`ಕಾರವಾರದಲ್ಲಿ ಚರಂಡಿ ವ್ಯವಸ್ಥೆ ಸರಿಪಡಿಸಲು ನಗರಸಭೆ ಸರಿಯಾದ ಯೋಜನೆ ರೂಪಿಸಬೇಕು’ ಎಂದು ಜಯಕರ್ನಾಟಕ ಜನಪರ ವೇದಿಕೆ ಅಧ್ಯಕ್ಷ ದಿಲೀಪ್ ಅರ್ಗೇಕರ್ ಆಗ್ರಹಿಸಿದ್ದಾರೆ.
`ಎರಡು ದಿನಗಳ ಹಿಂದೆ ಸುರಿದ ಬಾರಿ ಮಳೆಯಿಂದ ಕಾರವಾರ ನಗರದಲ್ಲಿ ಹಲವೆಡೆ ನೀರು ತುಂಬಿದೆ. ನೀರು ಮುಂದೆ ಸಾಗಲು ದಾರಿಯಿಲ್ಲದೇ ಸಾಕಷ್ಟು ಹಾನಿಯಾಗಿದೆ. ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದಿರುವುದೇ ಇದಕ್ಕೆ ಮುಖ್ಯ ಕಾರಣ’ ಎಂದವರು ಹೇಳಿದ್ದಾರೆ.
`ನಗರದ ಕೋಣೆನಾಲದಲ್ಲಿ ಸೇರುವ ಚರಂಡಿಗಳ ಮೇಲೆ ಹಲವೆಡೆ ಕಟ್ಟಡ, ಕಾಂಪೌAಡ್ ನಿರ್ಮಿಸಲಾಗಿದೆ. ಚರಂಡಿ ಮುಚ್ಚಿದರೂ ನಗರಸಭೆಯವರು ಗಮನಿಸುತ್ತಿಲ್ಲ. ಇದರ ಪರಿಣಾಮ ನೀರು ಮುಂದೆ ಹೋಗಲು ದಾರಿಯಿಲ್ಲದೇ ರಸ್ತೆಗಳ ಮೇಲೆ, ಮನೆಗಳ ಒಳಗೆ ನುಗ್ಗುತ್ತಿದೆ’ ಎಂದವರು ವಿವರಿಸಿದ್ದಾರೆ.
`ಕಳೆದ ಐದಾರು ವರ್ಷಗಳಿಂದ ಕಾರವಾರ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಿದೆ. ಮುಂದೆ ನೌಕಾದಳ ದೊಡ್ಡದಾಗಿ ಬೆಳೆಯುವುದರಿಂದ ಕಾರವಾರ ನಗರ ಸಹ ಇನ್ನು ಹೆಚ್ಚಿನ ಮಟ್ಟದಲ್ಲಿ ಬೆಳೆಯಲಿದ್ದು ನಗರಸಭೆಯವರು ಭವಿಷ್ಯದ ದೃಷ್ಟಿಯಲ್ಲಿ ಯೋಚಿಸಬೇಕು’ ಎಂದು ಸಲಹೆ ನೀಡಿದ್ದಾರೆ.
`ನಗರಸಭೆ ಅಧಿಕಾರಿಗಳು ಈ ಬಗ್ಗೆ ನೀಲಿನಕ್ಷೆಯನ್ನ ತಯಾರಿಸಬೇಕಾಗಿದೆ. ನಗರದ ಎಲ್ಲಾ ವಾರ್ಡ್ ಗಳಲ್ಲಿ ಚರಂಡಿ ವ್ಯವಸ್ಥೆ ಸರಿ ಪಡಿಸಬೇಕು. ಅಲ್ಲದೇ ಕೋಣೆನಾಲಕ್ಕೆ ಸೇರುವ ಚರಂಡಿ ಅತಿಕ್ರಮಣ ಆದ ಸ್ಥಳದಲ್ಲಿ ಸರಿಪಡಿಸಬೇಕು. ಜೊತೆಗೆ ಖಾಲಿ ನಿವೇಶನಗಳಲ್ಲಿ ನೀರು ನಿಲ್ಲದಂತೆ ಕ್ರಮ ಕೈಗೊಳ್ಳಬೇಕು. ನಗರಕ್ಕೆ ಒಳಚರಂಡಿ ವ್ಯವಸ್ಥೆಯನ್ನು ಜಾರಿತರಬೇಕು. ಇಲ್ಲದಿದ್ದರೇ ಪ್ರತಿ ಮಳೆಗಾಲದಲ್ಲಿ ಇಂತಹ ಸಮಸ್ಯೆ ತಪ್ಪಿದ್ದಲ್ಲ’ ಎಂದು ಹೇಳಿದ್ದಾರೆ.