33 ವರ್ಷದೊಳಗೆ 5 ಹೆಣ್ಣು ಮಕ್ಕಳನ್ನು ಹಡೆದಿದ್ದ ಯಲ್ಲಾಪುರದ ಪೂಜಾ ಮೊಹತೆ ಅವರು ಪತಿ ಸುನೀಲ ಮೊಹತೆ ಅವರ ಕಿರುಕುಳಕ್ಕೆ ಬೇಸತ್ತು ಕಳೆನಾಶಕ ಸೇವಿಸಿದ್ದು, ತವರುಮನೆಯವರು ಪೂಜಾ ಅವರನ್ನು ಹುಬ್ಬಳ್ಳಿ ಆಸ್ಪತ್ರೆಗೆ ದಾಖಲಿಸಿದರೂ ಅವರನ್ನು ಬದುಕಿಸಿಕೊಳ್ಳಲು ಸಾಧ್ಯವಾಗಿಲ್ಲ.
ಯಲ್ಲಾಪುರದ ಸಬಗೇರಿ ಬಳಿಯ ನಾರಾಯಣಪುರದಲ್ಲಿ ರೇಣುಕಾ ಜಾದವ್ ಹಾಗೂ ಬಂಡು ಜಾದವ್ ವಾಸವಾಗಿದ್ದರು. ಈ ದಂಪತಿ ತಮ್ಮ ಪುತ್ರಿ ಪೂಜಾ ಮೊಹತೆ ಅವರಿಗೆ 18ನೇ ವಯಸ್ಸಿನಲ್ಲಿ ಮದುವೆ ಮಾಡಿದ್ದರು. ಕಿರವತ್ತಿ ಜಯಂತ ನಗರದ ಸುನೀಲ ಮೊಹತೆ ಅವರು 15 ವರ್ಷಗಳ ಹಿಂದೆ ಪೂಜಾ ಅವರನ್ನು ವರಿಸಿದ್ದರು. ಸುನೀಲ ಮೊಹತೆ ಅವರು ಗಂಡು ಮಗುವಿಗೆ ಆಸೆ ಪಟ್ಟಿದ್ದು, ಪೂಜಾ ಅವರು ಪದೇ ಪದೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಒಟ್ಟು 5 ಹೆಣ್ಣು ಮಗುವಿಗೆ ಪೂಜಾ ಅವರು ಜನ್ಮ ನೀಡಿದ್ದರು.
ಹೀಗಾಗಿ ಪೂಜಾ ಮೊಹತೆ ಅವರ ವಿರುದ್ಧ ಸುನೀಲ ಮೊಹತೆ ಸಿಡಿದೆದ್ದಿದ್ದರು. `ನೀನು ಸತ್ತರೆ ನನಗೆ ಒಳ್ಳೆಯದು’ ಎಂದು ಹಿಯಾಳಿಸುತ್ತಿದ್ದರು. ಜೊತೆಗೆ ಪತ್ನಿ ಮೇಲೆ ದೈಹಿಕ ಹಲ್ಲೆಯನ್ನು ಮಾಡಿದ್ದರು. ನಿತ್ಯ ದೈಹಿಕ ಹಾಗೂ ಮಾನಸಿಕ ಹಿಂಸೆಗೆ ಒಳಗಾದ ಪೂಜಾ ಮೊಹತೆ ಅವರು ಜೂನ್ 8ರಂದು ಕಳೆನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದರು. ಈ ವಿಷಯ ಅರಿತ ಪಾಲಕರು ಪೂಜಾ ಅವರನ್ನು ಯಲ್ಲಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು.
ನಂತರ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಸಾಕಷ್ಟು ನರಳಾಟ ನಡೆಸಿದ ಪೂಜಾ ಮೊಹತೆ ಅವರು ಜೂ 11ರಂದು ಕೊನೆಉಸಿರೆಳೆದರು. ಮಗಳು ಅನುಭವಿಸಿದ ಹಿಂಸೆ ಅರಿತಿದ್ದ ರೇಣುಕಾ ಜಾದವ್ ಅವರು ಯಲ್ಲಾಪುರ ಪೊಲೀಸ್ ಠಾಣೆಗೆ ಆಗಮಿಸಿ ತಮಗಾದ ಅನ್ಯಾಯ ವಿವರಿಸಿದರು. ಪಿಎಸ್‌ಐ ಸಿದ್ದಪ್ಪ ಗುಡಿ ಅವರನ್ನು ಸಮಾಧಾನ ಮಾಡಿ, ಪ್ರಕರಣ ದಾಖಲಿಸಿಕೊಂಡರು.