ಭೂಮಿಯ ದಾಖಲೆಪಡೆದು ಸಾಲ ನೀಡಿದ ಶಿರಸಿಯ ಸೆಂಟ್ ಮಿಲಾಗ್ರಿಸ್ ಸೌಹಾರ್ದ ಕೋ ಆಪರೇಟಿವ್ ಸೊಸೈಟಿಗೆ ಸಾಲ ಪಡೆದವರು ವಂಚಿಸಿದ್ದಾರೆ. 2022ರಲ್ಲಿಯೇ ವಂಚನೆ ನಡೆದಿದ್ದು, ಈ ಬಗ್ಗೆ ಇದೀಗ ಅರಿತ ಶಿರಸಿ ಸೊಸೈಟಿ ಶಾಖೆಯ ಲೋಕೇಶ ನಾಯ್ಕ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಮರಾಠಿಕೊಪ್ಪ ರಸ್ತೆಯ ನಿತ್ಯಾನಂದ ಮಠದ ಬಳಿಯ ವ್ಯಾಪಾರಿ ಕಮಲಾಕರ ಭಂಡಾರಿ ಅವರು ಲಂಡಕನಳ್ಳಿ ಗ್ರಾಮದ ತಮ್ಮ ಭೂಮಿಯನ್ನು ಅಡವಿಟ್ಟು ಸಾಲ ಪಡೆದಿದ್ದರು. 2014ರಲ್ಲಿ ಅವರು 5 ಲಕ್ಷ ರೂ ಸಾಲಪಡೆದ ಬಗ್ಗೆ ಉಪನೋಂದಣಾಧಿಕಾರಿ ಕಚೇರಿಯಲ್ಲಿಯೂ ಸಿಂಪಲ್ ಮೋರ್ಟಗೇಜ್ ಡೀಡ್ ಮೂಲಕ ದಾಖಲೆ ಮಾಡಿಸಿದ್ದರು. ಆದರೆ, ಸಾಲ ಹಾಗೂ ಬಡ್ಡಿಯನ್ನು ಕಮಲಾಕರ ಭಂಡಾರಿ ಅವರು ಸರಿಯಾಗಿ ಪಾವತಿ ಮಾಡಿರಲಿಲ್ಲ. ಹೀಗಾಗಿ ಸೆಂಟ್ ಮಿಲಾಗ್ರಿಸ್ ಸೊಸೈಟಿಯವರು ಆಸ್ತಿ ಹರಾಜು ಹಾಕುವ ಬಗ್ಗೆ ನೋಟಿಸ್ ಮಾಡಿದ್ದರು.
ಆಗ ಕಮಲಾಕರ ಭಂಡಾರಿ ಅವರು ಮಾರಿಕಾಂಬಾ ನಗರದ ವ್ಯಾಪಾರಿ ಉದಯ ನಾಯ್ಕ, ಮಾರಿಕಾಂಬಾ ನಗರದ ಮತ್ತೊಬ್ಬ ವ್ಯಾಪಾರಿ ಕಾರ್ತಿಕ್ ನಾಯ್ಕ ಅವರ ಜೊತೆ ಸೇರಿ ತಂತ್ರವೊoದನ್ನು ರೂಪಿಸಿದರು. ದೊಡ್ನಳ್ಳಿ ಗ್ರಾಮ ಪಂಚಾಯತಗೆ ತೆರಳಿ ಆ ಭೂಮಿಗೆ ಇ-ಸ್ವತ್ತು ಆಧಾರದಲ್ಲಿ ಪ್ರತ್ಯೇಕ ಸ್ವತ್ತು ಸಂಖ್ಯೆ ಪಡೆದರು. ಅದೇ ಆಧಾರದಲ್ಲಿ ಕೆಲ ನಕಲಿ ದಾಖಲೆಗಳನ್ನು ಸೃಷ್ಠಿಸಿದರು. 2022ರ ಜುಲೈ 6ರಂದು ಕಮಲಾಕರ ಭಂಡಾರಿ ಅವರು ಉದಯ ನಾಯ್ಕ ಹಾಗೂ ಕಾರ್ತಿಕ ನಾಯ್ಕ ಅವರಿಗೆ ಆ ಭೂಮಿ ಮಾರಾಟ ಮಾಡಿದರು. `ಇದೇ ನಿಜವಾದ ದಾಖಲೆ’ ಎಂದು ಗ್ರಾಮ ಪಂಚಾಯತ ಹಾಗೂ ನೋಂದಣಾಧಿಕಾರಿ ಕಚೇರಿಗೂ ಸಲ್ಲಿಸಿದರು.
ಈ ಎಲ್ಲಾ ವಿಷಯದ ಬಗ್ಗೆ ಅರಿತ ಸೆಂಟ್ ಮಿಲಾಗ್ರಿಸ್ ಶಾಖಾ ವ್ಯವಸ್ಥಾಪಕ ಲೋಕೇಶ ನಾಯ್ಕ ಇದೀಗ ಪೊಲೀಸ್ ದೂರು ನೀಡಿದ್ದಾರೆ. ಆ ಮೂವರ ವಿರುದ್ಧವೂ ಕಾನೂನು ಕ್ರಮಕ್ಕೆ ಒತ್ತಾಯಿಸಿದ್ದಾರೆ.