ಸಿದ್ದಾಪುರದಲ್ಲಿ ಆತ್ಮಹತ್ಯೆಗೆ ಶರಣಾದ ಸಂತೋಷ ನಾಯ್ಕ ಮಾಡಿದ ಮರಣಪೂರ್ವ ವಿಡಿಯೋದಲ್ಲಿ `ಕೋಲಸಿರ್ಸಿ ಕ್ರಾಸಿನ ಹುಡಗಿಯೊಬ್ಬಳ ಓಪನ್ ಫೋಟೋ’ ವಿಷಯದ ಮಾತುಕಥೆಯಿದೆ. ಇದಕ್ಕೆ ಪೂರಕವಾಗಿ ಸಾವನಪ್ಪಿದ ಸಂತೋಷ ನಾಯ್ಕಗೆ ಆರೋಪಿತರು 3.5 ಲಕ್ಷ ರೂ ಹಣ ನೀಡಿದ ಬಗ್ಗೆಯೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ ಹೇಳಿದ್ದಾರೆ. ಆ ಆರೋಪಿತರಿಗೆ ಅಷ್ಟು ಪ್ರಮಾಣದ ಹಣವಾದರೂ ಎಲ್ಲಿಂದ ಬಂದಿತು? ಎಂಬುದು ಇದೀಗ ಹುಟ್ಟಿಕೊಂಡಿರುವ ಹೊಸ ಪ್ರಶ್ನೆ!
ಹುಡುಗಿಯರ ಹೆಸರಿನಲ್ಲಿ ನಕಲಿ ಸಾಮಾಜಿಕ ಖಾತೆರಚಿಸಿ ಸಿದ್ದಾಪುರದಲ್ಲಿ `ಸ್ಟಿಂಗ್ ಆಪರೇಶನ್’ ನಡೆಸಿದ ಸೊರಬದ ಸಂತೋಷ ನಾಯ್ಕ ಸಾವಿಗೆ ಶರಣಾಗಿದ್ದಾರೆ. ಸಾವಿಗೂ ಮುನ್ನ ಅವರು ಸಿದ್ದಾಪುರದಲ್ಲಿ ಹೈಸ್ಕೂಲ್ ಹುಡುಗಿಯರನ್ನು ಕಾಮದಾಸೆಗೆ ಬಳಸಿಕೊಳ್ಳುತ್ತಿರುವ ಬಗ್ಗೆ ಸ್ಪೋಟಕ ಮಾಹಿತಿ ನೀಡಿದ್ದಾರೆ. ಸಾವಿಗೂ ಮುನ್ನ ಸಂತೋಷ ನಾಯ್ಕ ಮಾಡಿದ ವಿಡಿಯೋದಲ್ಲಿ ವಾಟ್ಸಪ್ ಚಾಟ್ ವಿಷಯ ಹಲವು ರಹಸ್ಯಗಳನ್ನು ಕೆದಕಿದೆ. ಸಿದ್ದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ ಹೆಸರು ಈ ವಿಡಿಯೋದಲ್ಲಿ ತಳಕುಹಾಕಿದ್ದು, ಪೊಲೀಸರು ಈಗಾಲೇ ವಸಂತ ನಾಯ್ಕರ ವಿಚಾರಣೆ ನಡೆಸಿದ್ದಾರೆ.
ವಿಚಾರಣೆ ಎದುರಿಸಿ ಹೊರಬಂದ ವಸಂತ ನಾಯ್ಕ ಅವರು `ಸಾವನಪ್ಪಿದ ಸಂತೋಷ ನಾಯ್ಕ ಸಹ ಸಾಚಾ ಅಲ್ಲ’ ಎಂದು ಆರೋಪ ಮಾಡಿದ್ದಾರೆ. ಈ ವೇಳೆ `ಸಂತೋಷ ನಾಯ್ಕಗೆ ಕೆಲ ಹುಡುಗರು 3.5 ಲಕ್ಷ ರೂ ಹಣ ನೀಡಿದ್ದಾರೆ’ ಎಂದು ಸಹ ವಸಂತ ನಾಯ್ಕ ಹೇಳಿದ್ದಾರೆ. ಅಷ್ಟಕ್ಕೂ ದೊಡ್ಡ ದೊಡ್ಡ ದುಡಿಮೆ ಇಲ್ಲದ ಆ ಹುಡುಗರಿಗೆ ಅಷ್ಟು ಪ್ರಮಾಣದ ಹಣ ಎಲ್ಲಿಂದ ಬಂದಿತು? ವಸಂತ ನಾಯ್ಕ ಅವರು `ಅಮಾಯಕರು’ ಎನ್ನುತ್ತಿರುವ ಹುಡುಗರು ಹುಡುಗಿ ಹೆಸರಿನಲ್ಲಿ ಮೆಸೆಜ್ ಮಾಡಿದವನಿಗೆ ಅಷ್ಟೊಂದು ದೊಡ್ಡ ಮೊತ್ತ ಏಕೆ ಕೊಟ್ಟರು? ಎಂಬ ಪ್ರಶ್ನೆ ಜನರನ್ನು ಕಾಡುತ್ತಿದೆ.
