ಶಿರಸಿ-ಕುಮಟಾ ರಸ್ತೆಯ ದೇವಿಮನೆ ಘಟ್ಟದಲ್ಲಿ ಭಾನುವಾರ ನಸುಕಿನಲ್ಲಿ ಮತ್ತೆ ಗುಡ್ಡ ಕುಸಿದಿದೆ. ಗುಡ್ಡದ ಮೇಲಿನ ಗಿಡ-ಮರಗಳು ಹೆದ್ದಾರಿಗೆ ಬಂದು ಬಿದ್ದಿದೆ. ಹೀಗಾಗಿ ಲಘು ವಾಹನ ಸಂಚಾರಕ್ಕೂ ಇಲ್ಲಿ ಸಂಚಕಾರ ಎದುರಾಗಿದೆ.
ಕಳೆದ ಮೂರು ದಿನದ ಅವಧಿಯಲ್ಲಿ ಮೂರನೇ ಬಾರಿ ಇಲ್ಲಿ ಗುಡ್ಡ ಕುಸಿತ ನಡೆದಿದೆ. ಅದಕ್ಕಿಂತ ಮೊದಲು ಸಹ ಗುಡ್ಡದ ಮಣ್ಣು ಹೆದ್ದಾರಿಗೆ ಅಪ್ಪಳಿಸಿದ್ದು, ತೆರವು ಕಾರ್ಯಾಚರಣೆ ನಡೆದಿತ್ತು. ಕುಮಟಾ-ಶಿರಸಿ ಮಾರ್ಗದ ಅಭಿವೃದ್ಧಿ ಕೆಲಸ ನಡೆಯುತ್ತಿರುವುದರಿಂದ ಹಿಂದೆಯೇ ಈ ಮಾರ್ಗದಲ್ಲಿ ಭಾರೀ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ. ಹೀಗಾಗಿ ಲಘು ವಾಹನಗಳ ಓಡಾಟ ಮಾತ್ರ ನಡೆಯುತ್ತಿದ್ದು, ರಾತ್ರಿ ವೇಳೆ ಗುಡ್ಡ ಕುಸಿದಿದ್ದರಿಂದ ವಾಹನ ಓಡಾಟ ವಿರಳವಾಗಿತ್ತು. ಹೀಗಾಗಿ ಜೀವ ಹಾನಿ ಆಗಿಲ್ಲ.
ಭಾರೀ ವಾಹನ ಓಡಾಟಕ್ಕೆ ಅವಕಾಶ ನೀಡಿದಲ್ಲಿ ಈ ರಸ್ತೆಯಲ್ಲಿ ಹಗಲು-ರಾತ್ರಿ ವಾಹನ ಸಂಚಾರ ನಡೆಯಲಿದ್ದು, ಆ ವೇಳೆ ಗುಡ್ಡ ಕುಸಿದರೆ ಅಪಾಯ ಖಚಿತ. ಇದರೊಂದಿಗೆ ರಸ್ತೆ ಅಭಿವೃದ್ಧಿಗೆ ಸಹ ಭಾರೀ ವಾಹನ ಓಡಾಟ ತೊಂದರೆ ಮಾಡಲಿದೆ. ರಸ್ತೆ ಅಭಿವೃದ್ಧಿ ಕೆಲಸದ ವೇಳೆ ಗುಡ್ಡವನ್ನು ಅವೈಜ್ಞಾನಿಕ ರೀತಿ ಕಡಿತ ಮಾಡಿರುವುದು ಗುಡ್ಡ ಕುಸಿತಕ್ಕೆ ಮುಖ್ಯ ಕಾರಣ. ಕಳೆದ ವರ್ಷವೂ ಈ ಭಾಗದಲ್ಲಿ ಗುಡ್ಡ ಕುಸಿತ ಉಂಟಾಗಿದ್ದು, ಪ್ರಯಾಣಿಕರು ಸಮಸ್ಯೆ ಅನುಭವಿಸಿದ್ದರು.
ಭಾನುವಾರ ಬೆಳಗ್ಗೆ ಗುಡ್ಡ ಕುಸಿತವಾಗಿದ್ದರಿಂದ ಕುಮಟಾ-ಶಿರಸಿ ಮಾರ್ಗ ಸಂಪೂರ್ಣವಾಗಿ ಬಂದ್ ಆಗಿದೆ. ಮಳೆಯೂ ಸುರಿಯುತ್ತಿರುವುದರಿಂದ ಮಣ್ಣು ತೆರವು ಕಾರ್ಯಾಚರಣೆ ನಿಧಾನವಾಗುವ ಸಾಧ್ಯತೆಯಿದೆ. ರಸ್ತೆ ಮೇಲೆ ಮಣ್ಣು ಹಾಗೂ ಮರ ಬಿದ್ದಿರುವುದರಿಂದ ಅಲ್ಲಿ ಹೋಗುವುದು ಕಷ್ಟ. ಜೊತೆಗೆ ಗುಡ್ಡದ ಮಣ್ಣು ಸಡಿಲವಾಗಿರುವ ಕಾರಣ ಹತ್ತಿರ ಹೋಗುವುದು ಅಪಾಯಕಾರಿಯೂ ಹೌದು. ಹೀಗಾಗಿ ಶಿರಸಿ-ಕುಮಟಾ ಓಡಾಡುವ ಪ್ರಯಾಣಿಕರು ಪ್ರಯಾಣ ಮುಂದುಡುವುದು ಉತ್ತಮ. ತೀರಾ ಅನಿವಾರ್ಯವಾದರೆ ಬೇರೆ ಮಾರ್ಗ ಬಳಸುವುದು ಅನಿವಾರ್ಯ