ಯಲ್ಲಾಪುರ ತಾಲೂಕು ಆಸ್ಪತ್ರೆಯಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ ಡಾ ದೀಪಕ ಭಟ್ಟ ಹಾಗೂ ಡಾ ಸೌಮ್ಯ ದಂಪತಿ ವರ್ಗಾವಣೆಯ ಸುದ್ದಿ ಅನೇಕರ ಬೇಸರಕ್ಕೆ ಕಾರಣವಾಗಿದೆ. ಬಿಜೆಪಿ ಸಹ ಈ ವೈದ್ಯ ದಂಪತಿಯ ವರ್ಗಾವಣೆಯನ್ನು ವಿರೋಧಿಸಿದೆ.
ಡಾ ದೀಪಕ ಭಟ್ಟ ಹಾಗೂ ಡಾ ಸೌಮ್ಯಾ ಅವರು ಯಲ್ಲಾಪುರ ಆಸ್ಪತ್ರೆಯಲ್ಲಿ ರೋಗಿಗಳ ಆರೈಕೆಯಲ್ಲಿ ನಿರತರಾಗಿದ್ದಾರೆ. ಸ್ನೇಹಮಯ ವ್ಯಕ್ತಿತ್ವ ಹಾಗೂ ಇದ್ದದನ್ನು ಇದ್ದ ಹಾಗೇ ಹೇಳುವ ಮೂಲಕ ಅವರು ಜನಮನ ಗೆದ್ದಿದ್ದಾರೆ. ರೋಗಿಗಳನ್ನು ಅಲ್ಲಿ-ಇಲ್ಲಿ ಅಲೆದಾಡಿಸದೇ ಅವರು ಆರೈಕೆ ಮಾಡುವ ಮೂಲಕ ವಿಶ್ವಾಸಗಳಿಸಿದ್ದಾರೆ. ಬಡ ರೋಗಿಗಳ ಪಾಲಿಗೆ ಬಂಧುವಿನ ರೀತಿಯಲ್ಲಿ ಅವರು ವರ್ತಿಸಿ ವೈದ್ಯಕೀಯ ಸೇವೆ ನೀಡುತ್ತಿದ್ದಾರೆ.
ಅವರಿಬ್ಬರ ವರ್ಗಾವಣೆಗೆ ತಾಲೂಕಿನ ಎಲ್ಲಡೆ ವಿರೋಧವ್ಯಕ್ತವಾಗಿದ್ದು, ಬಿಜೆಪಿ ಸಹ ಇದಕ್ಕೆ ಈ ವಿರೋಧಕ್ಕೆ ಬೆಂಬಲ ನೀಡಿದೆ. `ಆ ಇಬ್ಬರೂ ವೈದ್ಯರ ವರ್ಗಾವಣೆ ಪ್ರಕ್ರಿಯೆ ನಡೆದಿರುವುದರಿಂದ ತಾಲೂಕು ಆಸ್ಪತ್ರೆ ಅನಾಥ ಆಗುವ ಸನ್ನಿವೇಶ ನಿರ್ಮಾಣ ಆಗಿದೆ. ಈ ಕಾರಣದಿಂದ ವೈದ್ಯರ ವರ್ಗಾವಣೆ ಆದೇಶಕ್ಕೆ ತಕ್ಷಣ ತಡೆ ನೀಡಬೇಕು. ಅದಿಲ್ಲದೇ ಹೋದರೆ ವರ್ಗಾವಣೆ ಆದೇಶ ರದ್ದಾಗುವವರೆಗೆ ಬಿಜೆಪಿ ಉಗ್ರ ಹೋರಾಟ ಮಾಡಲಿದೆ’ ಎಂದು ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ ಹೇಳಿದ್ದಾರೆ. `ಶಾಸಕ ಶಿವರಾಮ ಹೆಬ್ಬಾರ್ ಅವರು ಈ ಬಗ್ಗೆ ಗಮನ ಹರಿಸಿ ವೈದ್ಯರ ವೈದ್ಯರ ವರ್ಗಾವಣೆ ರದ್ದತಿಗೆ ಕ್ರಮವಹಿಸಬೇಕು’ ಎಂದು ಹರಿಪ್ರಕಾಶ ಕೋಣೆಮನೆ ಮನವಿ ಮಾಡಿದ್ದಾರೆ. `ಒಂದು ವೇಳೆ ಆ ಇಬ್ಬರು ವೈದ್ಯರ ವರ್ಗಾವಣೆ ನಡೆದರೆ ಬಡಜನರ ಜೊತೆಗೆ ತಾಲೂಕು ಆಸ್ಪತ್ರೆ ಎದುರು ಅಹೋರಾತ್ರಿ ಧರಣಿ ನಡೆಸುವೆ’ ಎಂದು ಎಚ್ಚರಿಸಿದ್ದಾರೆ.
