ಭೂ ಕುಸಿತ ಹಾಗೂ ಮನೆ ಕುಸಿತದ ಆತಂಕದ ಹಿನ್ನಲೆ ಯಲ್ಲಾಪುರ ತಾಲೂಕಿನ ಸಾವಿರಕ್ಕೂ ಅಧಿಕ ಜನರಿಗೆ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರವಾಗುವoತೆ ತಾಲೂಕು ಆಡಳಿತ ನೋಟಿಸ್ ನೀಡಿದೆ. ಮಳೆ ಜೋರಾದ ಅವಧಿಯಲ್ಲಿ ಅವರೆಲ್ಲರೂ ಸಂಬoಧಿಕರ ಮನೆಯಲ್ಲಿ ಆಶ್ರಯಪಡೆಯಲು ಸಿದ್ಧತೆ ನಡೆಸಿದ್ದಾರೆ.
ಯಲ್ಲಾಪುರ ತಾಲೂಕಿನ 18 ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಒಟ್ಟು ಶಿಥಿಲಗೊಂಡ 152 ಮಣ್ಣಿನ ಮನೆಗಳಿವೆ. ಆ ಮನೆಗಳೆಲ್ಲವೂ ಮಳೆಗಾಲದ ಅವಧಿಯಲ್ಲಿ ಅಪಾಯ ಎದುರಾಗುವ ಸಾಧ್ಯತೆ ಹೆಚ್ಚಿದೆ. ಕೆಲವಡೆ ಹಳೆಯ ಮನೆಗಳನ್ನು ಈಚೆಗೆ ನವೀಕರಿಸಲಾಗಿದ್ದು, ಕೆಲ ಮನೆಗಳು ಶಿಥಿಲಗೊಂಡಿದ್ದರೂ ಹೊರಗಡೆಯಿಂದ ಅದು ಗೊತ್ತಾಗುತ್ತಿಲ್ಲ. ಹೀಗಾಗಿ ಅಪಾಯದ ಅಂಚಿನಲ್ಲಿರುವ ಅಂಥ ಮನೆಗಳ ಲೆಕ್ಕ ಇಲ್ಲಿಲ್ಲ.
ಸರ್ಕಾರದ ಅಧಿಕೃತ ಮಾಹಿತಿ ಪ್ರಕಾರ, ಯಲ್ಲಾಪುರ ತಾಲೂಕಿನ 115 ಮನೆಗಳ ಮೇಲೆ ಭೂ ಕುಸಿತದ ಸಾಧ್ಯತೆಗಳಿವೆ. ಆ ಮನೆಗಳು ಘಟ್ಟಿಮುಟ್ಟಾಗಿದದರೂ ಅವು ಅಪಾಯದ ಪ್ರದೇಶದಲ್ಲಿರುವ ಕಾರಣ ಮಳೆಗಾಲದ ಆತಂಕ ಎದುರಾಗಿದೆ. 152 ಮಣ್ಣಿನ ಮನೆ ಹಾಗೂ 115 ಭೂ ಕುಸಿತ ಪ್ರದೇಶದಲ್ಲಿರುವ ಮನೆ ಸೇರಿ ಒಟ್ಟು 267 ಮನೆಗಳಿಗೆ ಕಂದಾಯ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ.
ಗುಡ್ಡ ಕುಸಿತ ಪ್ರದೇಶಗಳು ಎಷ್ಟು?
ತಜ್ಞರ ಅಧ್ಯಯನದ ಪ್ರಕಾರ ಆನಗೋಡು ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ 2 ಕಡೆ ಗುಡ್ಡ ಕುಸಿತದ ಸಾಧ್ಯತೆಯಿದೆ. ದೆಹಳ್ಳಿಯಲ್ಲಿ 3, ಕಣ್ಣಿಗೇರಿ ಹಾಗೂ ಇಡಗುಂದಿಯಲ್ಲಿ 8, ವಜ್ರಳ್ಳಿಯಲ್ಲಿ 16 ಅರಬೈಲ್ ವ್ಯಾಪ್ತಿಯಲ್ಲಿ 14 ಕಡೆ ಗುಡ್ಡ ಕುಸಿತದ ಆತಂಕ ಎದುರಾಗಿದೆ. ಕಳಚೆ ಒಂದೇ ಊರಿನಲ್ಲಿ 61 ಕಡೆ ಗುಡ್ಡ ಕುಸಿತ ಸಾಧ್ಯತೆಯ ಬಗ್ಗೆ ಅಂದಾಜಿಸಲಾಗಿದೆ. ಇದರೊಂದಿಗೆ ಮಾವಿನಮನೆ ಗ್ರಾಮ ಪಂಚಾಯತದಲ್ಲಿ 2 ಹಾಗೂ ನಂದೂಳ್ಳಿ ಭಾಗದಲ್ಲಿ ಒಂದು ಕಡೆ ಗುಡ್ಡ ಕುಸಿತದ ಅಪಾಯವಿದೆ.
