ಉತ್ತರ ಕನ್ನಡ ಜಿಲ್ಲೆಯಲ್ಲಿ ಧಾರಾಕಾರ ಮಳೆ ಮುಂದುವರೆದಿದೆ. ಅದರಲ್ಲಿಯೂ ಕರಾವಳಿ ಭಾಗದಲ್ಲಿ ಕೊಂಚವೂ ಬಿಡುವು ನೀಡದೇ ಮಳೆ ಸುರಿಯುತ್ತಿದೆ. ಪರಿಣಾಮ ಅಲ್ಲಲ್ಲಿ ಗುಡ್ಡ ಕುಸಿತ, ಮನೆಗಳಿಗೆ ನೀರು ನುಗ್ಗುವುದು, ರಸ್ತೆ ಮುಳುಗಡೆ ಸಾಮಾನ್ಯವಾಗಿದೆ. ನಿರಂತರವಾದ ಗಾಳಿ-ಮಳೆ-ಚಳಿಗೆ ಜನ ತತ್ತರಿಸಿದ್ದಾರೆ.
ಕಾರವಾರ ಪ್ರವೇಶಿಸುವ ಸುರಂಗ ಮಾರ್ಗದ ಬಳಿ ಮಣ್ಣು ಸಡಿಲಗೊಂಡಿದೆ. ಪರಿಣಾಮ ಗುಡ್ಡದ ಮಣ್ಣು ಹೆದ್ದಾರಿಗೆ ಬಿದ್ದಿದೆ. ಬಿಣಗಾ ಮತ್ತು ಅರಗಾ ಬಳಿ ಗುಡ್ಡ ತಡರಾತ್ರಿ ಕುಸಿತವಾಗಿದ್ದು, ಗುಡ್ಡದ ಕಲ್ಲು ರಸ್ತೆ ಮೇಲೆ ಬಂದು ಬಿದ್ದಿದೆ. ಹೀಗಾಗಿ ಒಂದು ಮಾರ್ಗ ಸಂಪೂರ್ಣವಾಗಿ ಬಂದ್ ಆಗಿದ್ದು, ಮಣ್ಣು ತೆರವು ಕಾರ್ಯಾಚರಣೆ ನಡೆಯುತ್ತಿದೆ. ಇಲ್ಲಿ ಒಟ್ಟು ನಾಲ್ಕು ಕಡೆ ಗುಡ್ಡ ಕುಸಿತವಾಗಿದ್ದರಿಂದ ವಾಹನ ಸವಾರರು ಆತಂಕದಲ್ಲಿಯೇ ಸಂಚಾರ ನಡೆಸುತ್ತಿದ್ದಾರೆ.
ಭಟ್ಕಳ ಬಂದರಿನ ತಲಗೋಡ ಗೊಂಡರ ಕೇರಿಯಲ್ಲಿ ಯಾವುದೇ ಕ್ಷಣದಲ್ಲಿ ಗುಡ್ಡ ಕುಸಿಯುವ ಸಾಧ್ಯತೆಯಿದೆ. ಈ ಭಾಗದಲ್ಲಿಯೂ ವಾಡಿಕೆಗಿಂತ ಹೆಚ್ಚಿನ ಮಳೆ ಸುರಿದಿದೆ. ಇಲ್ಲಿನ ರಸ್ತೆ ಪಕ್ಕ ನಿರ್ಮಿಸಿದ ಕಾಂಕ್ರೆಟ್ ಗೋಡೆ ಕುಸಿದಿದೆ. ಬೆಟ್ಟದ ಅರ್ದಭಾಗ ಕುಸಿತ ಕಂಡಿದ್ದು, ಇನ್ನಷ್ಟು ಕುಸಿಯುವ ಸಾಧ್ಯತೆ ಹೆಚ್ಚಿದೆ. ಬೆಟ್ಟದ ಮೇಲಿನ ಕಲ್ಬಂಡೆಗಳು ಅಪಾಯ ಸೃಷ್ಠಿಸಿದೆ. ಈ ಸ್ಥಳದಲ್ಲಿ ಬೆಟ್ಟ ಕಡಿದು ನಿರ್ಮಿಸಿದ ಶಾಲೆಯೂ ಅಪಾಯದ ಸ್ಥಿತಿಯಲ್ಲಿದೆ. ಬೆಟ್ಟದ ಕಲ್ಬಂಡೆಗಳು ಶಾಲೆ ದಿಕ್ಕಿನಲ್ಲಿ ಬರುವ ಲಕ್ಷಣವಿದ್ದು, ಜನ ಆತಂಕದಲ್ಲಿದ್ದಾರೆ.
ಅoಕೋಲಾದ ಹೊನ್ನೆಬೈಲ್ ಬಳಿ ಸುರಿದ ಮಳೆಗೆ ಅಲ್ಲಿನ ಹಳ್ಳ ಉಕ್ಕಿ ಹರಿದಿದ್ದು, ಪಿಚ್ಚಿಂಗ್ ಕೊಚ್ಚಿ ಹೋಗಿದೆ. ನೀರಿನ ವೇಗಕ್ಕೆ ಕಪೌಂಡ್ ಸಹ ಕುಸಿದಿದೆ. ತೋಟಗಳಿಗೂ ನೀರು ನುಗ್ಗಿ ಹಾನಿಯಾಗಿದೆ. ಇಲ್ಲಿ ಶಾಶ್ವತ ತಡೆಗೋಡೆ ನಿರ್ಮಿಸದೇ ಇದ್ದರೆ ಇನ್ನಷ್ಟು ಅಪಾಯ ಖಚಿತ ಎಂದು ಜನ ಹೇಳಿದ್ದಾರೆ. ಹೊನ್ನಾವರದ ಬಳಕೂರು ಮಠದಕೇರಿಯಲ್ಲಿನ ಮನೆ ಮೇಲೆ ಮರ ಬಿದ್ದಿದೆ. ಧರ್ಮಿ ನಾಯ್ಕ ಅವರ ಮನೆ ಚಾವಣಿ ಹಾರಿ ಹೋಗಿದೆ. ಸಾಲೆಹಿತ್ತಲದ ನಾಗರಾಜ ನಾಯ್ಕ ಅವರ ಮನೆಯ ಮೇಲೆಯೂ ಮರ ಬಿದ್ದಿದೆ. ಶರಾವತಿ, ಗುಂಡಬಾಳ ಹಾಗೂ ಬಡಗಣಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.
ಭಟ್ಕಳದ ರಂಗಿನಕಟ್ಟೆ ಪ್ರದೇಶದ ಹೆದ್ದಾರಿ ಕೆರೆಯ ರೀತಿ ಕಾಣುತ್ತಿದೆ. ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು, ಜನ ಮಳೆಗೆ ಹೆದರಿದ್ದಾರೆ. ಸಂಶುದ್ಧೀನ್ ಸರ್ಕಲ್ ಬಳಿ ನೀರು ತುಂಬಿದ್ದರಿoದ ಜನ ಸಮಸ್ಯೆ ಅನುಭವಿಸಿದರು. ನೀರು ತುಂಬಿದ ರಸ್ತೆಗಳು ಕಾಣದೇ ವಾಹನ ಸವಾರರು ಪರದಾಡಿದರು.