`ತಾಲೂಕಿನಲ್ಲಿ ಸರಕಾರಿ ಸೇವೆ ದೃಷ್ಟಿಯಿಂದ ಹಲವು ಸಂಮಸ್ಯೆಗಳಿವೆ. ಅದಾಗಿಯೂ ಈ ಇಬ್ಬರು ವೈದ್ಯರ ಉತ್ತಮ ಸೇವೆಯಿಂದ ತಾಲೂಕು ಆಸ್ಪತ್ರೆ ಜನಪ್ರಿಯವಾಗಿದೆ. ಇರುವ ನಾಲ್ಕು ವೈದ್ಯರಲ್ಲಿ ತಜ್ಞ ವೈದ್ಯರು ವರ್ಗಾವಣೆ ಆದರೆ ತಾಲೂಕು ಆಸ್ಪತ್ರೆ ಅನಾಥವಾಗಲಿದೆ’ ಎಂದವರು ಕಳವಳವ್ಯಕ್ತಪಡಿಸಿದ್ದಾರೆ. `ಈಗಾಗಲೇ ಬಡಜನರ ಜೀವನಾಡಿ ಆದ ಜನೌಷಧ ಕೇಂದ್ರಗಳನ್ನು ಮುಚ್ಚಲು ರಾಜ್ಯಸರಕಾರ ಮುಂದಾಗಿದೆ. ಅಗತ್ಯ ಔಷಧ ಸರಬರಾಜು ಇಲ್ಲ. ಅವ್ಯವಸ್ಥೆ ನಡುವೆ ಇರುವ ಒಂದು ಉತ್ತಮ ಆಸ್ಪತ್ರೆಯನ್ನು ಹಾಳು ಮಾಡಬಾರದು’ ಎಂದು ಹೇಳಿದ್ದಾರೆ.
ಬಿಜೆಪಿ ಮಂಡಳ ಅಧ್ಯಕ್ಷ ಪ್ರಸಾದ್ ಹೆಗಡೆ ಮಾತನಾಡಿ `ಈ ಹಿಂದೆ ಬಿಜೆಪಿ ಸರಕಾರದ ಅವಧಿಯಲ್ಲಿ ಇಡೀ ರಾಜ್ಯದಲ್ಲಿ ಮಾದರಿ ಆಸ್ಪತ್ರೆಗಳು ನಿರ್ಮಾಣ ಆಗಿವೆ. ಹಾಗೆಯೇ ಯಲ್ಲಾಪುರದಲ್ಲಿ ಸುಸಜ್ಜಿತ ತಾಲೂಕು ಆಸ್ಪತ್ರೆ ನಿರ್ಮಾಣ ಆಗಿದೆ. ಅದು ಈಗ ಹಾಳಾಗುವ ಸನ್ನಿವೇಶ ನಿರ್ಮಾಣ ಆಗಿದೆ. ಬಿಜೆಪಿ ಅದಕ್ಕೆ ಆಸ್ಪದ ಕೊಡುವುದಿಲ್ಲ’ ಎಂದಿದ್ದಾರೆ. ಬಿಜೆಪಿ ಜಿಲ್ಲಾ ಪ್ರಮುಖ ಗಣಪತಿ ಮಾನಿಗದ್ದೆ,ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸೋಮೇಶ್ವರ ನಾಯ್ಕ ಸಹ ಈ ಹೋರಾಟಕ್ಕೆ ಬೆಂಬಲ ನೀಡಿದ್ದಾರೆ.