ಶಿರಸಿ: ಅರಣ್ಯ ಅತಿಕ್ರಮಣದಾರರ ಪರ ಹೋರಾಡುತ್ತಿರುವ ರವೀಂದ್ರ ನಾಯ್ಕರ ಮುಂದಾಳತ್ವದಲ್ಲಿ ನಡೆದ `ಅರಣ್ಯ ಅತಿಕ್ರಮಣದಾರರ ಸಭೆ’ಯಲ್ಲಿ ಅನೇಕರು ಅಧಿಕಾರಿಗಳ ವಿರುದ್ಧ ತಿರುಗಿಬಿದ್ದರು.
ಅರಣ್ಯ ಇಲಾಖೆಯ ಕೆಳ ಹಂತದ ಸಿಬ್ಬಂದಿ `ಬಡವರಿಗೆ ಒಂದು ನ್ಯಾಯ. ಶ್ರೀಮಂತರಿಗೆ ಒಂದು ನ್ಯಾಯ’ ಅನುಸರಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಾನೂನಿಗೆ ವ್ಯಕ್ತಿರಿಕ್ತವಾಗಿ ಅರಣ್ಯವಾಸಿಗಳ ವಿರುದ್ಧ ದೌರ್ಜನ್ಯ ಎಸಗುತ್ತಿರುವುದನ್ನು ದಾಖಲೆಗಳಸಹಿತ ಪ್ರಸ್ತುತಪಡಿಸಿದರು.
ಪ್ರಾಣಿಗಳ ಅಕ್ರಮ ಪ್ರವೇಶ:
`ವನ್ಯ ಪ್ರಾಣಿಗಳಾದ ಆನೆ, ಮಂಗಾ, ಕರಡಿ ಸಾಗುವಳಿ ಕ್ಷೇತ್ರಕ್ಕೆ ಅಕ್ರಮ ಪ್ರವೇಶ ಮಾಡಿ ಬೆಳೆ ನಷ್ಟ ಮಾಡುತ್ತಿದೆ. ಅರಣ್ಯವಾಸಿಗಳ ಮೇಲೆ ಪ್ರಾಣಿಗಳಿಂದ ಮಾರಣಾಂತಿಕ ಹಲ್ಲೆ ನಡೆಯುತ್ತಿದೆ. ಅರಣ್ಯ ಇಲಾಖೆ ಇದನ್ನು ನಿಯಂತ್ರಿಸಿಲ್ಲ’ ಎಂದು ಕಿಡಿಕಾರಿದರು. ಅರಣ್ಯವಾಸಿಗಳ ಸಮಸ್ಯೆ ಆಲಿಸಿದ ಅಧಿಕಾರಿಗಳು `ಅರಣ್ಯವಾಸಿಗಳಿಗೆ ಅರಣ್ಯ ಇಲಾಖೆಯಿಂದ ಅನ್ಯಾಯ ಆಗುವುದಿಲ್ಲ’ ಎಂಬ ಭರವಸೆ ನೀಡಿದರು.
ಶಿರಸಿ ವಿಭಾಗದ ಉಪ ಸಂರಕ್ಷಣಾಧಿಕಾರಿ ಅಜ್ಜಯ್ಯ, ದಾಂಡೇಲಿ ಕಾಳಿ ಹುಲಿ ಯೋಜನೆ ಅಧಿಕಾರಿ ನಿಲೇಶ ಕುಮಾರ ಮತ್ತು ತನಿಖಾ ತಂಡದ ಉಪ ಸಂರಕ್ಷಣಾಧಿಕಾರಿ ಅಜೀಜ್ ಸಭೆಯಲ್ಲಿದ್ದು ಸಮಸ್ಯೆ ಆಲಿಸಿದರು. `ಅರಣ್ಯ ಹಕ್ಕು ಕಾಯ್ದೆ ಅಡಿಯಲ್ಲಿ ಅರ್ಜಿಸಲ್ಲಿಸಿದ ಜಿ.ಪಿ.ಎಸ್ ಮಾನದಂಡದ ಅಡಿಯಲ್ಲಿ ಸಾಗುವಳಿಗೆಗೆ ಆತಂಕ ಮಾಡುವುದಿಲ್ಲ. ಅರ್ಜಿ ಸಲ್ಲಿಸಿದವರ ಮೇಲೆ ವಿನಾಕಾರಣ ಭೂಕಬಳಿಕೆ ನಿಷೇಧ ಕಾಯ್ದೆ ಬೆಂಗಳೂರಿನ ವಿಶೇಷ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸುವುದನ್ನ ನಿಯಂತ್ರಿಸಲಾಗುತ್ತದೆ. ಒಕ್ಕಲೇಬ್ಬಿಸುವ ಪ್ರಕ್ರಿಯೆ ಮೂಲಕ ನೋಟಿಸ್ ನೀಡುವುದನ್ನು ಪರೀಶಿಲಿಸಿ ಕ್ರಮ ತೆಗೆದುಕೊಳ್ಳುತ್ತೇವೆ’ ಎಂಬ ಆಶ್ವಾಸನೆ ನೀಡಿದರು.
ಹೋರಾಟಗಾರರ ವೇದಿಕೆಯ ಪದಾಧಿಕಾರಿಗಳಾದ ಪ್ರಧಾನ ಸಂಚಾಲಕ ಜೆ.ಎಮ್ ಶೆಟ್ಟಿ ಅಚವೆ, ವಿವಿಧ ತಾಲೂಕು ಅಧ್ಯಕ್ಷರುಗಳಾದ ರಮಾನಂದ ನಾಯ್ಕ, ಭೀಮ್‌ಶಿ ವಾಲ್ಮೀಕಿ, ಶಿವಾನಂದ ಜೋಗಿ, ಮಂಜುನಾಥ ಮರಾಠಿ, ಹರಿಹರ ನಾಯ್ಕ, ಓಮಂಕಾರ, ಬಾಲಚಂದ್ರ ಶೆಟ್ಟಿ, ಸಂತೋಷ ಗಾವಡಾ, ಜಗದೀಶ ಶೆಟ್ಟಿ ಮುಂಡಗೋಡ್, ಮಂಜುನಾಥ ನಾಯ, ಮಹೇಶ ನಾಯ್ಕ ಸಾಲ್ಕೋಡ, ಟಿಪ್ಪು ನಾಯ್ಕ ಮೊದಲಾದವರು ಭಾಗವಹಿಸಿ ತಮ್ಮ ಭಾಗದ ಸಮಸ್ಯೆಗಳನ್ನು ಬಿಚ್ಚಿಟ್ಟರು.
Discussion about this post