ಅಂಕೋಲಾದ ಮನೆಯೊಂದರಲ್ಲಿ ಚಿರತೆ ಅಡಗಿ ಕುಳಿತಿದ್ದು, ಅದರ ಅರಿವಿಲ್ಲದೇ ಅಲ್ಲಿಗೆ ಹೋದ ಯುವಕನ ಮೇಲೆ ಏಕಾಏಕಿ ದಾಳಿ ನಡೆಸಿದೆ.
ವಾಸರಕುದ್ರಿಗೆ ಗ್ರಾಮ ಪಂಚಾಯತ ವುಆಪ್ತಿಯ ಉಳಗದ್ದೆ ಗ್ರಾಮದಲ್ಲಿ ಶನಿವಾರ ಚಿರತೆಯೊಂದು ಕಾಣಿಸಿಕೊಂಡಿದೆ. ನಿರ್ಮಾಣ ಹಂತದಲ್ಲಿರುವ ಕಟ್ಟಡದಲ್ಲಿ ಚಿರತೆ ಆಶ್ರಯಪಡೆದಿದ್ದು, ಅಲ್ಲಿಗೆ ಹೋಗಿದ್ದ ಸಂತೋಷ ಗೌಡ ಆಕ್ರಮಣಕ್ಕೆ ಒಳಗಾಗಿದ್ದಾರೆ. ಚಿರತೆ ಆಕ್ರಮಣದಿಂದ ತತ್ತರಿಸಿದ ಸಂತೋಷ ಗೌಡ ದೊಡ್ಡದಾಗಿ ಬೊಬ್ಬೆ ಹೊಡೆದು ಪ್ರಾಣ ಉಳಿಸಿಕೊಂಡಿದ್ದಾರೆ.
ಹೊಸ ಮನೆ ಕಟ್ಟಡದಲ್ಲಿ ಕುಟುಂಬದವರು ಬಟ್ಟೆ ಒಣಗಿಸಿದ್ದರು. ಶನಿವಾರ ಅದನ್ನು ತರಲು ಹೋದ ಮಹಿಳೆ ಮೊದಲು ಚಿರತೆ ನೋಡಿದರು. ಸಂತೋಷ ಗೌಡ ಸಹ ಆ ಮಾರ್ಗದಲ್ಲಿ ಬರುತ್ತಿದ್ದು, ದಿಢೀರ್ ಆಗಿ ಚಿರತೆ ದಾಳಿ ನಡೆಸಿತು. ಇದರಿಂದ ಸಂತೋಷ್ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಎರಡು ಕೈಗಳಿಗೆ ಚಿರತೆ ಪರಚಿದೆ.
ಚಿರತೆ ಮನೆಯೊಳಗೆ ನುಗ್ಗಿ ಮನುಷ್ಯನ ಮೇಲೆ ದಾಳಿ ನಡೆಸಿದ್ದು ಇದೇ ಮೊದಲು. ಹೀಗಾಗಿ ಅಂಕೋಲಾದ ಜನ ಆತಂಕದಲ್ಲಿದ್ದಾರೆ. ಚಿರತೆ ಸ್ಥಳಾಂತರಕ್ಕಾಗಿ ಅಗಸೂರು ಗ್ರಾಪಂ ಸದಸ್ಯ ಆನಂದು ಗೌಡ ಆಗ್ರಹಿಸಿದ್ದಾರೆ.