ಯಲ್ಲಾಪುರದ ಚಿಕ್ಕಮಾವಳ್ಳಿ ಬಳಿ ಭಾನುವಾರ ಬೈಕಿಗೆ ಕಾರು ಗುದ್ದಿದ್ದು, ಇಬ್ಬರು ಸಾವನಪ್ಪಿದ್ದಾರೆ.
ಹುಬ್ಬಳ್ಳಿ ನೇಕಾರನಗರದ ರಾಮು ಗುಜಲೂರು (17) ಹಾಗೂ ವಿಷ್ಣು ಗುಜಲೂರು (16) ಎಂಬಾತರ ಬಳಿ ಬೈಕ್ ಓಡಿಸಲು ಲೈಸೆನ್ಸ್ ಇರಲಿಲ್ಲ. ಅದಾಗಿಯೂ ಹೊಸದಾದ ಟಿವಿಎಸ್ ಬೈಕ್ ಖರೀದಿಸಿದ್ದರು. ಆ ಬೈಕಿನ ಮೂಲಕ ಭಾನುವಾರ ಯಲ್ಲಾಪುರದ ಕಡೆ ಹೊರಟಿದ್ದ ಅವರು ಪಾತ್ರೆ ವ್ಯಾಪಾರ ನಡೆಸಿ ಹೊಸದಾಗಿ ಬದುಕು ಕಟ್ಟಿಕೊಳ್ಳುವುದಕ್ಕಾಗಿ ಚಿಂತಿಸಿದ್ದರು.
ಮಧ್ಯಾಹ್ನ 2ಗಂಟೆ ಆಸುಪಾಸಿಗೆ ಚಿಕ್ಕಮಾವಳ್ಳಿಯ ಇಂಡಿಯಾ ಗೇಟ್ ಹೊಟೇಲ್ ಎದುರು ಅವರ ಬೈಕಿಗೆ ಕಾರು ಡಿಕ್ಕಿಯಾಯಿತು. ಪರಿಣಾಮ ಬೈಕಿನ ಮೇಲಿದ್ದ ಇಬ್ಬರು ನೆಲಕ್ಕೆ ಬಿದ್ದರು. ಅಪಘಾತದ ಬಗ್ಗೆ ಅರಿವಾದರೂ ಕಾರಿನ ಚಾಲಕ ತನ್ನ ವಾಹನ ನಿಲ್ಲಿಸಲಿಲ್ಲ. ಗಾಯಗೊಂಡ ಇಬ್ಬರು ಹೊರಳಾಡುತ್ತಿದ್ದರೂ ಅವರ ರಕ್ಷಣೆಗೆ ಬರಲಿಲ್ಲ.
ಇನ್ನಷ್ಟು ವೇಗವಾಗಿ ಕಾರು ಚಾಲಕ ಅಲ್ಲಿಂದ ಪರಾರಿಯಾಗಿದ್ದು, ಅಪಘಾತದ ಬಗ್ಗೆ ಪೊಲೀಸರಿಗೆ ಸಹ ಮಾಹಿತಿ ನೀಡಲಿಲ್ಲ. ಹೀಗಾಗಿ ಪಾತ್ರೆ ವ್ಯಾಪಾರಕ್ಕೆ ಬರುತ್ತಿದ್ದ ರಾಮು ಗುಜಲೂರು ಹಾಗೂ ವಿಷ್ಣು ಗುಜಲೂರು ಕೊನೆ ಉಸಿರೆಳೆದರು. ಅಪಘಾತದ ವಿಷಯ ಅರಿತ ಕಲಘಟಗಿಯ ಪಾತ್ರೆ ವ್ಯಾಪಾರಿ ರಮೇಶ ಶಿಂಗೇರಿ ಸ್ಥಳಕ್ಕೆ ಬಂದು ಅವರಿಬ್ಬರ ಸಾವನ್ನು ಖಚಿತಪಡಿಸಿಕೊಂಡರು.
ಕಾರು ಚಾಲಕನ ದುಡುಕುತನದ ಬಗ್ಗೆ ಅವರು ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದರು. ಪ್ರಕರಣ ದಾಖಲಿಸಿಕೊಂಡ ಪಿಐ ರಮೇಶ ಹಾನಾಪುರ ಅವರು ಅಪರಿಚಿತ ಕಾರು ಚಾಲಕನ ಹುಡುಕಾಟ ನಡೆಸಿದ್ದಾರೆ.