ಮಂಗಳೂರಿಗೆ ಹೋಗಿದ್ದ ಮೂವರು ಶಿರಸಿಗೆ ಮರಳುತ್ತಿರುವಾಗ ಗುಡ್ಡ ಕುಸಿತವಾಗಿದ್ದು, ದೇವರ ದಯೆಯಿಂದ ಅವರೆಲ್ಲರೂ ಪಾರಾಗಿದ್ದಾರೆ. ದೇವಿಮನೆಯ ಕ್ಷೇತ್ರಪಾಲನ ದರ್ಶನ ಮಾಡದಿದ್ದರೆ ಆ ಮೂವರು ಮಣ್ಣಿನ ಅಡಿ ಮಣ್ಣಾಗುತ್ತಿದ್ದರು!
ಶುಕ್ರವಾರ ರಾತ್ರಿ ದೇವಿಮನೆ ಘಟ್ಟದಲ್ಲಿ ನಡೆದ ಮಣ್ಣು ಕುಸಿತದಿಂದ ಶಿವಪ್ರಕಾಶ ಹೆಗಡೆ, ಸುಮಾ ಹೆಗಡೆ ಹಾಗೂ ಅರುಣ ಕಾಶಿಭಟ್ಟ ಕ್ಷಣಮಾತ್ರದಲ್ಲಿ ಬಚಾವಾಗಿದ್ದಾರೆ. ಶಿವಪ್ರಕಾಶ ಹೆಗಡೆ ಅವರು ಶಿರಸಿ ಉಪವಿಭಾಗಾಧಿಕಾರಿ ಕಚೇರಿ ಸಿಬ್ಬಂದಿ. ಸುಮಾ ಹೆಗಡೆ ಅವರು ಕೆನರಾ ಬ್ಯಾಂಕ್ ಉದ್ಯೋಗಿ. ಅರುಣ ಕಾಶಿಭಟ್ಟ ಅವರು ಆಹಾರ ಸುರಕ್ಷತಾ ಇಲಾಖೆಯ ನಿವೃತ್ತ ಅಧಿಕಾರಿ. ಈ ಮೂವರು ಶುಕ್ರವಾರ ಮಂಗಳೂರಿನಲ್ಲಿ ನಡೆದ ಎಸ್ ಎಲ್ ಭಟ್ಟ ಅವರ ವೈಕುಂಠ ಸಮಾರಾಧನೆಗೆ ಹೋಗಿ, ರಾತ್ರಿ ವೇಳೆ ಶಿರಸಿಗೆ ಮರಳುತ್ತಿದ್ದರು. ದಾರಿ ಮದ್ಯೆ ದೇವಿಮನೆ ಘಟ್ಟದಲ್ಲಿನ ಕ್ಷೇತ್ರಪಾಲನಿಗೆ ನಮಿಸಲು ಕಾರು ನಿಲ್ಲಿಸಿದ್ದು, ಅದಾದ ಕೆಲ ಹೊತ್ತಿನಲ್ಲಿ ಘಟ್ಟ ಪ್ರದೇಶದಲ್ಲಿ ಗುಡ್ಡ ಕುಸಿತ ಉಂಟಾಯಿತು.
