ಶಿರಸಿಯ ಪಂಡಿತ್ ಆಸ್ಪತ್ರೆ ಹೋರಾಟ ವಿಷಯವಾಗಿ ಬಿಜೆಪಿ ಮುಖಂಡ ಅನಂತಮೂರ್ತಿ ಹೆಗಡೆ ನೇತ್ರತ್ವದಲ್ಲಿ ಶನಿವಾರ ಸಭೆ ನಡೆದಿದ್ದು, ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರು ಇದಕ್ಕೆ ಬೆಂಬಲ ನೀಡಿದರು. ಈ ಹಿಂದಿನ ಸರ್ಕಾರದ ಆದೇಶದಂತೆಯೇ ಎಲ್ಲ ಕಾಮಗಾರಿಗಳು, ಯಂತ್ರೋಪಕರಣಗಳ ಖರೀದಿ ಹಾಗು ವೈದ್ಯರ ನೇಮಕ ಪ್ರಕ್ರಿಯೆಯನ್ನು ತುರ್ತಾಗಿ ಕಾರ್ಯರೂಪಕ್ಕೆ ತರುವ ಬಗ್ಗೆ ಸರ್ಕಾರದ ಮೇಲೆ ಒತ್ತಡ ತರಲು ಸಭೆ ನಿರ್ಧರಿಸಿತು.
`ಆಸ್ಪತ್ರೆಯ ಕಟ್ಟಡ ಕೆಲಸದ ಪೈಕಿ ಶೇ 80ರಷ್ಟು ಮುಕ್ತಾಯವಾಗಿದೆ. ಆದರೆ, ಮುಂದಿನ ಹಂತ ತಲುಪಿಲ್ಲ. ಒಂದು ವರ್ಷದ ಹಿಂದೆಯೇ ವೈದ್ಯರ ನೇಮಕಾತಿ ಮತ್ತು ಯಂತ್ರೋಪಕರಣಗಳ ಖರೀದಿಗೆ ಪ್ರಸ್ತಾವನೆ ಕಳಿಸಿದ್ದರೂ ಯಾವ ಪ್ರಕ್ರಿಯೆ ನಡೆದಿಲ್ಲ’ ಎಂದು ಅನಂತಮೂರ್ತಿ ಹೆಗಡೆ ಸಭೆ ಶುರುವಿನಲ್ಲಿ ಅಸಮಧಾನವ್ಯಕ್ತಪಡಿಸಿದರು. `ಆಸ್ಪತ್ರೆ ವಿಷಯದಲ್ಲಿ ಅನಂತಮೂರ್ತಿ ಹೆಗಡೆ ಜನಪರ ಹೋರಾಟ ಮಾಡಿದ್ದಾರೆ. ಒಳ್ಳೆಯ ವಿಚಾರಕ್ಕೆ ನಮ್ಮ ಸಹಕಾರವಿದೆ. ಎಲ್ಲರನ್ನು ವಿಶ್ವಾಸಕ್ಕೆಪಡೆದು ಹೋರಾಟ ಸಂಘಟಿಸೋಣ’ ಎಂದು ಕಾಂಗ್ರೆಸ್ ಮುಖಂಡ ಪ್ರವೀಣ ಗೌಡರ್ ತೆಪ್ಪಾರ್ ಹೇಳಿದರು.
