ಯಲ್ಲಾಪುರ ಗ್ರಾಮದೇವಿ ಜಾತ್ರೆ ಅವಧಿಯಲ್ಲಿ ಪಟ್ಟಣ ಪಂಚಾಯತದಲ್ಲಿ ನಡೆದ ಅವ್ಯವಹಾರದ ಬಗ್ಗೆ ಶುಕ್ರವಾರ ನಡೆದ ಸಭೆಯಲ್ಲಿಯೂ ಚರ್ಚೆ ನಡೆದಿದದ್ದು, ಅನೇಕರ ನಡುವೆ ವಾಗ್ವಾದ-ಜಟಾಪಟಿ, ರಾಜಕೀಯ ಕಚ್ಚಾಟಕ್ಕೆ ಈ ಸಭೆಯೂ ಸೀಮಿತಗೊಂಡಿತು. ಪಟ್ಟಣದ ಮೀನು ಮಾರುಕಟ್ಟೆ ವಿಷಯವಾಗಿ ಸದಸ್ಯ ಸತೀಶ ನಾಯ್ಕ ಹಾಗೂ ಸೋಮು ನಾಯ್ಕ ನಡುವೆ ಮಾತಿನ ಯುದ್ಧ ನಡೆಯಿತು. ಸದಸ್ಯರ ವಾಗ್ದಾಳಿ ನೋಡಿ ಪ ಪಂ ಅಧ್ಯಕ್ಷೆ ಹಾಗೂ ಅಧಿಕಾರಿ-ಸಿಬ್ಬಂದಿ ಮೌನಕ್ಕೆ ಶರಣಾದರು!
ಈ ಹಿಂದೆ ನಡೆದ ಏಳು ಸಭೆಯಲ್ಲಿ ಪ ಪಂ ಸದಸ್ಯರು ಜಾತ್ರೆ ಲೆಕ್ಕ ಕೇಳಿದ್ದರು. ಆದರೆ, ಅದನ್ನು ಸರಿಯಾಗಿ ಒದಗಿಸುವಲ್ಲಿ ಪ ಪಂ ಸಿಬ್ಬಂದಿ ಎಡವಿದ್ದರು. ಹೀಗಾಗಿ 8ನೇ ಸಭೆಯಲ್ಲಿ ಸಹ ಸದಸ್ಯರು ಲೆಕ್ಕವನ್ನೇ ಕೇಳಿದರು. ಕಳೆದ ಸಭೆಯಲ್ಲಿ ಜಾತ್ರೆ ವೇಳೆ ಹರಾಜು ಮಾಡಲಾದ ಪ್ಲಾಟ್‌ಗಳ ವಿಡಿಯೋ ಬಗ್ಗೆ ಚರ್ಚೆ ನಡೆದಿದ್ದು, ಪೆನ್‌ಡ್ರೆöÊವ್ ಕಾಣೆಯಾದ ಬಗ್ಗೆ ಪ್ರಸ್ತಾಪ ನಡೆದಿತ್ತು. ಈ ಸಭೆಯಲ್ಲಿ ಸಹ ಆ ಪೆನ್‌ಡ್ರೆöÊವ್ ಹುಡುಕಾಟ ನಡೆಯಿತು. ಕೊನೆಗೆ ವಿಡಿಯೋ ಚಿತ್ರಿಕರಣ ಮಾಡಿದವರನ್ನು ವಿಚಾರಿಸುವ ಬಗ್ಗೆ ಸಭೆ ನಿರ್ಣಯಿಸಿತು. ಜಾತ್ರೆಯ ವೇಳೆ ಅಂಗಡಿಗಳ ಹರಾಜು ಪ್ರಕ್ರಿಯೆಯ ವಿಡಿಯೊ ಚಿತ್ರೀಕರಣ, ಫೊಟೊಗಳಿರುವ ಪೆನ್ ಡ್ರೈವ್ ಕಳೆದಿರುವ ಬಗ್ಗೆ ಸದಸ್ಯರು ಪ್ರಶ್ನಿಸಿದರು. ಆದರೆ, ಇದಕ್ಕೆ ಸೂಕ್ತ ಉತ್ತರ ಮಾತ್ರ ಸಿಗಲಿಲ್ಲ. ಅಷ್ಟಕ್ಕೂ ಆ ಪೆನ್‌ಡ್ರೆöÊವ್ ರಹಸ್ಯ ಬಿಚ್ಚಿಡಲು ಅಧಿಕಾರಿ-ಸಿಬ್ಬಂದಿ ಹಿಂದೇಟು ಹಾಕುತ್ತಿರುವುದು ಸಭೆಯ ಮುಖ್ಯ ವಿಷಯವಾಗಿತ್ತು.