ದೇವಿಮನೆಯ ಕ್ಷೇತ್ರಪಾಲನ ಬಳಿ ಕಾರು ನಿಧಾನ ಮಾಡದೇ ಇದ್ದಿದ್ದರೆ ಆ ಕಾರು ಗುಡ್ಡ ಕುಸಿತ ಪ್ರದೇಶದಲ್ಲಿ ಸಿಲುಕಿ, ಕಾರಿನ ಮೇಲೆ ಮಣ್ಣು ಬೀಳುವ ಅಪಾಯವಿತ್ತು. ಆ ಮೂವರು ದೇವರಿಗೆ ಕೈ ಮುಗಿದು ಮುಂದೆ ಸಾಗಿದ್ದು, 200ಮೀಟರ್ ಚಲಿಸುವಷ್ಟರಲ್ಲಿಯೇ ಗುಡ್ಡ ಕುಸಿಯಿತು. ಬರೇ 4-5 ಸೆಕೆಂಡ್ ಅಂತರದಲ್ಲಿ ಆ ಕಾರಿನ ಜೊತೆ ಮೂವರು ಪ್ರಯಾಣಿಕರು ಬಚಾವಾದರು. ಆ ಕಾರಿನಿಂದ ಒಂದುವರೆ ಅಡಿ ದೂರದಲ್ಲಿ ಗುಡ್ಡ ಕುಸಿದಿದ್ದು, ಕಾರನ್ನು ಹಿಮ್ಮುಖವಾಗಿ ಚಲಿಸಿದ ಪರಿಣಾಮ ಮೂವರು ಪ್ರಾಣ ಉಳಿಸಿಕೊಂಡರು. ಸಾವೇ ಕಣ್ಣಿನ ಮುಂದೆ ಬಂದು ಹೋದ ಅನುಭವಪಡೆದ ಆ ಮೂವರು ದೇವರ ದಯೆಯಿಂದ ಬದುಕಿದರು. ಕೂಡಲೇ ಕ್ಷೇತ್ರಪಾಲನಿಗೆ ಇನ್ನೊಂದು ನಮಸ್ಕಾರ ಹಾಕಿದರು.
`ಶುಕ್ರವಾರ ರಾತ್ರಿ 10.30ರ ಸುಮಾರಿಗೆ ದೇವಿಮನೆ ಘಟ್ಟದಲ್ಲಿ ಕಾರು ಓಡಿಸುತ್ತಿದ್ದೆ. ಕ್ಷೇತ್ರಪಾಲನಿಗೆ ಕೈ ಮುಗಿದು ಮುಂದೆ ಚಲಿಸುವಾಗ ತಿರುವಿನಲ್ಲಿ ಮೊದಲು ಮರ ಬೀಳುವುದು ಕಾಣಿಸಿತು. ಘಟ್ಟ ಪ್ರದೇಶವಾಗಿದ್ದರಿಂದ ಕಾರಿನ ಬ್ರೆಕ್ ಅದುಮಿದೆ. ಕ್ಷಣಮಾತ್ರದಲ್ಲಿ ಗುಡ್ಡ ಕುಸಿತವಾಗಿದ್ದು, ಕಾರನ್ನು ಹಿಮ್ಮುಖವಾಗಿ ಚಲಿಸಿದ ಕಾರಣ ಮೂವರು ಅನಾಹುತದಿಂದ ತಪ್ಪಿಸಿಕೊಂಡೆವು’ ಎಂದು ಶಿವಪ್ರಕಾಶ ಹೆಗಡೆ ಅನುಭವ ಹಂಚಿಕೊoಡರು. `ಕ್ಷೇತ್ರಪಾಲನಿಗೆ ಕೈ ಮುಗಿಯಲು ಕಾರು ನಿಧಾನ ಮಾಡದೇ ಇದ್ದಿದ್ದರೆ ದುರಂತವೇ ನಡೆಯುತ್ತಿತ್ತು’ ಎಂದು ಆತಂಕದಿoದಲೇ ಮಾತನಾಡಿದರು.
ರಾತ್ರಿ ಗುಡ್ಡ ಕುಸಿತದ ಆತಂಕದಲ್ಲಿಯೂ ಮತ್ತೊಮ್ಮೆ ಸಮಯ ಪ್ರಜ್ಞೆ ಮೆರೆದ ಶಿವಪ್ರಕಾಶ ಹೆಗಡೆ ಅವರು ಉಪವಿಭಾಗಾಧಿಕಾರಿಗಳಿಗೆ ಸುದ್ದಿ ಮುಟ್ಟಿಸಿ ಗುಡ್ಡ ತೆರವು ಕಾರ್ಯಾಚರಣೆಗೆ ನೆರವಾದರು.