ಕಾಡಿನಲ್ಲಿ ಗಿಡ ನೆಡುವುದಕ್ಕಾಗಿ ರಸ್ತೆ ಇಲ್ಲ ಎಂಬ ಕಾರಣಕ್ಕೆ ಅರಣ್ಯಾಧಿಕಾರಿಗಳು ರೈತರು ಹೊಲದಲ್ಲಿ ಬೆಳೆದಿದ್ದ ಜೋಳ ತುಳಿದಿದ್ದಾರೆ. ರೈತರ ಗದ್ದೆಯಲ್ಲಿ ಟಾಕ್ಟರ್ ಓಡಿಸಿ ಅವರ ಬೆಳೆ ಹಾಳು ಮಾಡಿದ್ದಾರೆ.
ಶಿರಸಿಯ ಬದನಗೋಡ ಗ್ರಾಪಂ ವ್ಯಾಪ್ತಿಯ ರಂಗಾಪುರದಲ್ಲಿ ರೈತರು ಜೋಳ ಬೆಳೆದಿದ್ದರು. ಗದ್ದೆಯಲ್ಲಿ ಜೋಳದ ಗಿಡಗಳು ಸೊಂಪಾಗಿ ಬೆಳೆದಿದ್ದವು. ಇದನ್ನು ಸಹಿಸದ ಅರಣ್ಯ ಸಿಬ್ಬಂದಿ ಆ ಗದ್ದೆಯಲ್ಲಿ ಟಾಕ್ಟರ್ ಓಡಿಸಿದರು. ಪರಿಣಾಮ ಜೋಳದ ಗಿಡಗಳು ಮಣ್ಣಿನಲ್ಲಿ ಹೂತು, ಸಾವನಪ್ಪಿದವು. ಈ ಬಗ್ಗೆ ರೈತರು ಆಕ್ರೋಶವ್ಯಕ್ತಪಡಿಸಿದರೂ ಅದಕ್ಕೆ ಅರಣ್ಯ ಸಿಬ್ಬಂದಿ ಕಿವಿಯಾಗಲಿಲ್ಲ. ಅರಣ್ಯಾಧಿಕಾರಿಗಳು ಆಗಮಿಸಿ ಸಾಂತ್ವಾನ ಹೇಳಲಿಲ್ಲ.
ಒಟ್ಟು ಐದು ರೈತರು ಬೆಳೆದಿದ್ದ ಬೆಳೆ ಅರಣ್ಯಾಧಿಕಾರಿಗಳ ದಬ್ಬಾಳಿಕೆಯಿಂದ ಹಾಳಾಗಿದೆ. ಟಾಕ್ಟರ್ ಹೋದ ದಾರಿ ಹೊಲದಲ್ಲಿ ಕಾಣುತ್ತಿದೆ. ಬೆಳೆ ನಷ್ಟ ಅನುಭವಿಸಿದ ಮೂಡ್ಕಣೇಶ್ವರ ಕಣ್ಣೀರಾಗಿದ್ದಾರೆ. `ಭೂಮಿ ಬಾಡಿಗೆಗೆಪಡೆದು ಜೋಳ ಬೆಳೆದರೂ ಬದುಕಲು ಬಿಡುವುದಿಲ್ಲ’ ಎಂದು ಆ ಭಾಗದ ಕೆಲಸಗಾರರು ಅಳಲು ತೋಡಿಕೊಂಡಿದ್ದಾರೆ. `ನರ್ಸರಿ ಗಿಡ ಬೆಳೆಸಲು ರೈತರು ಬೆಳೆದ ಗಿಡ ನಾಶ ಮಾಡುವುದು ಎಷ್ಟರ ಮಟ್ಟಿಗೆ ಸರಿ?’ ಎಂದು ಅಲ್ಲಿನವರು ಪ್ರಶ್ನಿಸುತ್ತಿದ್ದಾರೆ.
`ಉದ್ದೇಶಪೂರ್ವಕ ಬೆಳೆ ಹಾನಿ ನಡೆಸಿದ ಬಗ್ಗೆ ಕೇಳಿದರೆ ಉದ್ದಟತನದಿಂದ ಮಾತನಾಡುತ್ತಾರೆ. ಅರಣ್ಯದ ಒಳಗೆ ತಲೆಮೇಲೆ ಹೊತ್ತು ಗಿಡ ಹೋರುವ ಅವಕಾಶವಿದ್ದರೂ ಅದನ್ನು ಮಾಡಲಿಲ್ಲ’ ಎಂದು ರೈತರು ದೂರಿದರು. `ತಮಗಾದ ಅನ್ಯಾಯ ಸರಿಪಡಿಸದೇ ಇದ್ದರೆ ಹೋರಾಟ ನಿಶ್ಚಿತ’ ಎಂದು ಎಚ್ಚರಿಸಿದರು. `ಯಾರೂ ಉದ್ದೇಶಪೂರ್ವಕವಾಗಿ ಈ ರೀತಿ ಮಾಡಿರಲಿಕ್ಕಿಲ್ಲ. ಆಕಸ್ಮಿಕವಾಗಿ ಬೆಳೆ ಹಾನಿ ಆಗಿರಬಹುದು. ಈ ಬಗ್ಗೆ ವಲಯ ಅರಣ್ಯಾಧಿಕಾರಿಗಳನ್ನು ಪ್ರಶ್ನಿಸುವೆ’ ಎಂದು ಸಾಮಾಜಿಕ ಅರಣ್ಯ ವಿಭಾಗದ ಡಿಎಫ್‌ಓ ಮಂಜುನಾಥ ನಾವಿ ಅವರು ಪ್ರತಿಕ್ರಿಯಿಸಿದರು.