ಭಟ್ಕಳದಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಲ್ಲಿಗೆ ಕೊಟ್ಟೆಗೆಯೊಂದು ಬೆಂಕಿಗೆ ಆಹುತಿಯಾಗಿದೆ. ತಾಲೂಕಿನಲ್ಲಿ ಗುಡುಗುಸಹಿತ ಮಳೆಯಾಗುತ್ತಿದ್ದು, ಸಿಡಿಲಿನ ಅಬ್ಬರಕ್ಕೆ ಕೊಟ್ಟಿಗೆ ಅಗ್ನಿ ಅವಘಡಕ್ಕೆ ತುತ್ತಾಗಿದೆ.
ಬುಧವಾರ ರಾತ್ರಿಯಿಡಿ ಭಟ್ಕಳ ಹಾಗೂ ಸುತ್ತಲಿನ ಭಾಗದಲ್ಲಿ ಮಳೆಯಾಗಿದೆ. ಈ ವೇಳೆ ಸಿಡಿಲು ಬಡಿದಿದ್ದು, ಬೆಳಕೆ ಕಟಗೇರಿಯಲ್ಲಿನ ಜಾನುವಾರು ಕೊಟ್ಟಿಗೆಗೆ ಬೆಂಕಿ ಬಿದ್ದಿದೆ. ಬೆಳೆಕೆಯ ಪೂಜಾರಿಮನೆಯ ವೆಂಕಟೇಶ ದುರ್ಗಪ್ಪ ನಾಯ್ಕ ಅವರು ಇದರಿಂದ ನಷ್ಟ ಅನುಭವಿಸಿದ್ದಾರೆ. ಕೊಟ್ಟಿಗೆಯಲ್ಲಿ ಸಂಗ್ರಹಿಸಿಟ್ಟಿದ್ದ ಒಣ ಹುಲ್ಲುಗಳೆಲ್ಲವೂ ಹೊತ್ತಿ ಉರಿದಿದೆ.
ಹೊರಗಡೆ ಮಳೆ ಆಗುತ್ತಿದ್ದರೂ ಕೊಟ್ಟಿಗೆಯ ಮೇಲ್ಚಾವಣಿಯಿದ್ದ ಪರಿಣಾಮ ಬೆಂಕಿ ಆರಿಸಲು ಮಳೆ ನೀರು ಸಿಕ್ಕಿಲ್ಲ. ಕೊಟ್ಟಿಗೆ ಅಂಚಿಗೆ ಸಿಡಿಲು ಬಡಿದು ಅಲ್ಲಿ ಹುಟ್ಟಿದ ಬೆಂಕಿ ಒಳ ಮೈ ಪೂರ್ತಿಯಾಗಿ ಆವರಿಸಿತು. ಪರಿಣಾಮ ಹುಲ್ಲಿನ ಜೊತೆ ಮೇಲ್ಚಾವಣಿಯ ಕಟ್ಟಿಗೆಯ ಪಕಾಸು-ಹಂಚುಗಳು ಸುಟ್ಟು ಹೋದವು.
ಬೆಂಕಿ ಬಿದ್ದಿರುವುದನ್ನು ಅರಿತ ಗೋವುಗಳು ಕೂಗಲು ಶುರು ಮಾಡಿದವು. ಆಗ, ಕುಟುಂಬದವರು ಕೊಟ್ಟಿಗೆಯಲ್ಲಿದ್ದ ಜಾನುವಾರುಗಳ ರಕ್ಷಣೆ ಮಾಡಿದರು. ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ಆರಿಸಿದರು. ಅಗ್ನಿಶಾಮಕ ಠಾಣಾಧಿಕಾರಿ ಮಹಮದ ಶಫಿ ಮೊಘಲ, ಸಿಬ್ಬಂದಿ ಉಮೇಶ, ನವೀನ್ ಕುಮಾರ, ಶಿವಪ್ರಸಾದ, ಮಾನಸ ಸಿಂಹ, ಸೋಮನಾಥ ನಾಯ್ಕ, ಹನುಮಂತ ನವಲಗನ್ನ ಕಾರ್ಯಾಚರಣೆಯಲ್ಲಿದ್ದರು.