ಕುಮಟಾ ಗ್ರಾಮೀಣ ಭಾಗದಲ್ಲಿ 10 ಗುಂಟೆ ಭೂಮಿಗೆ 10.50 ಲಕ್ಷ ರೂ ಕೊಟ್ಟು ಖರೀದಿ ಮಾತುಕಥೆ ನಡೆಸಿದ ದುರ್ಗಯ್ಯ ಖಾರ್ವಿ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರ ಕುಟುಂಬದವರು ಸಹ ಜೀವಭಯದಿಂದ ನಲುಗಿದ್ದಾರೆ.
ಕುಮಟಾ ಬಳಿಯ ಕೋಳಿ ಮಂಜಗುಣಿಯಲ್ಲಿ ವಾಸವಾಗಿದ್ದ ದುರ್ಗಯ್ಯ ಖಾರ್ವಿ ಬೋಟಿಯಲ್ಲಿ ಕೆಲಸಕ್ಕಿದ್ದರು. ತಮ್ಮ ಬಳಿಯಿರುವ ಹಣವನ್ನು ಹೂಡಿಕೆ ಮಾಡಿ ಅವರು ಭೂಮಿ ಖರೀದಿಸಲು ಚಿಂತಿಸಿದ್ದರು. ಇದಕ್ಕಾಗಿ ಅದೇ ಊರಿನಲ್ಲಿದ್ದ ರಾಜು ಪಡ್ತಿ ಅವರ ಭೂಮಿಯ ಬಗ್ಗೆ ವಿಚಾರಿಸಿದ್ದರು. 10 ಗುಂಟೆ ಭೂಮಿಗೆ 10.50 ಲಕ್ಷ ರೂ ಕೊಟ್ಟು ಖರೀದಿಸುವ ಮಾತುಕಥೆ ಮುಗಿಸಿದ್ದರು. 5.5 ಲಕ್ಷ ರೂ ಮುಂಗಡ ಹಣವನ್ನು ನೀಡಿದ್ದರು.
ಮುಂಗಡ ನೀಡಿದ ಕಾರಣ ಆ ಭೂಮಿಯಲ್ಲಿದ್ದ ಮನೆಯಲ್ಲಿ ದುರ್ಗಯ್ಯ ಖಾರ್ವಿ ವಾಸಿಸಲು ಶುರು ಮಾಡಿದ್ದರು. ತಮ್ಮ ಪತ್ನಿ ಬೇಬಿ, ಮಗ ಮಣಿಕಂಠ ಖಾರ್ವಿ ಜೊತೆ ಹೊಸ ಭೂಮಿಯಲ್ಲಿ ಹೊಸ ಜೀವನ ಕಟ್ಟಿಕೊಳ್ಳುತ್ತಿದ್ದರು. ಉಳಿದ ಹಣ ಹೊಂದಿಸಿ ಕೊಡುವ ಬಗ್ಗೆ ಅವರು ಓಡಾಟ ನಡೆಸುತ್ತಿದ್ದು, ಭೂ ಮಾಲಕ ರಾಜು ಪಡ್ತಿ ಅವರ ಪತ್ನಿ ಕುಸುಮಾ ಪಡ್ತಿ ಬೇಗ ಹಣ ಕೊಡುವಂತೆ ಪೀಡಿಸಿದ್ದರು.
ಜೂ 8ರ ರಾತ್ರಿ ಪತ್ನಿ ಕುಸುಮಾ ಪಡ್ತಿ ಜೊತೆ ಮತ್ತೆ ಆರು ಜನರನ್ನು ಕರೆದುಕೊಂಡು ಬಂದ ರಾಜು ಪಡ್ತಿ ಅವರು `ಈಗಲೇ ಹಣ ಕೊಡಬೇಕು’ ಎಂದು ತಾಕೀತು ಮಾಡಿದರು. ಹಣ ಕೊಡಲು ಸಮಯ ಕೇಳಿದ ಕಾರಣ ಮನೆ ಮುಂದೆ ನಿಲ್ಲಿಸಿದ್ದ ಮಣಿಕಂಠ ಖಾರ್ವಿ ಅವರ ಬೈಕು ದೂಡಿದರು. ಜೊತೆಗೆ ಬಂದಿದ್ದ ದಿನಕರ ಪಡ್ತಿ, ಶಿವಾನಂದ ಪಡ್ತಿ, ದತ್ತ ಪಡ್ತಿ, ಮಹಾದೇವ ಪಡ್ತಿ, ಹನುಮಂತ ಪಡ್ತಿ ಹಾಗೂ ರಾಘು ಪಡ್ತಿ ಎಲ್ಲರೂ ಸೇರಿ ದುರ್ಗಯ್ಯ ಖಾರ್ವಿ ಅವರ ವಾಸದ ಮನೆ ಮುಂದೆ ದಾಂದಲೆ ನಡೆಸಿದರು.
ಜೊತೆಗೆ `ಕಾಸು ಕೊಡದಿದ್ದರೆ ಬಿಡುವುದಿಲ್ಲ’ ಎಂದು ಬೆದರಿಕೆಯನ್ನು ಒಡ್ಡಿದರು. ಇದರಿಂದ ಹೆದರಿದ ದುರ್ಗಯ್ಯ ಖಾರ್ವಿ ಗೋಕರ್ಣಕ್ಕೆ ತೆರಳಿ ಪೊಲೀಸ್ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಎಎಸ್‌ಐ ಯಲ್ಲಪ್ಪ ಕಾಗೇವಾಡ ತನಿಖೆ ನಡೆಸುತ್ತಿದ್ದಾರೆ.