ಕುಮಟಾದ ಸಂದೀಪ ಮಾಶಲೇಕರ್ ಹಾಗೂ ದತ್ತಾತ್ರೇಯ ನಾಯ್ಕ ಅವರ ನಡುವೆ ಹೊಡೆದಾಟ ನಡೆದಿದೆ. ಈ ಪ್ರಕರಣದಲ್ಲಿ ಮೂಗು ತೂರಿಸಿದ ಸುಬ್ರಹ್ಮಣ್ಯ ಉಡದಂಗಿ ವಿರುದ್ಧವೂ ಸಂದೀಪ ಮಾಶಲೇಕರ್ ದೂರು ನೀಡಿದ್ದಾರೆ.
ಕುಮಟಾದ ದೇವರಹಕ್ಕಲದಲ್ಲಿ ಸಂದೀಪ ಮಾಶಲೇಕರ್ ಕಾರ್ವಿಂಗ್ ಕೆಲಸ ಮಾಡಿಕೊಂಡಿದ್ದರು. ಜ 11ರಂದು ಅದೇ ಊರಿನಲ್ಲಿ ಅಂಗಡಿ ವ್ಯಾಪಾರ ನಡೆಸುವ ದತ್ತಾತ್ರೇಯ ನಾಯ್ಕ ಅವರು ಸಂದೀಪ ಅವರ ಕೆನ್ನೆಗೆ ಬಾರಿಸಿದರು. ಇದರಿಂದ ಇಬ್ಬರ ನಡುವೆ ಗಲಾಟೆ ನಡೆದಿದ್ದು, ಆ ವೇಳೆ ಗುಜುರಿಗಲ್ಲಿಯ ಸುಬ್ರಹ್ಮಣ್ಯ ಉಡದಂಗಿ ಅವರು ದತ್ತಾತ್ರೇಯ ನಾಯ್ಕ ಅವರ ಪರ ಮಾತನಾಡಿದರು.
ಹೀಗಾಗಿ ಅದೇ ದಿನ ಸಂದೀಪ ಅವರು ಕುಮಟಾ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದರು. ಪೊಲೀಸರು ನ್ಯಾಯಾಲಯದ ಅನುಮತಿ ತಂದರೆ ಮಾತ್ರ ಪ್ರಕರಣ ದಾಖಲಿಸುವುದಾಗಿ ಹೇಳಿದ್ದರಿಂದ ಸಂದೀಪ ಅವರು ನ್ಯಾಯಾಲಯಕ್ಕೆ ಹೋದರು. ತಮಗೆ ಆದ ಅನ್ಯಾಯದ ಬಗ್ಗೆ ನ್ಯಾಯಾಧೀಶರಿಗೆ ವಿವರಿಸಿದರು. ಜೀವ ಬೆದರಿಕೆ ಇರುವ ಬಗ್ಗೆಯೂ ಸಂದೀಪ್ ಅವರು ಅಳಲು ತೋಡಿಕೊಂಡರು. ನ್ಯಾಯಾಲಯದ ಸೂಚನೆ ಅನ್ವಯ ಕುಮಟಾ ಪೊಲೀಸರು ಈ ದಿನ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಭಟ್ಕಳ: ಕಣ್ಣು ಕಾಣದ ವೃದ್ಧೆ ನೀರುಪಾಲು!
ಭಟ್ಕಳದ ನಾಗಮ್ಮ ಮೊಗೇರ್ (85) ನೀರು ಪಾಲಾಗಿದ್ದು, ಬಂದರಿನಲ್ಲಿ ಅವರ ಶವ ಸಿಕ್ಕಿದೆ.
ಭಟ್ಕಳದ ಬೆಳ್ನಿ ಮಾವಿನಕೂರ್ವಾದಲ್ಲಿ ನಾಗಮ್ಮ ಮೊಗೇರ್ ವಾಸವಾಗಿದ್ದರು. ವಯಸ್ಸಾದ ಕಾರಣ ಅವರು ಮಾನಸಿಕವಾಗಿ ಕುಗ್ಗಿದ್ದರು. ಕಣ್ಣು ಸಹ ಕಾಣುತ್ತಿರಲಿಲ್ಲ. ಜೂ 11ರ ರಾತ್ರಿ ಮನೆಯಿಂದ ಹೊರ ಹೋದ ಅವರು ಮತ್ತೆ ಮರಳಲಿಲ್ಲ.
ಆ ದಿನ ರಾತ್ರಿ ಶರಾಬಿ ನದಿಯಲ್ಲಿ ಕಾಲು ಜಾರಿ ಬಿದ್ದಿದ್ದು, ಮರುದಿನ ಬೆಳಗ್ಗೆ ಅವರ ಶವ ಮಾವಿನಕೂರ್ವಾ ಬಂದರಿನಲ್ಲಿ ಕಾಣಿಸಿತು. ಅವರ ಮಗ ಮಾದೇವ ಮೊಗೇರ್ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿ, ಸಾವಿನ ಪ್ರಕರಣ ದಾಖಲಿಸಿದರು.
ಭೂ ವಿವಾದ: ಹಳಿಯಾಳದಲ್ಲಿ ಹೊಡೆದಾಟ
ಹಳಿಯಾಳದ ಹೊಸವಟ್ನಾಳದ ಅಲಿಸಾಬ ಅವರ ಮೇಲೆ ಅದೇ ಊರಿನ ಹಜರತ್ ಮುಲ್ಲಾ
ಅನ್ವರ ಮುಲ್ಲಾ, ಬಾನುಬೆ ಮುಲ್ಲಾ ಹಲ್ಲೆ ಮಾಡಿದ್ದಾರೆ.
ಈ ಮೂವರ ನಡುವೆ ಉಂಟಾದ ಭೂ ವಿವಾದ ಹೊಡೆದಾಟಕ್ಕೆ ಕಾರಣ. ಜೂ 11ರಂದು ಅಲಿಸಾಬ್ ಅವರ ಭೂಮಿಗೆ ಅಕ್ರಮ ಪ್ರವೇಶ ಮಾಡಿದ ಮೂವರು ಆರೋಪಿತರು ಮೊದಲು ಕೈಯಿಂದ ಥಳಿಸಿದ್ದಾರೆ. ಅದಾದ ನಂತರ ನಂತರ ಕಲ್ಲಿನಿಂದ ಹೊಡೆದು ಗಾಯ ಮಾಡಿದ್ದಾರೆ. ತಲೆಗೆ ಪೆಟ್ಟಾಗಿದ್ದರಿಂದ ಅಲಿಸಾಬ್ ಬೊಬ್ಬೆ ಹೊಡೆದಿದ್ದು, ಬೊಬ್ಬೆ ಕೇಳಿ ಅಕ್ಕ-ಪಕ್ಕದವರು ಆಗಮಿಸಿ ಅವರನ್ನು ರಕ್ಷಿಸಿದ್ದಾರೆ.