ಬೆಂಗಳೂರಿನಲ್ಲಿ ನಡೆದ ಆರ್‌ಸಿಬಿ ವಿಜಯೋತ್ಸವದ ವೇಳೆ ಕಾಲ್ತುಳಿತಕ್ಕೆ ಒಳಗಾಗಿ ಮೃತಪಟ್ಟ ಸಿದ್ಧಾಪುರದ ಅಕ್ಷತಾ ಅವರ ಕುಟುಂಬಕ್ಕೆ ಸರ್ಕಾರ 25 ಲಕ್ಷ ರೂ ಪರಿಹಾರ ನೀಡಿದೆ. ಶಿರಸಿ-ಸಿದ್ದಾಪುರ ಕ್ಷೇತ್ರ ಶಾಸಕ ಭೀಮಣ್ಣ ನಾಯ್ಕ ಈ ಪರಿಹಾರದ ಚೆಕ್ ವಿತರಿಸಿದ್ದಾರೆ.
ಅದಾದ ನಂತರ ಮಾಧ್ಯಮದವರ ಜೊತೆ ಮಾತನಾಡಿದ ಭೀಮಣ್ಣ ನಾಯ್ಕ ಅವರು `ಕುಂಬಮೇಳದಲ್ಲಿ ನಡೆದ ಕಾಲ್ತುಳಿತ ಹಾಗೂ ಕಾಶ್ಮೀರದಲ್ಲಿನ ಭಯೋತ್ಪಾದನಾ ದಾಳಿಯ ವೇಳೆ ಪ್ರಧಾನಿ ನರೇಂದ್ರ ಮೋದಿ ರಾಜಿನಾಮೆ ಕೊಡಬೇಕು ಎಂದು ನಾವು ಕೇಳಿಲ್ಲ. ಹೀಗಾಗಿ ಬೆಂಗಳೂರಿನಲ್ಲಿ ಆರ್‌ಸಿಬಿ ವಿಜಯೋತ್ಸವದ ವೇಳೆ ಆದ ದುರಂತಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ರಾಜೀನಾಮೆ ಕೇಳುವುದು ಸರಿಯಲ್ಲ’ ಎಂದು ಶಿರಸಿ-ಸಿದ್ದಾಪುರ ಶಾಸಕ ಭೀಮಣ್ಣ ನಾಯ್ಕ ಹೇಳಿದ್ದಾರೆ.
`ಕುಂಬಮೇಳದ ಅವಧಿಯಲ್ಲಿ ಸಹ ಕಾಲ್ತುಳಿತ ನಡೆದಿತ್ತು. ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿ ಆಗಿತ್ತು. ಅದರಂತೆ ಬೆಂಗಳೂರಿನಲ್ಲಿ ಸಹ ದುರಂತ ನಡೆದಿದೆ. ಇದಕ್ಕೆ ಸರ್ಕಾರವೇ ಕಾರಣ ಎನ್ನಲು ಆಗುವುದಿಲ್ಲ. ಬೆಂಗಳೂರಿನಲ್ಲಿ ಆರ್‌ಸಿಬಿ ವಿಜಯೋತ್ಸವದ ವೇಳೆ ನಡೆದ ಕಾಲ್ತುಳಿತ ಹಾಗೂ ಸಾವು-ನೋವುಗಳಿಗೆ ಕಾರ್ಯಕ್ರಮ ಆಯೋಜಕರು ಕಾರಣ’ ಎಂದು ಭೀಮಣ್ಣ ನಾಯ್ಕ ಅವರು ಹೇಳಿದ್ದಾರೆ. `ರಾಜೀನಾಮೆ ಕೇಳುವ ಮೊದಲು ಆ ಸಮಯ-ಸನ್ನಿವೇಶ ಅರ್ಥ ಮಾಡಿಕೊಳ್ಳಬೇಕು’ ಎಂದು ಅವರು ಸಲಹೆ ನೀಡಿದರು.
`ಆರ್‌ಸಿಬಿ ಪಂದ್ಯಾವಳಿಗೆ ಪೂರ್ವ ನಿಯೋಜಿತ ಸಿದ್ಧತೆ ಇರಲಿಲ್ಲ. ತರಾತುರಿಯಲ್ಲಿ ಕಾರ್ಯಕ್ರಮ ನಡೆಸಲಾಗಿದ್ದು, ಕಾರ್ಯಕ್ರಮ ಚನ್ನಾಗಿಯೇ ನಡೆದಿದೆ. ಅದಾದ ನಂತರ ದಿಢೀರ್ ಮಳೆ ಬಂದ ಕಾರಣ ನುಕೂನುಗ್ಗಲು ಉಂಟಾಗಿ ಕಾಲ್ತುಳಿತ ನಡೆದಿದೆ. ಈ ಪರಿಹಾರದ ಹಣದಿಂದ ಮೃತರ ಕುಟುಂಬಸ್ಥರ ದುಃಖವನ್ನು ಭರಿಸಲು ಸಾಧ್ಯವಿಲ್ಲ. ಅದಾಗಿಯೂ, ಪಂದ್ಯಾವಳಿ ಮೂಲಕ ನೂರಾರು ಕೋಟಿ ಹಣ ಮಾಡಿದವರು ಸಂತ್ರಸ್ತರ ಸಹಾಯಕ್ಕೆ ಬರಬೇಕು. ಕ್ಲಬ್ಬಿನವರು ಹೆಚ್ಚಿನ ಪರಿಹಾರ ನೀಡಬೇಕು’ ಎಂದು ಅವರು ಆಗ್ರಹಿಸಿದರು.
ಕಾಲ್ತುಳಿತ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಗಳನ್ನು ಬಲಿಪಶು ಮಾಡಿದ ವಿಷಯವಾಗಿ ಪ್ರತಿಕ್ರಿಯಿಸಿದ ಅವರು `ಈ ವಿಷಯ ಮುಖ್ಯಮಂತ್ರಿ ಹಾಗೂ ಗೃಹಮಂತ್ರಿಗಳಿಗೆ ಬಿಟ್ಟಿದ್ದು’ ಎಂದು ಹೇಳಿದರು. ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ, ಸಂತ್ರಸ್ತ `ಕುಟುಂಬಸ್ಥರಿಗೆ ಯಾವುದೇ ನೆರವಿನ ಅಗತ್ಯವಿದ್ದಲ್ಲಿ ಜಿಲ್ಲಾಡಳಿತದ ಮೂಲಕ ಒದಗಿಸಲಾಗುವುದು’ ಎಂದರು. ಸಿದ್ದಾಪುರ ಪಟ್ಟಣ ಪಂಚಾಯತ ಅಧ್ಯಕ್ಷೆ ಚಂದ್ರಕಲಾ ನಾಯ್ಕ, ಉಪಾಧ್ಯಕ್ಷ ವಿನಯ ಹೊನ್ನೆಗುಂಡಿ, ಸ್ಥಾಯಿ ಸಮಿತಿ ಅಧ್ಯಕ್ಷ ವಿಜೇಂದ್ರ ಗೌಡರ್, ಉಪವಿಭಾಗಾಧಿಕಾರಿ ಕಾವ್ಯಾರಾಣಿ ಕೆ.ವಿ., ತಹಸೀಲ್ದಾರ್ ಎಂ.ಆರ್.ಕುಲಕರ್ಣಿ ಮತ್ತಿತರರು ಉಪಸ್ಥಿತರಿದ್ದರು.