ಬೆಂಗಳೂರು: ಬಿಡುಗಡೆಗೆ ಮುನ್ನವೇ ಆರು ಮರು ಮುದ್ರಣ ಕಂಡ `ಭಾವರಾಮಾಯಣ ರಾಮಾವತರಣ’ ಕೃತಿಯ ಲೋಕಾರ್ಪಣೆ ಜೂ 29ರಂದು ಹೊಸಕೆರೆಹಳ್ಳಿ ಪಿಇಎಸ್ ವಿವಿ ಕ್ಯಾಂಪಸ್ ಸಭಾಂಗಣದಲ್ಲಿ ನೆರವೇರಲಿದೆ.
`ಮೂಲ ವಾಲ್ಮೀಕಿ ರಾಮಾಯಣದ ಸಮಗ್ರ ಭಾವವನ್ನು ಸೆರೆ ಹಿಡಿಯುವ ಜತೆಗೆ ಅತ್ಯಂತ ಸರಳ ಭಾಷೆಯಲ್ಲಿ ರಾಮಾಯಣದ ಹೊಸ ಹೊಳಹುಗಳನ್ನು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಇದನ್ನು ಪರಿಚಯಿಸಿದ್ದಾರೆ. ಜನಸಾಮಾನ್ಯರು ರಾಮಾಯಣದ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ನಿಜ ಅರ್ಥದ ರಾಮರಾಜ್ಯ ಸ್ಥಾಪನೆಯಾಗಬೇಕು ಎನ್ನುವುದು ಕೃತಿಯ ಮೂಲ ಆಶಯ’ ಎಂದು ಹವ್ಯಕ ಮಹಾಮಂಡಲ ಅಧ್ಯಕ್ಷ ಮಹಾಮಂಡಳ ಅಧ್ಯಕ್ಷ ಮೋಹನ ಭಾಸ್ಕರ್ ಹೆಗಡೆ ಮತ್ತು ಸಾವಣ್ಣ ಪ್ರಕಾಶನ ಸಂಸ್ಥೆ ಮುಖ್ಯಸ್ಥ ಜಮೀಲ್ ಸಾವಣ್ಣ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
`ಜೀವನದುದ್ದಕ್ಕೂ ರಾಮಾಯಣ ಅನುಸಂಧಾನದಲ್ಲಿ ತೊಡಗಿರುವ ಪರಮಪೂಜ್ಯರ ಧಾರಾ ರಾಮಾಯಣ, ರಾಮಕಥೆಯಂಥ ಪ್ರವಚನ ಮಾಲಿಕೆಯ ಬಳಿಕ, ಇದೀಗ ಭಾವ ರಾಮಾಯಣ ಕೃತಿ ಸರಣಿ ಅಕ್ಷರಪ್ರೇಮಿಗಳಿಗೆ ರಾಮಾಯಣದ ಅಮರಕೋಶವಾಗಲಿದೆ. ವಾಲ್ಮೀಕಿ ರಾಮಾಯಣದ ಮೂಲಸ್ವರೂಪಕ್ಕೆ ಎಳ್ಳಷ್ಟೂ ಧಕ್ಕೆಯಾಗದಂತೆ, ಮಕ್ಕಳೂ ಅರ್ಥ ಮಾಡಿಕೊಳ್ಳುವಷ್ಟು ಸರಳ – ಸುಂದರ ನಿರೂಪಣೆ ಬೆರಗುಗೊಳಿಸುವಂತಿದೆ’ ಎಂದವರು ಹೇಳಿದರು. `ಸಾಹಿತ್ಯ ಅಭಿರುಚಿ ಕಡಿಮೆಯಾಗುತ್ತಿರುವ ಇಂದಿನ ಕಾಲಘಟ್ಟದಲ್ಲಿ ಕೃತಿ ಲೋಕಾರ್ಪಣೆಗೆ ಮುನ್ನವೇ ಆರು ಸಾವಿರ ಪ್ರತಿಗಳು ಮಾರಾಟವಾಗಿರುವುದು ದಾಖಲೆ’ ಎಂದರು.
`ಶನಿವಾರ ಸಂಜೆ 5 ಗಂಟೆಗೆ ನಡೆಯುವ ಲೋಕಾರ್ಪಣೆ ಸಮಾರಂಭದಲ್ಲಿ ಮಂತ್ರಾಲಯ ಮಠದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರು ಮತ್ತು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀಮಹಾಸ್ವಾಮೀಜಿಯವರು ಸಾನ್ನಿಧ್ಯ ವಹಿಸುವರು. ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಶಿವರಾಜ ಪಾಟೀಲ್ ಹಾಗೂ ಪಿಇಎಸ್ ವಿವಿ ಕುಲಾಧಿಪತಿ ಡಾ ಎಂಆರ್ ದೊರೆಸ್ವಾಮಿ ಭಾಗವಹಿಸುತ್ತಾರೆ. ನಾಡಿನ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ 108ಕ್ಕೂ ಹೆಚ್ಚು ಗಣ್ಯರು ಏಕಕಾಲದಲ್ಲಿ ಕೃತಿ ಲೋಕಾರ್ಪಣೆ ಮಾಡಲಿದ್ದಾರೆ’ ಎಂದರು.
ಕಾರ್ಯಕ್ರಮದಲ್ಲಿ ಕಲಾಸ್ನೇಹಿ ಮತ್ತು ನರ್ತನಯೋಗ ಸಂಸ್ಥೆಯ ನಿರ್ದೇಶಕರಾದ ಸ್ನೇಹಾ ನಾರಾಯಣ ಮತ್ತು ಯೋಗೀಶ್ ಕುಮಾರ್ ಅವರಿಂದ ಭರತನಾಟ್ಯ, ಶ್ರೀಸಂಸ್ಥಾನದವರೊoದಿಗೆ ಸಂವಾದ ನಡೆಯಲಿದೆ. ಲೇಖಕ ಜಗದೀಶ್ ಶರ್ಮಾ ಸಂಪ, ಶ್ರೀಮಠದ ಮಾಧ್ಯಮ ಶ್ರೀಸಂಯೋಜಕ ಉದಯಶಂಕರ ಭಟ್ ಮಿತ್ತೂರು, ವಿತ್ತಾಧಿಕಾರಿ ಜೆ.ಎಲ್.ಗಣೇಶ್, ರಾಮಾಶ್ರಮ ಸೇವಾ ಸಮಿತಿ ಅಧ್ಯಕ್ಷ ರಮೇಶ್ ಹೆಗಡೆ ಇದ್ದರು.
Discussion about this post