ಕಾನೇಹಳ್ಳಿಯಲ್ಲಿ ನಡೆದ ಸಂತೋಷ ನಾಯ್ಕ ಆತ್ಮಹತ್ಯೆ ಪ್ರಕರಣಕ್ಕೆ ಸಂಬoಧಿಸಿ ಪೊಲೀಸರು ಈಗಾಗಲೇ ಇಬ್ಬರನ್ನು ಬಂಧಿಸಿದ್ದಾರೆ. ವಾಹನ ಚಾಲಕನಾಗಿರುವ ಚನ್ನಮಾವಿನ ಹೇಮಂತ ನಾಯ್ಕ ಹಾಗೂ ಶಾಮಿಯಾನ ಹಾಕುವುದನ್ನು ಕಾಯಕವನ್ನಾಗಿಸಿಕೊಂಡಿದ್ದ ಶಿವಕುಮಾರ ನಾಯ್ಕ ಬಂಧಿತರಾಗಿದ್ದು, ಅವರ ವಿಚಾರಣೆ ನಡೆಯುತ್ತಿದೆ. ಬೆಂಗಳೂರಿಗೆ ಪರಾರಿಯಾಗಲು ಯತ್ನಿಸಿದ್ದ ಯುವಕರಿಬ್ಬರನ್ನು ಪೊಲೀಸರು ವಶಕ್ಕೆಪಡೆದಿದ್ದು, ಸಿದ್ದಾಪುರದ ಪೊಲೀಸ್ ಸಿಬ್ಬಂದಿ ಪ್ರಶಾಂತಕುಮಾರ ಹಾಗೂ ಮೋಹನ್ ಗಾವಡಿ ಸಹ ಇದೇ ಪ್ರಕರಣದಲ್ಲಿ ಅಮಾನತು ಆಗಿದ್ದಾರೆ. ಈ ಪ್ರಕರಣದಲ್ಲಿ ಭಾಗಿಯಾದ ಇನ್ನಷ್ಟು ಜನರನ್ನು ಬಂಧಿಸುವ ಸಾಧ್ಯತೆಯಿದೆ.
ಈ ಎಲ್ಲದರ ನಡುವೆ ಕೋಲಸಿರ್ಸಿ ಕ್ರಾಸಿನ ಹುಡುಗಿ ವಿಷಯದ ಚರ್ಚೆ ಮುನ್ನೆಲೆಗೆ ಬಂದಿದೆ. ಜೊತೆಗೆ ಇನ್ನಷ್ಟು ಹುಡುಗಿಯರು ಪ್ರೀತಿ-ಪ್ರೇಮದ ವಿಷಯಕ್ಕೆ ಸಿಲುಕಿ `ದೇಹದಾನ’ ಮಾಡಿದ ಬಗ್ಗೆಯೂ ಸಂತೋಷ ನಾಯ್ಕ ಹೇಳಿಕೊಂಡಿದ್ದಾರೆ. ಇದಕ್ಕೆ ಸಂಬoಧಿಸಿ ಅಶ್ಲೀಲ ಫೋಟೋವೊಂದನ್ನು ಸಹ ಅವರು ವಿಡಿಯೋದಲ್ಲಿ ಬಹಿರಂಗಪಡಿಸಿದ್ದು, ವಾಟ್ಸಪ್ ಚಾಟಿನಲ್ಲಿ ಸಹ ಡೌನ್ಲೋಡ್ ಆಗಿರದ ಇನ್ನಷ್ಟು ಹಸಿಬಿಸಿ ಚಿತ್ರಣಗಳನ್ನು ಸಂತೋಷ ನಾಯ್ಕ ವಿಡಿಯೋ ಮೂಲಕ ಕಾಣಿಸಿದ್ದಾರೆ. ಸಂತೋಷ್ ನಾಯ್ಕ ಜೊತೆ ಚಾಟ್ ಮಾಡಿದ ವ್ಯಕ್ತಿಯೇ ಈ ವಿಡಿಯೋಗಳನ್ನು ಹರಿಬಿಟ್ಟಿದ್ದು, `10ನೇ ತರಗತಿ ವಿದ್ಯಾರ್ಥಿನಿಯ ಇನ್ನಷ್ಟು ಇಂಥ ವಿಡಿಯೋಗಳಿದೆ’ ಎಂಬ ಅರ್ಥದಲ್ಲಿ ಆ ಚಾಟ್’ಗಳಿವೆ.
ಸಂತೋಷ ನಾಯ್ಕ ಸಾಚಾ ಅಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಮರಣಪೂರ್ವ ವಿಡಿಯೋ ಕೊನೆಗೆ ಅದನ್ನು ಸಂತೋಷ ನಾಯ್ಕ ಅವರೇ ಒಪ್ಪಿಕೊಂಡಿದ್ದಾರೆ. `ತಾನು ಪ್ರೀತಿಸಿದ ಹುಡುಗಿಗಾಗಿ ಸ್ಟಿಂಗ್ ಆಪರೇಶನ್ ನಡೆಸಿದ್ದು, ಆ ಹುಡುಗಿಯೇ ಇದೀಗ ಅವರ ಬೆಂಬಲಕ್ಕಿದ್ದಾಳೆ’ ಎಂದು ಸಂತೋಷ ನಾಯ್ಕ ಹೇಳಿಕೊಂಡಿದ್ದಾರೆ. ಇದರೊಂದಿಗೆ ಸಂತೋಷ ನಾಯ್ಕ ಜೊತೆ ಚಾಟ್ ಮಾಡಿದ ವ್ಯಕ್ತಿ `ತನ್ನಲ್ಲಿ ಇನ್ನಷ್ಟು ವಿಡಿಯೋ ಇದೆ’ ಎನ್ನುವ ಬಗ್ಗೆ ಹೇಳಿರುವುದು ಹಾಗೂ ಆ ಹುಡುಗರು ಸಂತೋಷ್ ನಾಯ್ಕಗೆ ಲಕ್ಷಾಂತರ ರೂ ಹಣ ನೀಡಿರುವುದು ಸಾಭೀತಾಗಿರುವುದರಿಂದ `ಸತ್ಯ ಇಲ್ಲಿಗೆ ಮುಗಿದಿಲ್ಲ’ ಎಂಬ ಅನುಮಾನಕ್ಕೆ ಕಾರಣವಾಗಿದೆ.