ಶಿರಸಿ ಆಸ್ಪತ್ರೆ ಅವ್ಯವಸ್ಥೆ ಸರಿಪಡಿಸುವ ವಿಚಾರವಾಗಿ ಜೂನ್ 14ರಂದು ಸಂಜೆ 4 ಗಂಟೆಗೆ ನೆಮ್ಮದಿ ಕುಟೀರದಲ್ಲಿ ಸಮಾನ ಮನಸ್ಕರ ಸಭೆ ಕರೆಯಲಾಗಿದೆ.
`2020ರಲ್ಲಿ ಶಿರಸಿಯಲ್ಲಿ ಸಾರ್ವಜನಿಕ ಆಸ್ಪತ್ರೆ ನಿರ್ಮಾಣ ಕೆಲಸ ಶುರುವಾಗಿದ್ದು, 2023ರಲ್ಲಿ ಮುಗಿಯಬೇಕಿತ್ತು. 2025ರಲ್ಲಿಯೂ ಈ ಕೆಲಸ ಮುಗಿದಿಲ್ಲ. ಶೇ 80ರಷ್ಟು ಕಾಮಗಾರಿ ಪೂರ್ಣವಾದರೂ ಮುಂದಿನ ಹಂತದ ಕೆಲಸ ನಡೆದಿಲ್ಲ. ಹೀಗೆ ಬಿಟ್ಟರೆ ಆ ಆಸ್ಪತ್ರೆ ಸೌಕರ್ಯ ಯಾರಿಗೂ ಸಿಗುವುದಿಲ್ಲ’ ಎಂದು ಸಾಮಾಜಿಕ ಹೋರಾಟಗಾರ ಅನಂತಮೂರ್ತಿ ಹೆಗಡೆ ಹೇಳಿದ್ದಾರೆ. `ಆಸ್ಪತ್ರೆ ಉಳಿಸಿಕೊಳ್ಳುವುದಕ್ಕಾಗಿ ಹೋರಾಟ ಅಗತ್ಯ. ಅನಗತ್ಯವಾಗಿ ಬೇರೆಯವರನ್ನು ದೂರುವ ಮೊದಲು ನಾವು ಗಟ್ಟಿಯಾಗಿ ಹೋರಾಟ ನಡೆಸೋಣ’ ಎಂದು ಅವರು ಕರೆ ನೀಡಿದ್ದಾರೆ.
`ಶಿರಸಿ ಆಸ್ಪತ್ರೆಯಲ್ಲಿ ಎಲ್ಲಾ ಬಗೆಯ ಯಂತ್ರಗಳಿವೆ. ಆದರೆ, ಉಪಯೋಗಕ್ಕೆ ಬರುತ್ತಿಲ್ಲ. ಗರ್ಭಿಣಿಯರು ಪ್ರತಿ ತಿಂಗಳು ಚಿಕಿತ್ಸೆ-ತಪಾಸಣೆಗೆ 2-3 ಸಾವಿರ ರೂ ವೆಚ್ಚ ಮಾಡುತ್ತಿದ್ದು, ಸರ್ಕಾರಿ ಆಸ್ಪತ್ರೆ ಸರಿಯಾದರೆ ಅಲ್ಲಿ ಉಚಿತ ಚಿಕಿತ್ಸೆ ಸಿಗಲಿದೆ. 7 ತಿಂಗಳ ಹಿಂದೆ ಶಿರಸಿಗೆ ವೈದ್ಯರ ನೇಮಕಾತಿ ಪ್ರಸ್ತಾಪವಾಗಿದ್ದು, ಅದು ಮುಂದುವರೆದಿಲ್ಲ. ಇನ್ನೂ ಅನೇಕ ಸಮಸ್ಯೆ ಬಗ್ಗೆ ಚರ್ಚಿಸಲು ಸಮಾನ ಮನಸ್ಕರು ಒಂದಾಗಬೇಕಿದೆ’ ಎಂದು ಅನಂತಮೂರ್ತಿ ಹೆಗಡೆ ಹೇಳಿದ್ದಾರೆ. `ಆಸ್ಪತ್ರೆ ಬಗ್ಗೆ ಕಾಳಜಿಯಿರುವ ಎಲ್ಲರೂ ಬನ್ನಿ’ ಎಂದವರು ಆಮಂತ್ರಿಸಿದ್ದಾರೆ.