ಕಾಡಿನಲ್ಲಿದ್ದ ಸೀಸಂ ಮರ ಕಡಿದಿದ್ದ ಮುಂಡಗೋಡಿನ ದೊಂಡು ಕೊಕ್ಕರೆ ಅದನ್ನು ಗದ್ದೆಯಲ್ಲಿ ಬಚ್ಚಿಟ್ಟಿದ್ದರು. ಅರಣ್ಯ ಇಲಾಖೆಯವರ ಭಯದಿಂದ ಅವರು ಇದೀಗ ಊರು ತೊರೆದಿದ್ದಾರೆ!
ಗುಂಜಾವತಿ ಅರಣ್ಯ ವಿಭಾಗದ ಶಿಡ್ಲಗುಂಡಿ ಅರಣ್ಯ ಪ್ರವೇಶಿಸಿದ ದುಂಡು ಕೊಕ್ಕರೆ ಅಲ್ಲಿ ಸೀಸಂ ಮರವಿರುವುದನ್ನು ನೋಡಿದ್ದರು. ಅದನ್ನು ಕಡಿದು ಸಾಗಾಟ ಮಾಡಿದರೆ ಸುಲಭವಾಗಿ ಹಣಗಳಿಸುವ ಸಂಚು ರೂಪಿಸಿದ್ದರು. ಅದರ ಪ್ರಕಾರ ಆ ಮರವನ್ನು ಕಡಿದಿದ್ದರು. ಮರವನ್ನು ತುಂಡು ತುಂಡಾಗಿ ಕತ್ತರಿಸಿದ ಅವರು ತಮ್ಮ ಅರಣ್ಯ ಅತಿಕ್ರಮಣ ಭೂಮಿಗೆ ಅದನ್ನು ಸ್ಥಳಾಂತರಿಸಿದ್ದರು. ಅಲ್ಲಿ ಹುಲ್ಲಿನ ಹೊದಕೆ ಹೊದಸಿ ಆ ಮರದ ತುಂಡುಗಳನ್ನು ಬಚ್ಚಿಟ್ಟಿದ್ದರು.
ಸೀಸಂ ಮರದ ಎಂಟು ತುಂಡುಗಳನ್ನು ಸಾಗಾಟ ಮಾಡಲು ಉದ್ದೇಶಿಸಿದ್ದ ಅವರು ಅದನ್ನು ಖರೀದಿಸುವವರಿಗಾಗಿ ಹುಡುಕುತ್ತಿದ್ದರು. ಸೀಸಂ ಮರ ಬೇಕಾ? ಎಂದು ಒಂದಿಬ್ಬರನ್ನು ಪ್ರಶ್ನಿಸಿದ್ದರು. ಈ ವಿಷಯ ಅರಣ್ಯ ಇಲಾಖೆಗೆ ಮುಟ್ಟಿದ್ದು, ಮುಂಡಗೋಡಿನ ವಲಯ ಅರಣ್ಯಾಧಿಕಾರಿಗಳು ದೊಂಡು ಕೊಕ್ಕರೆ ಅವರ ಮನೆ ಹುಡುಕಿ ಬಂದರು. ವಿಷಯ ಅರಿತ ಕೂಡಲೇ ದೊಂಡು ಕೊಕ್ಕರೆ ಓಡಿ ಹೋಗಿ ತಪ್ಪಿಸಿಕೊಂಡರು. ಹುಲ್ಲಿನ ಅಡಿ ಅಡಗಿದ್ದ 8 ಸೀಸಂ ನಾಟಾವನ್ನು ಅರಣ್ಯ ಸಿಬ್ಬಂದಿ ವಶಕ್ಕೆಪಡೆದರು.
ದುಂಡು ಕೊಕ್ಕರೆ ಜೊತೆ ಇನ್ನಿತರರು ಈ ಮರ ಕಡಿತದಲ್ಲಿ ಭಾಗಿಯಾಗಿದ್ದು, ಅರಣ್ಯ ಸಿಬ್ಬಂದಿ ಅವರೆಲ್ಲರ ಹುಡುಕಾಟ ನಡೆಸಿದ್ದಾರೆ.