ಜಿಪಂ ಮಾಜಿ ಸದಸ್ಯ ಹಾಲಪ್ಪ ಜಕ್ಕಣ್ಣನವರ್ ಇದಕ್ಕೆ ಧ್ವನಿಗೂಡಿಸಿ `ಬಜೆಟಿನಲ್ಲಿ ಕೊಡಗು, ಚಿತ್ರದುರ್ಗ, ಬಾಗಲಕೋಟೆ ಜಿಲ್ಲೆಗಳುಗೆ ಹೆಚ್ಚುವರಿಯಾಗಿ ಮೆಡಿಕಲ್ ಕಾಲೇಜುಗಳ ನಿರ್ಮಾಣ ಪ್ರಸ್ತಾಪವನ್ನು ಸರಕಾರ ಮಾಡಿದೆ. ಈಗಾಗಲೇ ಘೋಷಣೆಯಾಗಿರುವ ಮೇಲ್ದರ್ಜೆಗೇರಿರುವ ಶಿರಸಿ ಸರಕಾರಿ ಆಸ್ಪತ್ರೆಯನ್ನು ಪೂರ್ಣಗೊಳಿಸುವ ಕೆಲಸ ನಡೆಯಬೇಕಿದೆ’ ಎಂದರು. ನಿವೃತ್ತ ಇಂಜಿನಿಯರ್ ವಿ ಎಂ ಭಟ್ಟ ಮಾತನಾಡಿ `ವೈದ್ಯರ ನೇಮಕಾತಿ ಪ್ರಕ್ರಿಯೆಗೆ ಸಂಬAಧಿಸಿ ಕೌನ್ಸೆಲಿಂಗ್ ನಡೆಯುವ ಹಂತದಲ್ಲಿದೆ. ಗ್ರಾಮೀಣ ಭಾಗಕ್ಕೆ ವೈದ್ಯರು ಬರುವುದೇ ಕಡಿಮೆ. ಹೀಗಿರುವಾಗ ಸರಕಾರ ನೇಮಕಾತಿ ಪ್ರಕ್ರಿಯೆ ತಡ ಮಾಡಿದರೆ ಮುಂದೆ ವೈದ್ಯರ ಲಭ್ಯತೆ ಅಷ್ಟು ಸುಲಭವಾಗಿ ದೊರಕುವುದಿಲ್ಲ’ ಎಂದು ಅಭಿಪ್ರಾಯಪಟ್ಟರು.
ಡಾ. ಕೆ ವಿ. ಶಿವರಾಮ್ ಮಾತನಾಡಿ `ಶಿರಸಿಯ ಬಹುತೇಕ ಆಸ್ಪತ್ರೆಗೆ ಕೇವಲ ಸ್ಥಳೀಯರು ಮಾತ್ರ ಬರುವುದಿಲ್ಲ. ಸಾಗರ, ಸೊರಬ, ಆನವಟ್ಟಿ, ಹಾವೇರಿಯ ಜಿಲ್ಲೆಯ ಅನೇಕ ಕಡೆಗಳಿಂದ ಜನರು ಬರುತ್ತಾರೆ. ಹಾಗಾಗಿ ಆ ಭಾಗದ ಸಂಘ ಸಂಸ್ಥೆಗಳು, ಜನಪ್ರತಿನಿಧಿಗಳ ಅಭಿಪ್ರಾಯಗಳನ್ನು ಪಡೆದು ಹೋರಾಟ ನಡೆಸಬೇಕು’ ಎಂದರು. ನೆಗ್ಗು ಗ್ರಾ ಪಂ ಸದಸ್ಯೆ ಜ್ಯೋತಿ ಹೆಗಡೆ ಮಾತನಾಡಿ `ನಮ್ಮ ಜಿಲ್ಲೆಯಲ್ಲಿ ಒಂದು ಸುಸಜ್ಜಿತ ಆಸ್ಪತ್ರೆ ಇದ್ದಿದ್ದರೆ ನನ್ನ ಮಗನನ್ನು ಉಳಿಸಿಕೊಳ್ಳುತ್ತಿದ್ದೆ. ಅನಾರೋಗ್ಯವಾದಾಗ ಮಾರ್ಗ ಮಧ್ಯೆ ಅವನನ್ನು ಕಳೆದುಕೊಂಡ ನೋವು ನನಗಿದೆ’ ಎಂದು ಕಣ್ಣೀರಾದರು.
ಸಭೆಯಲ್ಲಿ ಲೋಕೇಶ ಹೆಗಡೆ, ಮನೋಹರ ಮಲ್ಮನೆ, ಡಾ ಜಿ ಎ ಹೆಗಡೆ ಸೋಂದಾ, ಉಷಾ ಹೆಗಡೆ, ವಕೀಲರಾದ ಮನೋಜ ಪಂಡಿತ್, ಪ್ರಕಾಶ ಹೆಗಡೆ, ಜಯಶೀಲ ಗೌಡರ್ ಇತರರಿದ್ದರು.