ಯಲ್ಲಾಪುರದ ಕಿರವತ್ತಿಯ ಸರ್ಕಾರಿ ಶಾಲೆಗೆ ಈಗಲೂ ಕಟ್ಟಿಗೆ ಕಂಬದ ಮೂಲಕ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ. ಸುರಕ್ಷತೆಗೆ ಆದ್ಯತೆ ನೀಡಬೇಕಾದ ಹೆಸ್ಕಾಂ ಸಿಮೆಂಟ್ ಕಂಬ ಅಳವಡಿಸಲು ಕಾಸು ಕೇಳುತ್ತಿದೆ.
ಕಿರವತ್ತಿ ಅರಣ್ಯನಾಕಾ ಆವಾರದಲ್ಲಿ ಸರ್ಕಾರಿ ಶಾಲೆಯಿದೆ. ಈ ಶಾಲೆಯಲ್ಲಿ 1ರಿಂದ 5ನೇ ತರಗತಿ ಕಲಿಯುವ 16 ಮಕ್ಕಳಿದ್ದಾರೆ. ಇಬ್ಬರು ಶಿಕ್ಷಕರು ಅವರಿಗೆ ಪಾಠ ಮಾಡುತ್ತಿದ್ದು, ಅಪಾಯದ ಬಗ್ಗೆ ಅವರು ಪತ್ರ ಬರೆದು ಸುಸ್ತಾಗಿದ್ದಾರೆ. ಅದಾಗಿಯೂ ಹೆಸ್ಕಾಂ ಮಾತ್ರ ಮಕ್ಕಳ ಸುರಕ್ಷತೆ ಬಗ್ಗೆ ಕಿಂಚಿತ್ತು ತಲೆಕೆಡಿಸಿಕೊಂಡಿಲ್ಲ!
ದಶಕಗಳ ಹಿಂದೆಯೇ ಎಲ್ಲಾ ಕಡೆ ಸಿಮೆಂಟ್ ಕಂಬ ಅಳವಡಿಸಿ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ. ಆದರೆ, ಸರ್ಕಾರಿ ಶಾಲೆಯ ಅಭಿವೃದ್ಧಿ ಹಾಗೂ ಮಕ್ಕಳ ಸುರಕ್ಷತೆ ಬಗ್ಗೆ ಮಾತ್ರ ಸರ್ಕಾರ ಗಮನಹರಿಸಿಲ್ಲ. ಈ ಬಗ್ಗೆ ಶಿಕ್ಷಣ ಇಲಾಖೆ ಅಧಿಕೃತ ಪತ್ರದ ಮೂಲಕ ಮನವಿ ಮಾಡಿದರೂ ಹೆಸ್ಕಾಂ ಮಾತ್ರ ಸಿಮೆಂಟ್ ವಿದ್ಯುತ್ ಕಂಬ ಅಳವಡಿಕೆಗೆ ಆಸಕ್ತಿವಹಿಸಿಲ್ಲ.
ಸದ್ಯ ಆ ಎರಡು ವಿದ್ಯುತ್ ಕಂಬಗಳು ಶಾಲೆಯ ಆಟದ ಮೈದಾನದಲ್ಲಿವೆ. ಜೋಲುತ್ತಿರುವ ಸರ್ವೀಸ್ ವಿದ್ಯುತ್ ತಂತಿಗಳ ಮೇಲೆ ಮಂಗಗಳು ನಡೆದಾಡುತ್ತವೆ. ಅಳವಡಿಸಲಾಗಿದ್ದ ಮರದ ಕಂಬ ಸಹ ಟೊಳ್ಳಾಗಿದ್ದು, ವಿದ್ಯುತ್ ತಂತಿ ತುಂಡಾಗಿ ನೆಲಕ್ಕೆ ಬಿದ್ದರೆ ಮಕ್ಕಳ ಜೀವಕ್ಕೆ ಅಪಾಯವಿದೆ. ಹೀಗಾಗಿ ಶಾಲೆಯ ಮುಖ್ಯಾಧ್ಯಾಪಕಿ ಮೀಲಾ ಬೋರ್ಕಿಸ್ ಅನೇಕ ಬಾರಿ ಕಂಬ ಬದಲಿಸುವಂತೆ ಪತ್ರ ಬರೆದಿದ್ದಾರೆ. ಶಿಕ್ಷಣ ಇಲಾಖೆ ಸಹ ಹೆಸ್ಕಾಂ ಬಳಿ ಸಾಕಷ್ಟು ಸಲ ಮನವಿ ಮಾಡಿದೆ. ಆದರೆ, ಶಿಕ್ಷಣ ಇಲಾಖೆ ಹಾಗೂ ಹೆಸ್ಕಾಂ ನಡುವೆ ಪತ್ರ ಸಮರ ನಡೆಯುತ್ತಿದ್ದು, ಬದಲಿ ಕಂಬದ ವ್ಯವಸ್ಥೆ ಮಾತ್ರ ಆಗಿಲ್ಲ.