ಪಟ್ಟಣದಲ್ಲಿರುವ ಮೀನು ಮಾರುಕಟ್ಟೆಯ ಅಂಗಡಿಗಳಿಗೆ 12 ವರ್ಷಗಳಿಗೊಮ್ಮೆ ಟೆಂಡರ್ ಕರೆಯುವ ಬಗ್ಗೆ ಸಭೆಯಲ್ಲಿ ಪ್ರಸ್ತಾಪವಾಗಿದ್ದು, ಮೊದಲಿದ್ದ ನಿಯಮ ಬದಲಿಸಲು ಸತೀಶ ನಾಯ್ಕ ಸಹಮತ ನೀಡಿದರು. ಆದರೆ, ಈ ನಿರ್ಣಯಕ್ಕೆ ಸದಸ್ಯ ಸೋಮೇಶ್ವರ ನಾಯ್ಕ ವಿರೋಧ ವ್ಯಕ್ತಪಡಿಸಿದರು. `ಈಗಾಗಲೇ 12 ಸದಸ್ಯರ ಸಹಿ ಹಾಕಿ ಬಹುಮತದ ಠರಾವು ಮಾಡಿಕೊಟ್ಟಿದ್ದೇವೆ. ಈಗ ಅದರ ಬಗ್ಗೆ ಮತ್ತೆ ಚರ್ಚೆಯ ಅಗತ್ಯವಿಲ್ಲ’ ಎಂದು ಸದಸ್ಯರಾದ ರಾಧಾಕೃಷ್ಣ ನಾಯ್ಕ ಹಾಗೂ ಸತೀಶ ನಾಯ್ಕ ಹೇಳಿದರು. `ಹಳೆಯ ಠರಾವು ಬೇಡ, ಸಭೆಯಲ್ಲಿ ಚರ್ಚಿಸದೇ ತಮಗೆ ಬೇಕಾದ ಸದಸ್ಯರನ್ನು ಸೇರಿಸಿ, ಅವರ ಸಹಿ ಪಡೆದು ನಿರ್ಣಯಿಸಲಾಗಿದೆ. ಅದನ್ನು ಒಪ್ಪಲು ಸಾಧ್ಯವಿಲ್ಲ’ ಎಂದು ಸೋಮೇಶ್ವರ ನಾಯ್ಕ ಅಸಮಾಧಾನವ್ಯಕ್ತಪಡಿಸಿದರು. ಇದೇ ವಿಷಯವಾಗಿ ಸತೀಶ ನಾಯ್ಕ ಹಾಗೂ ಸೋಮೇಶ್ವರ ನಾಯ್ಕ ನಡುವೆ ಜಟಾಪಟಿ ನಡೆಯಿತು. `ಮೀನು ಮಾರುಕಟ್ಟೆ ಟೆಂಡರ್ ನಿರ್ಣಯ ವಿಚಾರದಲ್ಲಿ ಭ್ರಷ್ಟಾಚಾರ ನಡೆದಿದೆ’ ಎಂದು ಸೋಮೇಶ್ವರ ನಾಯ್ಕ ಆರೋಪಿಸಿದರು.
`ಹಿಂದಿನ ಸಭೆಯಲ್ಲಿ ನಾನು ಪ್ರಸ್ತಾಪಿಸಿದ ವಿಚಾರಗಳು ಠರಾವಿನಲ್ಲಿ ಸೇರಿಸಿಲ್ಲ. ನಾನು ಮಾತನಾಡದೇ ಇರುವ ವಿಚಾರಗಳೂ ಠರಾವಿನಲ್ಲಿ ಬಂದಿವೆ’ ಎಂದು ಪ ಪಂ ಸದಸ್ಯ ರಾಜು ನಾಯ್ಕ ಆಕ್ರೋಶವ್ಯಕ್ತಪಡಿಸಿದರು. ಇನ್ನಿತರ ಸದಸ್ಯರು ಇದಕ್ಕೆ ಧ್ವನಿಯಾದರು. ಪ ಪಂ ಅಧ್ಯಕ್ಷೆ ನರ್ಮದಾ ನಾಯ್ಕ, ಉಪಾಧ್ಯಕ್ಷ ಅಮಿತ್ ಅಂಗಡಿ, ಸ್ಥಾಯಿ ಸಮಿತಿಯ ಅಧ್ಯಕ್ಷ ಅಬ್ದುಲ್ ಅಲಿ, ಮುಖ್ಯಾಧಿಕಾರಿ ಕುಮಾರ ನಾಯ್ಕ ಹಾಗೂ ಸದಸ್ಯರ ಪೈಕಿ ಒಂದಿಬ್ಬರನ್ನುಹೊರತುಪಡಿಸಿ ಉಳಿದವರೆಲ್ಲರೂ ಬಹುತೇಕ ಮೌನವಾಗಿದ್ದರು.