ಕುಮಟಾದ ಕೋಡ್ಕಣಿಯಲ್ಲಿನ ಅಂಗಡಿಗೆ ಕಾರು ನುಗ್ಗಿದ್ದು, ಅಂಗಡಿಯಲ್ಲಿದ್ದ ಮಹಿಳೆಯೊಬ್ಬರಿಗೆ ಗಾಯವಾಗಿದೆ. ಆ ಮಹಿಳೆ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮಂಗಳೂರು ಮೂಲದ ಜನ ಕಾರಿನ ಮೂಲಕ ಗೋಕರ್ಣಕ್ಕೆ ಬಂದಿದ್ದರು. ಭಾನುವಾರ ಪೂಜೆ ಸಲ್ಲಿಸಿ ಅವರು ಊರಿಗೆ ಮರಳುವಾಗ ವೇಗವಾಗಿ ಕಾರು ಚಲಾಯಿಸಿದರು. ಪರಿಣಾಮ ಕುಮಟಾದ ಕೋಡ್ಕಣಿ ಕ್ರಾಸಿನ ಬಳಿಯಿದ್ದ ಮಾರುತಿ ನಾಯ್ಕ ಅವರ ಅಂಗಡಿಗೆ ಆ ಕಾರು ಗುದ್ದಿತು. ಅಂಗಡಿಯಲ್ಲಿದ್ದ ನಿರ್ಮಲಾ ಅವರು ಕಾರು ಗುದ್ದಿದ್ದರಿಂದ ಗಾಯಗೊಂಡರು.
ಅಪಘಾತ ನೋಡಿದ ಅಲ್ಲಿನವರು ನಿರ್ಮಲಾ ಅವರನ್ನು ಉಪಚರಿಸಿದರು. 108ಗೆ ಫೋನ್ ಮಾಡಿ ಅವರನ್ನು ಆಸ್ಪತ್ರೆಗೆ ಸಾಗಿಸಿದರು. ಕುಮಟಾ ಸರ್ಕಾರಿ ಆಸ್ಪತ್ರೆಯಲ್ಲಿ ನಿರ್ಮಲಾ ಅವರಿಗೆ ಚಿಕಿತ್ಸೆ ಮುಂದುವರೆದಿದೆ. ಕಾರು ಅಂಗಡಿಗೆ ನುಗ್ಗುವ ಮುನ್ನ ಒಮ್ಮೆ ಪಲ್ಟಿಯಾಗಿದ್ದು, ರಸ್ತೆ ಅಂಚಿನಲ್ಲಿದ್ದ ಬೈಕುಗಳನ್ನು ಜಖಂ ಮಾಡಿದೆ.
ಬೈಕು ಕಾರಿನ ಅಡಿ ಸಿಲುಕಿದೆ. ಅಂಗಡಿಗೆ ಹೊದಸಲಾಗಿದ್ದ ಮೇಲ್ಚಾವಣಿಯೂ ಹಾರಿ ಹೋಗಿದೆ. ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.