ಸೋಮವಾರ ಶಾಸಕ ಶಿವರಾಮ ಹೆಬ್ಬಾರ್ ಅವರ ಸೂಚನೆ ಮೇರೆಗೆ ಈ ಶಾಲೆಗೆ ಹೆಸ್ಕಾಂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಆ ಎರಡು ಕಂಬ ವೀಕ್ಷಣೆಗೆ ಐದಾರು ಬಾರಿ ಹೆಸ್ಕಾಂ ಅಧಿಕಾರಿಗಳು ಕಾರಿನಲ್ಲಿ ಬಂದು ಹೋಗಿದ್ದಾರೆ. ಆ ವೇಳೆ ಕಂಬ ಬದಲಿಸಿಕೊಡುವುದಾಗಿ ಭರವಸೆ ನೀಡಿದ್ದ ಅಧಿಕಾರಿಗಳು ನಂತರ ತಮ್ಮ ವರಸೆ ಬದಲಿಸಿದ್ದಾರೆ. `ಎರಡು ಕಂಬ ಬದಲಿಸುತ್ತೇವೆ. ಒಂದು ಕಂಬಕ್ಕಾದರೂ ಕಾಸಾದರೂ ಕೊಡಿ’ ಎಂದು ದುಂಬಾಲು ಬಿದ್ದಿದ್ದಾರೆ. `ನಾವಾದರೂ ಎಲ್ಲಿಂದ ಕಾಸು ಕೂಡಿಸುವುದು?’ ಎನ್ನುತ್ತ ಅಲ್ಲಿನ ಶಿಕ್ಷಕರು ಅಸಹಾಯಕತೆ ತೋಡಿಕೊಂಡಿದ್ದಾರೆ. `ಐದಾರು ಬಾರಿ ಕಾರಿನಲ್ಲಿ ಬಂದು ಪರಿಶೀಲಿಸಿದ ವೆಚ್ಚವೇ ಅಧಿಕವಾಗಿದೆ. ಅಧಿಕಾರಿಗಳ ಕಾರು ಓಡಾಟಕ್ಕಿಂತಲೂ ಕಡಿಮೆ ಕರ್ಚಿನಲ್ಲಿ ಕಂಬ ಬದಲಿಸುವ ಸಾಧ್ಯತೆಯಿದ್ದರೂ ಅದನ್ನು ಹೆಸ್ಕಾಂ ಮಾಡಿಲ್ಲ’
`ಮಕ್ಕಳ ಜೀವಕ್ಕೆ ಅಪಾಯ ಆದಾಗ ಪರಿಹಾರ ಕೊಡಲು ಹೆಸ್ಕಾಂ ಬಳಿ ಕಾಸಿದೆ. ಅವಘಡ ಆಗುವ ಮುನ್ನ ಬದಲಿ ವ್ಯವಸ್ಥೆ ಮಾಡಲು ಕಾಸಿಲ್ಲ’ ಎಂದು ಆ ಭಾಗದ ಜನ ಅಸಮಧಾನವ್ಯಕ್ತಪಡಿಸಿದರು. `ಮರದ ಕಂಬ ಬದಲಿಸುವಂತೆ ಹೆಸ್ಕಾಂ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಮತ್ತೊಮ್ಮೆ ಈ ಬಗ್ಗೆ ನೆನಪಿಸುವೆ’ ಎಂದು ಶಿಕ್ಷಣಾಧಿಕಾರಿ ಎನ್ ಆರ್ ಹೆಗಡೆ ಪ್ರತಿಕ್ರಿಯಿಸಿದರು.