ಸಾಕಷ್ಟು ಶ್ರಮಿಸಿದರೂ ಐದುವರೆ ಲಕ್ಷ ರೂ ಸಾಲ ತೀರಿಸಲಾಗದ ಕಾರಣ ಮುಂಡಗೋಡಿನ ರೈತರೊಬ್ಬರು ನೇಣಿಗೆ ಶರಣಾಗಿದ್ದಾರೆ.
ಮುಂಡಗೋಡಿನ ಓಣಿಕೇರಿಯಲ್ಲಿ ರತ್ನೋಜಿ ಕೋಣಕೇರಿ ಎಂಬಾತರು ವಾಸವಾಗಿದ್ದರು. ಭತ್ತ ಹಾಗೂ ಜೋಳ ಬೆಳೆಯುವ ಉದ್ದೇಶದಿಂದ ಅವರು ಸೊಸೈಟಿಯಲ್ಲಿ ಸಾಲ ಮಾಡಿಕೊಂಡಿದ್ದರು. ಸಾಲಕ್ಕೆ ಸಾಲ.. ಬಡ್ಡಿಗೆ ಬಡ್ಡಿ ಬೆಳೆದು ಅದು 5.50 ಲಕ್ಷ ರೂ ಆಗಿತ್ತು. ಆದರೆ, ಪ್ರತಿ ವರ್ಷವೂ ಅವರಿಗೆ ಫಸಲು ಮಾತ್ರ ಕೈಗೆ ಬರುತ್ತಿರಲಿಲ್ಲ. ಈ ವರ್ಷ ಸುರಿದ ಮಳೆಗೆ ಅವರು ಬೆಳೆದಿದ್ದ ಜೋಳ ನೆಲ ಕಚ್ಚಿದ್ದವು. ಹೀಗಾಗಿ ಬೆಳೆ ಬೆಳೆಯಲು ಸಹಕಾರಿ ಸಂಘದಲ್ಲಿ ಸಾಲ ಮಾಡಿಕೊಂಡಿದ್ದ ಅವರಿಗೆ ಆ ಸಾಲ ತೀರಿಸಲು ಸಾಧ್ಯವಾಗಿರಲಿಲ್ಲ.
ಸಾಲ ತೀರಿಸಲಾಗದೇ ಕಟ್ ಬಾಕಿ ಆಗಿದ್ದು ಸಹ ಅವರ ಮನಸಿಗೆ ಕಾಡುತ್ತಿತ್ತು. ಫಸಲು ಕೈಗೆ ಸಿಗದಿರುವುದು ಹಾಗೂ ಸಾಲ ಬೆಳೆಯುತ್ತಿರುವುದು ನೋಡಿ ಅವರು ಮಾನಸಿಕವಾಗಿ ಕುಗ್ಗಿದ್ದರು. ಜೂನ್ 11ರಂದು ಒರಲಗಿ ಗ್ರಾಮದ ಹೊಲಕ್ಕೆ ಹೋದ ಅವರು ಆ ದಿನ ರಾತ್ರಿ ಮನೆಗೆ ಮರಳಲಿಲ್ಲ. ಜೂ 13ರಂದು ಬೆಳಗ್ಗೆ ಅಲ್ಲಿಗೆ ಹೋಗಿ ನೋಡಿದಾಗ ರತ್ನೋಜಿ ಕೋಣಕೇರಿ (55) ಅವರು ಅಲ್ಲಿನ ಹಲಸಿನ ಮರಕ್ಕೆ ನೇತಾಡುತ್ತಿದ್ದರು.
ತಂದೆ ಆತ್ಮಹತ್ಯೆಗೆ ಶರಣಾಗಿದ್ದನ್ನು ನೋಡಿದ ಪರಶುರಾಮ ರತ್ನೋಜಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದರು. ಸಾಲಬಾಧೆಯಿಂದ ಸಾವನಪ್ಪಿರುವ ಬಗ್ಗೆ ಪ್ರಕರಣ ದಾಖಲಿಸಿದರು.