ಕಾಳಜಿ ಕೇಂದ್ರಕ್ಕೂ ಆತಂಕ
ಮಳೆ ಜೋರಾದರೆ ಸರ್ಕಾರಿ ಶಾಲೆಗಳನ್ನು ಕಾಳಜಿ ಕೇಂದ್ರವನ್ನಾಗಿ ಪರಿವರ್ತಿಸಲಾಗುತ್ತದೆ. ಆದರೆ, ಸಾಕಷ್ಟು ಮಣ್ಣಿನ ಗೋಡೆಯ ಶಾಲೆಗಳಿವೆ. ಜೊತೆಗೆ ಗುಡ್ಡದ ತಪ್ಪಲಿನಲ್ಲಿರುವ ಶಾಲೆಗಳೇ ಅಧಿಕ ಪ್ರಮಾಣದಲ್ಲಿರುವುದರಿಂದ ಆ ಶಾಲೆಗಳು ಆತಂಕ ಎದುರಿಸುತ್ತಿವೆ. ಜೊತೆಗೆ ಮಳೆಗಾಲದ ಅವಧಿಯಲ್ಲಿ ಶಾಲೆಗಳಲ್ಲಿ ಶುಚಿತ್ವ ಕೊರತೆ, ಗಾಳಿ-ಬೆಳಕಿನ ಸಮಸ್ಯೆ, ವಿದ್ಯುತ್ ದೀಪ ಬೆಳಗದಿರುವಿಕೆಯೊಂದಿಗೆ ವಿಪರೀತ ಸೊಳ್ಳೆಕಾಟವೂ ಸಂತ್ರಸ್ತರಿಗೆ ತಲೆನೋವು ತರುತ್ತದೆ. ಹೀಗಾಗಿ ಸರ್ಕಾರ ನಿರ್ಮಿಸಿದ ಕಾಳಜಿ ಕೇಂದ್ರದ ಬದಲು ಅನೇಕರು ಸಂಬoಧಿಕರ ಮನೆಯಲ್ಲಿ ಆಶ್ರಯಪಡೆಯುತ್ತಾರೆ.
ಭೂ ಕುಸಿತ ಪ್ರದೇಶ ಎಂದು ಗುರುತಿಸಲಾದ ಆನಗೋಡು ವ್ಯಾಪ್ತಿಯ 2 ಮನೆ, ದೆಹಳ್ಳಿ ವ್ಯಾಪ್ತಿಯ 3 ಮನೆ, ಕಣ್ಣಿಗೇರಿ ಹಾಗೂ ಇಡಗುಂದಿಯಲ್ಲಿ 8 ಮನೆಗಳಿಗೆ ಸ್ಥಳಾಂತರವಾಗುವoತೆ ಕಂದಾಯ ಇಲಾಖೆ ಸೂಚನೆ ನೀಡಿದೆ. ವಜ್ರಳ್ಳಿಯ 16, ಅರಬೈಲಿನ 14, ಕಳಚೆಯ 61 ಮನೆಯವರಿಗೆ ನೋಟಿಸ್ ತಲುಪಿದೆ. ಮಾವಿನಮನೆ ವ್ಯಾಪ್ತಿಯ 2 ಹಾಗೂ ನಂದೂಳ್ಳಿಯ 1 ಮನೆಯವರಿಗೆ ಅಧಿಕಾರಿಗಳು ಸ್ಥಳಾಂತರದ ನೋಟಿಸ್ ಜಾರಿ ಮಾಡಿದ್ದಾರೆ. `ಮಳೆ ಬಂದ ನಂತರ ನೋಡೋಣ’ ಎಂದು ನೋಟಿಸ್‌ಪಡೆದವರು ಸದ್ಯ ಸುಮ್ಮನಿದ್ದಾರೆ.