗಿದ್ದಾರೆ.
ಜಲ ಜೀವನ ಯೋಜನೆಯ ಆಮಂತ್ರಣ ಪತ್ರಿಕೆಯಲ್ಲಿ ಅಧಿಕಾರಿಗಳು ವಿಶ್ವೇಶ್ವರ ಹೆಗಡೆ ಅವರ ಹೆಸರು ನಮೂದಿಸಿದ್ದಾರೆ. ಆದರೆ, ಆಮಂತ್ರಣವನ್ನು ಅವರಿಗೆ ತಲುಪಿಸಲಿಲ್ಲ. ಕಾರ್ಯಕ್ರಮಕ್ಕೆ ಆಗಮಿಸುವಂತೆ ಸೌಜನ್ಯಕ್ಕೂ ಕರೆದಿಲ್ಲ. ಹೀಗಾಗಿ ಆಮಂತ್ರಣ ಪತ್ರಿಕೆಯಲ್ಲಿ ಹೆಸರು ಮುದ್ರಿಸಿರುವ ಬಗ್ಗೆ ಕಾಗೇರಿ ಅವರಿಗೂ ಗೊತ್ತಾಗಿಲ್ಲ. `ನಿಮ್ಮ ಹೆಸರಿದ್ದರೂ ಏಕೆ ಬರಲಿಲ್ಲ?’ ಎಂದು ಕೆಲವರು ಸಂಸದರನ್ನು ಪ್ರಶ್ನಿಸಿದಾಗ `ಜಲ ಜೀವನ ಕಾರ್ಯಕ್ರಮ ಉದ್ಘಾಟನೆ ಮುಗಿದೋಯ್ತ?’ ಎಂದು ಅವರು ಪ್ರಶ್ನಿಸಿದ್ದಾರೆ. ಅದಾದ ನಂತರ ವಿಚಾರಣೆ ನಡೆಸಿದಾಗ ಸಂಸದರಾಗಿದ್ದರೂ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಆಮಂತ್ರಣವೇ ಇಲ್ಲದಿರುವುದು ಗೊತ್ತಾಗಿದೆ.
`ಅಧಿಕಾರಿಗಳ ಈ ನಡೆ ಬೇಸರ ತಂದಿದೆ. ಶಿಷ್ಟಾಚಾರ ಪಾಲನೆ ಮಾಡದೇ ಸಂಸದರಿಗೆ ಅವಮಾನ ಮಾಡುತ್ತಿರುವುದು ಖಂಡನೀಯ’ ಎಂದು ಬಿಜೆಪಿ ಮಂಡಳ ಅಧ್ಯಕ್ಷ ಪ್ರಸಾದ ಹೆಗಡೆ ಹೇಳಿದ್ದಾರೆ. `ಅಧಿಕಾರಿಗಳ ಈ ನಡೆಯನ್ನು ವಿರೋಧಿಸುವೆ’ ಎಂದು ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ ಪ್ರತಿಕ್ರಿಯಿಸಿದ್ದಾರೆ.
ಜಲ ಜೀವನ: ವಿರೋಧಿ ಬಣದಿಂದ ಸನ್ಮಾನ!
ಜಲ ಜೀವನ ಯೋಜನೆ ಉದ್ಘಾಟನೆಗಾಗಿ ದೇವಸಕ್ಕೆ ಆಗಮಿಸಿದ ಶಾಸಕ ಶಿವರಾಮ ಹೆಬ್ಬಾರ್ ಅವರಿಗೆ ಗ್ರಾ ಪಂ ಸದಸ್ಯ ಕೆ ಟಿ ಹೆಗಡೆ ಸನ್ಮಾನಿಸಿದ್ದಾರೆ. ಕೆ ಟಿ ಹೆಗಡೆ ಅವರು ಬಿಜೆಪಿ ಬೆಂಬಲಿತರಾಗಿದ್ದು, ಕೆ ಟಿ ಹೆಗಡೆ ದೇವಸ ಪ್ರದೇಶವನ್ನು ಪ್ರತಿನಿಧಿಸುತ್ತಾರೆ. ಅವರು ಶಿವರಾಮ ಹೆಬ್ಬಾರ್ ಅವರ ವಿರುದ್ಧ ಮುನಿಸಿಕೊಂಡಿದ್ದರು. ಈ ದಿನ ಆ ಮುನಿಸು ಮರೆತು ನೀರು ಕೊಡುವ ಯೋಜನೆಯಲ್ಲಿ ಅವರಿಬ್ಬರು ಜೊತೆಯಾದರು.