`ಐಕಾನ್ಸ್ ಆಪ್ ಇಂಡಿಯನ್ ಬಿಜಿನೆಸ್ ಮ್ಯಾಗಜೀನ್’ ಕೊಡುವ `ಅತ್ಯುತ್ತಮ ಉದ್ಯಮಿ’ ಪ್ರಶಸ್ತಿಗೆ ಪರ್ಲ್ ಮಡ್ ಕನ್ಸ್ಟ್ರಕ್ಷನ್ ಸಂಸ್ಥೆಯ ಸ್ಥಾಪಕ ವಿನಾಯಕ ಕುಮಟಾಕರ ಆಯ್ಕೆಯಾಗಿದ್ದು, ವಿಶೇಷ ನಿರ್ಮಾಣ ವಿಭಾಗದಲ್ಲಿನ ಸಾಧನೆಗಾಗಿ ಅವರು ಗೌರವ ಸ್ವೀಕರಿಸಿದ್ದಾರೆ.
ಪರಿಸರ ಸ್ನೇಹಿ, ಶಾಶ್ವತ ಹಾಗೂ ಸ್ಥಳೀಯ ಸಮುದಾಯಗಳನ್ನು ಬೆಂಬಲಿಸುವ ಕಟ್ಟಡ ತಂತ್ರಜ್ಞಾನಗಳ ಅಭ್ಯುದಯದಲ್ಲಿ ಸಂಸ್ಥೆಯ ಮಹತ್ವಪೂರ್ಣ ಪಾತ್ರವನ್ನು ಗುರುತಿಸಿ ಅವರಿಗೆ ಈ ಪ್ರಶಸ್ತಿ ನೀಡಲಾಗಿದೆ. ಸಂಸ್ಥೆ 2013 ರಲ್ಲಿ ಆರಂಭಗೊ0ಡಿದ್ದು ಕರ್ನಾಟಕ ಮತ್ತು ಗೋವಾದ ಕರಾವಳಿ ಭಾಗಗಳಲ್ಲಿ ನೈಸರ್ಗಿಕ ವಸ್ತುಗಳಿಂದ ಕಟ್ಟಡ ನಿರ್ಮಿಸುತ್ತದೆ. ಕಡಿಮೆ ವೆಚ್ಚದ, ವೇಗದ ಮತ್ತು ಆರೋಗ್ಯಪೂರ್ಣ ಮನೆ, ರೇಸಾರ್ಟ್, ಕಾಟೇಜ್, ರೆಸ್ಟೋರೆಂಟ್ ನಿರ್ಮಿಸಲು ಈ ಸಂಸ್ಥೆ ಪ್ರಮುಖ ಪಾತ್ರ ವಹಿಸಿದೆ. ಈ ದಿಕ್ಕಿನಲ್ಲಿ ದಶಕಕ್ಕಿಂತ ಹೆಚ್ಚು ಸಮಯದಿಂದ ಶ್ರಮಿಸುತ್ತಿದೆ.
ಈ ಪ್ರಶಸ್ತಿ ಬಗ್ಗೆ ಸಂತೋಷ ವ್ಯಕ್ತಪಡಿಸಿದ ವಿನಾಯಕ ಕುಮಟಾಕರ ಅವರು `ಈ ಗೌರವವು ನನಗಷ್ಟೇ ಅಲ್ಲ. ಇದು ನಮ್ಮ ತಂಡದ ಶ್ರಮ’ ಎಂದು ಪ್ರತಿಕ್ರಿಯಿಸಿದ್ದಾರೆ. `ನಾವು ನಿರ್ಮಿಸುವ ಪ್ರತಿಯೊಂದು ಕಟ್ಟಡ ಪ್ರಕೃತಿಯೊಂದಿಗೆ ಸಂಪರ್ಕ ಹೊಂದಿದ್ದು, ಸಮುದಾಯ, ಪ್ರಕೃತಿ ಮತ್ತು ಗ್ರಾಹಕ ಸ್ನೇಹಿ ಗುಣಗಳನ್ನು ಉತ್ತೇಜಿಸುತ್ತದೆ’ ಎಂದವರು ವಿವರಿಸಿದ್ದಾರೆ.