`ಇಲಿ, ಕೋಳಿ, ಮೊಟ್ಟೆ, ಕಪ್ಪೆ ತಿಂದು ಬದುಕಬೇಕಿದ್ದ ನಾಗರ ಹಾವು ಅದ್ಯಾವುದು ಸಿಗದ ಕಾರಣ ತರಾತುರಿಯಲ್ಲಿ ಅಡುಗೆ ಮನೆಯಲ್ಲಿದ್ದ ಚಾಕು ನುಂಗಿದೆ. ಹೊಟ್ಟೆಗೆ ಹೋದ ಚಾಕುವನ್ನು ಅರಗಿಸಿಕೊಳ್ಳಲಿಕ್ಕಾಗದೇ ಸಾವು-ಬದುಕಿನ ಹೋರಾಟ ನಡೆಸಿದ್ದ ಆ ಹಾವನ್ನು ಉರಗ ತಜ್ಞರು ರಕ್ಷಿಸಿದ್ದಾರೆ.
ಸೋಮವಾರ ಇಲಿಯೊಂದನ್ನು ಬೆನ್ನಟ್ಟಿ ಬಂದ ನಾಗರ ಹಾವು ಕುಮಟಾ ಹೆಗಡೆಯಲ್ಲಿರುವ ಗೋವಿಂದ ನಾಯ್ಕ ಅವರ ಅಡುಗೆ ಮನೆಗೆ ನುಗ್ಗಿದೆ. ಅಕ್ಕಿ ಚೀಲದ ಹಿಂದೆ ಇಲಿ ತಪ್ಪಿಸಿಕೊಂಡಿದ್ದು, ಹಸಿವಿನಲ್ಲಿದ್ದ ಹಾವು ಅಡುಗೆ ಮನೆ ಗೋಡೆಯಿಂದ ನೆಲಕ್ಕೆ ಬಿದ್ದಿದ್ದ ಚಾಕುವನ್ನು ಕಬಳಿಸಿದೆ. ಅಡುಗೆ ಮನೆಯಲ್ಲಿ ವಿಶ್ರಾಂತ ಸ್ಥಿತಿಯಲ್ಲಿದ್ದ ಹಾವನ್ನು ನೋಡಿದ ಗೋವಿಂದ ನಾಯ್ಕರ ಕುಟುಂಬ ಬೆಚ್ಚಿ ಬಿದ್ದು, ಬೊಬ್ಬೆ ಹೊಡೆದರೂ ಹಾವು ಕದಲಲಿಲ್ಲ.
ಹಾವು ಮನೆಗೆ ಬಂದಿರುವ ಬಗ್ಗೆ ಉರಗ ತಜ್ಞ ಪವನ್ ನಾಯ್ಕ ಅವರಿಗೆ ಅಲ್ಲಿನವರು ವಿಷಯ ಮುಟ್ಟಿಸಿದ್ದಾರೆ. ಹಾವನ್ನು ಪರಿಶೀಲಿಸಿದ ಪವನ್ ನಾಯ್ಕ ಅವರಿಗೆ ಹೊಟ್ಟೆಯೊಳಗೆ ವಸ್ತುವಿರುವುದು ಗೊತ್ತಾಗಿದೆ. ಅಷ್ಟರೊಳಗೆ ಮನೆಯಲ್ಲಿದ್ದ ಚಾಕು ಕಣ್ಮರೆಯಾದ ವಿಷಯವೂ ಗೊತ್ತಾಗಿದ್ದು, ಪವನ್ ನಾಯ್ಕ ಅವರು ಪಶು ತಜ್ಞರಿಗೆ ಫೋನ್ ಮಾಡಿದರು. ಪಶು ತಜ್ಞ ಅದೈತ ಭಟ್ ಅಲ್ಲಿಗೆ ಆಗಮಿಸಿದ ನಂತರ ಅವರಿಬ್ಬರೂ ಸೇರಿ ಹಾವಿನ ಹೊಟ್ಟೆಯಲ್ಲಿದ್ದ ಚಾಕು ಹೊರತೆಗೆದರು.
1 ಅಡಿ 2 ಇಂಜು ಉದ್ದದ ಚಾಕು ಹೊಟ್ಟೆಯಿಂದ ಹೊರ ಬಂದ ತರುವಾಯ ಹಾವು ಅಲ್ಲಿಂದ ಕದಲಿತು. `ಚಾಕು ಹೊಟ್ಟೆಯಲ್ಲಿಯೇ ಇದ್ದರೆ ಹಾವು ಸಾಯುವ ಸಾಧ್ಯತೆ ಇತ್ತು. ಹೀಗಾಗಿ ಅರ್ದ ತಾಸು ಗುದ್ದಾಡಿ ಚಾಕು ಹೊರ ತೆಗೆಯಲಾಗಿದೆ’ ಎಂದು ತಜ್ಞರು ವಿವರಿಸಿದರು. ಆ ಹಾವನ್ನು ಸದ್ಯ ಕಾಡಿಗೆ ಬಿಡಲಾಗಿದೆ.