ದಾoಡೇಲಿಯಲ್ಲಿ ಗ್ಯಾರಂಟಿ ಸಮಿತಿ ಅಧ್ಯಕ್ಷ ಹಾಗೂ ಸದಸ್ಯರು ಸೇರಿ ಯೋಜನೆ ಯಶಸ್ಸಿಗೆ ಶ್ರಮಿಸುತ್ತಿದ್ದಾರೆ. ಒಂದೇ ದಿನ ಎರಡು ಕಡೆ ಸಭೆ ನಡೆಸಿದ ಸಮಿತಿಯವರು ಫಲಾನುಭವಿಗಳ ಮನೆಗೆ ತೆರಳಿ ಸಮಸ್ಯೆ ಆಲಿಸಿದ್ದಾರೆ.
ಸೋಮವಾರ ದಾಂಡೇಲಿಯ ಕೋಗಿಲ್ಬನ ಪಂಚಾಯತ ವ್ಯಾಪ್ತಿಯಲ್ಲಿ ಗ್ಯಾರಂಟಿ ಸಮಿತಿ ಸಭೆ ನಡೆಯಿತು. ಅದಾದ ನಂತರ ಅಂಬಿಕಾ ನಗರದಲ್ಲಿ ಪಂಚಾಯತ ಮಟ್ಟದ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಈ ಸಭೆಯಲ್ಲಿ ಅನೇಕರು ತಮ್ಮ ಸಮಸ್ಯೆ ಹೇಳಿಕೊಂಡರು. ಸಭೆ ಮುಗಿದ ತರುವಾಯ ಸಮಿತಿ ಸದಸ್ಯರು ನೇರವಾಗಿ ಫಲಾನುಭವಿಗಳ ಮನೆಗೆ ಭೇಟಿ ನೀಡಿದರು.
ಗ್ಯಾರಂಟಿ ಸಮಿತಿ ತಾಲೂಕು ಅಧ್ಯಕ್ಷ ರಿಯಾಜ್ ಸಯ್ಯದ್ ಅವರು ಕುಂದು-ಕೊರತೆಗಳಿಗೆ ಪರಿಹಾರ ಒದಗಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಸದಸ್ಯರಾದ ಅಶೋಕ್ ನಾಯ್ಕ, ವೀರೇಶ್ ದಾವಳ, ರವಿ ಚಟ್ಲಾ, ರಮೇಶ್ ಶೆಟ್ನವರ, ದೇವೇಂದ್ರ ಹನುಮಶೆಟ್ಟರ್, ವೀಟೋ ಜಾನ್ನು, ಸಿದಾರಾಜ ಗಜಗುಳ ಶೆಟ್ಟರ್ ಹಾಗೂ ಜಿಲ್ಲಾ ಸದಸ್ಯ ಅನಿಲ ದಂಗಲ್ ಫಲಾನುಭವಿಗಳ ಬಳಿ ಸಂವಾದ ನಡೆಸಿದರು.
ಗೃಹಲಕ್ಷ್ಮಿ ಹಣ ಬಾರದಿರುವಿಕೆ, ಉಚಿತ ವಿದ್ಯುತ್ ಬಿಲ್ ಸಮಸ್ಯೆ ಸೇರಿ ವಿವಿಧ ವಿಷಯಗಳ ಕುರಿತು ಚರ್ಚೆ ನಡೆಯಿತು. ಸಮಿತಿ ಸದಸ್ಯರು ಸ್ಥಳದಲ್ಲಿಯೇ ಆ ಸಮಸ್ಯೆ ಬಗೆಹರಿಸಿದರು. ಇದರಿಂದ ಗೃಹಲಕ್ಷ್ಮಿ ಫಲಾನುಭವಿಗಳು ಸಂತಸವ್ಯಕ್ತಪಡಿಸಿದರು. `ಜನರ ಸಮಸ್ಯೆ ಆಲಿಸಲು ನಿರಂತರ ಸಭೆ ಆಯೋಜಿಸಲಾಗುತ್ತಿದೆ. ಫಲಾನುಭವಿಗಳು ನೇರವಾಗಿ ಸಮಸ್ಯೆ ವಿವರಿಸಬಹುದು’ ಎಂದು ಗ್ಯಾರಂಟಿ ಸಮಿತಿ ಅಧ್ಯಕ್ಷ ರಿಯಾಜ್ ಸಯ್ಯದ್ ಹೇಳಿದರು.