ಕರಾವಳಿಯಲ್ಲಿ ಭಾರೀ ಪ್ರಮಾಣದ ಮಳೆ ಸುರಿಯುತ್ತಿದ್ದು, ಮಳೆ ಕಾರಣದಿಂದ ಭಟ್ಕಳದಲ್ಲಿ ಎರಡು ಸಾವು ಸಂಭವಿಸಿದೆ.
ಶನಿವಾರ ಮಧ್ಯಾಹ್ನ ಮನೆ ಅಂಗಳದಲ್ಲಿ ಆಟವಾಡುತ್ತಿದ್ದ ಎರಡು ವರ್ಷದ ಮಗು ಮನೆ ಮುಂದಿನ ಹಳ್ಳದಲ್ಲಿ ಬಿದ್ದು ಕೊಚ್ಚಿ ಹೋಗಿದೆ. ಆ ವೇಳೆ ಮಳೆ ಇಲ್ಲದಿದ್ದರೂ ಹಳ್ಳ ರಭಸವಾಗಿ ಹರಿಯುತ್ತಿದ್ದು, ಮಗು ಬಿದ್ದಿದ್ದನ್ನು ನೋಡಿದ ಸ್ಥಳೀಯರು ರಕ್ಷಣೆಗೆ ಧಾವಿಸಿದ್ದಾರೆ. ಹಳ್ಳದ ನೀರಿನಲ್ಲಿ 2 ವರ್ಷದ ಮಗು ಬಹುದೂರ ಸಾಗಿದ್ದು, ಅಷ್ಟರೊಳಗೆ ಕಿವಿ-ಮೂಗು-ಬಾಯಿಯೊಳಗೆ ನೀರು ತುಂಬಿತ್ತು.
ಅದಾಗಿಯೂ ಅಲ್ಲಿಯ ಜನ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಮಗುವನ್ನು ರಕ್ಷಿಸಿ, ಕುಟುಂಬದವರಿಗೆ ಹಸ್ತಾಂತರಿಸಿದರು. ಮಗುವನ್ನು ಕುಟುಂಬದವರು ಆಸ್ಪತ್ರೆಗೆ ಸಾಗಿಸಿದರಾದರೂ ಪ್ರಯೋಜನವಾಗಲಿಲ್ಲ. ಆಸ್ಪತ್ರೆಗೆ ಮಗು ಬರುವ ಮುನ್ನವೇ ಕೊನೆಯುಸಿರೆಳೆದಿದ್ದ ಬಗ್ಗೆ ವೈದ್ಯಾಧಿಕಾರಿಗಳು ಘೋಷಿಸಿದರು. ಭಟ್ಕಳ ನಗರದ ಆಝಾದ ನಗರದಲ್ಲಿ ಈ ದುರ್ಘಟನೆ ನಡೆದಿದೆ. ತೌಸೀಫ್ ಮತ್ತು ಅರ್ಜು ದಂಪತಿಯ ಮಗು ಸಾವನಪ್ಪಿದ್ದರಿಂದ ಊರಿನ ತುಂಬ ಶೋಕದ ವಾತಾವರಣ ಕಾಣಿಸಿತು.
ಇನ್ನೂ ಭಟ್ಕಳ ಗುಳ್ಮೆ ಬೆಳಲಖಂಡದ ಮಾದೇವ ದೇವಾಡಿಗ (50) ಎಂಬಾತರು ಮಳೆಯಲ್ಲಿ ನೆನೆದು ಸಾವನಪ್ಪಿದ್ದಾರೆ. ಗುಳ್ಮೆ ಬೆಳಲಖಂಡದ ಲಕ್ಕಿ ಪಾಕ್ಟರ್ ಹಿಂದಿನ ದಾರಿಯಲ್ಲಿ ಅವರು ನಡೆದು ಬರುತ್ತಿರುವಾಗ ಧಾರಾಕಾರ ಮಳೆ ಸುರಿದಿದೆ. ಮಳೆಯಲ್ಲಿ ಪೂರ್ತಿಯಾಗಿ ನೆನೆದ ಅವರು ಮಳೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ಅದೇ ನೀರಿನಲ್ಲಿ ಮುಳುಗಿ ಅವರು ಕೊನೆಯುಸಿರೆಳೆದಿದ್ದಾರೆ. ಮಾದೇವ ದೇವಾಡಿಗ ಅವರ ಪತ್ನಿ ಲಕ್ಷಿ ದೇವಾಡಿಗ ಅವರು ಪತಿಯ ನೆನೆದು ಕಣ್ಣೀರಾದರು. ಅದಾದ ನಂತರ ಭಟ್ಕಳ ಗ್ರಾಮೀಣ ಠಾಣೆಗೆ ಆಗಮಿಸಿ ಮಾದೇವ ದೇವಾಡಿಗ ಅವರು ನೀರಿನಲ್ಲಿ ಕೊಚ್ಚಿ ಹೋಗಿ ಸಾವನಪ್ಪಿರುವ ಬಗ್ಗೆ ಪ್ರಕರಣ ದಾಖಲಿಸಿದರು.
`ವ್ಯಾಪಕ ಮಳೆಯಾಗುತ್ತಿರುವ ಕಾರಣ ಸುರಕ್ಷತೆ ಬಗ್ಗೆ ಕಾಳಜಿವಹಿಸಿ. ಮಕ್ಕಳ ಸುರಕ್ಷತೆಗೆ ಮೊದಲ ಆದ್ಯತೆ ನೀಡಿ ಎಂದು ಜಿಲ್ಲಾಡಳಿತ ಸೂಚನೆ ನೀಡಿದೆ. ಗುಡ್ಡ ಪ್ರದೇಶಗಳ ಅಡಿ ಭಾಗ ನಿಲ್ಲಬೇಡಿ. ಅಪಾಯಕಾರಿ ಸ್ಥಳದಲ್ಲಿ ವಾಹನ ನಿಲುಗಡೆ, ಫೋಟೋ ಕ್ಲಿಕ್ಕಿಸುವಿಕೆ ಮಾಡಬೇಡಿ’ ಎಂದು ಮನವಿ ಮಾಡಿದೆ. ಇದರೊಂದಿಗೆ `ಕಡಲತೀರಗಳು ಅಪಾಯದ ಸ್ಥಿತಿಯಲ್ಲಿದ್ದು, ಸಮೀಪ ಹೋಗಬೇಡಿ’ ಎಂದು ಜಿಲ್ಲಾಡಳಿತ ಸೂಚಿಸಿದೆ.
ಅಂಗಳದಲ್ಲಿ ಆಡುತ್ತಿದ್ದ ಮಗು ನೀರಿನಲ್ಲಿ ಕೊಚ್ಚಿ ಹೋದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಆ ವಿಡಿಯೋ ಇಲ್ಲಿ ನೋಡಿ..