ಕಾಲೇಜು ವಿದ್ಯಾರ್ಥಿಗಳನ್ನು ಕರೆತರುತ್ತಿದ್ದ ಬಸ್ಸು ಶಿರಸಿ-ಯಲ್ಲಾಪುರ ರಸ್ತೆಯಲ್ಲಿ ಪಲ್ಟಿಯಾಗಿದೆ. ಪರಿಣಾಮ ಬಸ್ಸಿನಲ್ಲಿದ್ದ 8 ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.
ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನ ವಿದ್ಯಾರ್ಥಿಗಳು ಉತ್ತರ ಕನ್ನಡ ಪ್ರವಾಸಕ್ಕೆ ಬಂದಿದ್ದರು. ಜೂನ್ 12ರ ನಸುಕಿನ 4 ಗಂಟೆಗೆ ಅವರು ಶಿರಸಿ-ಯಲ್ಲಾಪುರ ಮಾರ್ಗದಲ್ಲಿ ಸಂಚರಿಸುತ್ತಿದ್ದರು. ಯಲ್ಲಾಪುರದ ಬೇಡ್ತಿ ತಿರುವಿನಲ್ಲಿ ಬಸ್ಸು ವಿದ್ಯುತ್ ಕಂಬಕ್ಕೆ ಡಿಕ್ಕಿಯಾಯಿತು. ಪರಿಣಾಮ ಚಿಕ್ಕಮಗಳೂರಿನ ಚಾಲಕ ಮಧುಸೂಧನ ಅವರಿಗೆ ಬಸ್ಸಿನ ಮೇಲಿದ್ದ ನಿಯಂತ್ರಣ ತಪ್ಪಿತು. ಆ ಬಸ್ಸು ಪಲ್ಟಿಯಾಯಿತು.
ಈ ವೇಳೆ ಕಾಲೇಜು ಮಕ್ಕಳು ನಿದ್ರೆಯ ಮಂಪರಿನಲ್ಲಿದ್ದರು. ಬಸ್ಸಿನಲ್ಲಿ 39 ಪ್ರಯಾಣಿಕರಿದ್ದರು. ಏಕಾಏಕಿ ಬಸ್ಸು ಪಲ್ಟಿಯಾಗಿದ್ದರಿಂದ ಶಿವಮೊಗ್ಗದ ಭೂಮಿಕಾ ಅವರು ಕೈ ಮುರಿದುಕೊಂಡರು. ಶಿಕಾರಿಪುರ, ಹೊಸನಗರ ಹಾಗೂ ಸೊರಬದ ಸುರಭಿ, ಸಿಂಚನಾ, ಅನಂತ, ಆಂಜಿನೇಯ, ಚಂದನ, ಚಂದ್ರಶೇಖರ, ಪ್ರಶಾಂತ ಎಂಬ ವಿದ್ಯಾರ್ಥಿಗಳು ಗಾಯಗೊಂಡರು.
ಆ ವಿದ್ಯಾರ್ಥಿಗಳೆಲ್ಲರೂ ದಾಂಡೇಲಿ ಪ್ರವಾಸಕ್ಕೆ ಹೋಗಲು ನಿರ್ಧರಿಸಿದ್ದರು. ಬಸ್ ಅಪಘಾತದ ಪರಿಣಾಮ ತಮ್ಮ ಪ್ರಯಾಣವನ್ನು ಮೊಟಕುಗೊಳಿಸಿದರು. ಅಡ್ಡ ಬಿದ್ದಿದ್ದ ಬಸ್ಸನ್ನು ಕ್ರೇನ್ ಬಳಸಿ ಮೇಲೆತ್ತಲಾಗಿದೆ. ಗಾಯಗೊಂಡವರು ಆಸ್ಪತ್ರೆಗೆ ಸೇರಿದ್ದಾರೆ. ಚಿಕ್ಕಮಗಳೂರಿನ ಮಧುಸೂಧನ ಎಂಬ ಚಾಲಕನ ದುಡುಕುತನದಿಂದ ಈ ಅಪಘಾತ ನಡೆದ ಬಗ್ಗೆ ಶಿವಮೊಗ್ಗ ಜಿಲ್ಲೆಯ ಸಹ್ಯಾದ್ರಿ ಕಾಲೇಜು ವಿದ್ಯಾರ್ಥಿ ಪವನ್ ಪೊಲೀಸ್ ದೂರು ನೀಡಿದ್ದಾರೆ.