ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಮುಂದುವರೆದಿದ್ದು, ಶಿರಸಿ-ಕುಮಟಾ ರಸ್ತೆಯ ದೇವಿಮನೆ ಘಟ್ಟ ಪ್ರದೇಶದಲ್ಲಿ ಶನಿವಾರವೂ ಧರೆ ಕುಸಿದಿದೆ.
ಶುಕ್ರವಾರ ಸಂಜೆ ವೇಳೆ ಇಲ್ಲಿ ಗುಡ್ಡ ಕುಸಿದಿತ್ತು. ರಾತ್ರಿಯಿಡೀ ಕಾರ್ಯಾಚರಣೆ ನಡೆಸಿ ಅಲ್ಲಿ ಬಿದ್ದ ಮಣ್ಣನ್ನು ತೆರವು ಮಾಡಲಾಗಿತ್ತು. ಆದರೆ, ಶನಿವಾರ ಮತ್ತೆ ರಸ್ತೆ ಮೇಲೆ ಮಣ್ಣು ಬಿದ್ದಿದೆ. ಮಣ್ಣಿನ ಜೊತೆ ಸಣ್ಣಪುಟ್ಟ ಕಲ್ಬಂಡೆಗಳು ಬಂದಿದೆ. ಮಳೆಯೂ ಜೋರಾಗಿರುವುದರಿಂದ ಮಣ್ಣು ತೆರವು ಕೆಲಸಕ್ಕೆ ಅಡ್ಡಿಯಾಗಿದೆ. ಕೆಲ ದಿನಗಳ ಹಿಂದೆಯೂ ಇಲ್ಲಿ ಗುಡ್ಡ ಕುಸಿದು, ಸಂಚಾರಕ್ಕೆ ಅಡಚಣೆಯಾಗಿತ್ತು.
ಶಿರಸಿ-ಕುಮಟಾ ಮಾರ್ಗದ ರಸ್ತೆ ಅಭಿವೃದ್ಧಿ ಕೆಲಸ ನಡೆಯುತ್ತಿದೆ. ಈ ಹಿನ್ನಲೆ ಜಿಲ್ಲಾಡಳಿತ ಆ ಮಾರ್ಗದಲ್ಲಿ ಭಾರೀ ಪ್ರಮಾಣದ ವಾಹನ ಓಡಾಟ ನಿಷೇಧಿಸಿದೆ. ಲಘು ವಾಹನ ಸಂಚಾರಕ್ಕೆ ಮಾತ್ರ ಸದ್ಯ ಅನುಮತಿಯಿದ್ದು, ನಿಧಾನವಾಗಿ ವಾಹನ ಓಡಿಸುವಂತೆ ಸೂಚಿಸಲಾಗಿದೆ. ಗುಡ್ಡದ ಅಡಿಭಾಗದಲ್ಲಿ ಮಣ್ಣು ಬೀಳುವ ಸಾಧ್ಯತೆಯಿರುವುದರಿಂದ ರಸ್ತೆ ಮೇಲೆ ನಿಲ್ಲುವುದು ಹಾಗೂ ಅಲ್ಲಿ ಫೋಟೋ ಕ್ಲಿಕ್ಕಿಸಿಕೊಳ್ಳುವುದಕ್ಕೂ ತಡೆ ಒಡ್ಡಲಾಗಿದೆ.