ಶಿರಸಿ ರಂಗಾಪುರದಲ್ಲಿ ರೈತರ ಬೆಳೆ ಹಾಳು ಮಾಡಿದ್ದ ಅರಣ್ಯಾಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಕ್ಷಮೆ ಕೋರಿದ್ದಾರೆ. ಕ್ಷಮೆ ಕೋರಿದ ಅಧಿಕಾರಿಗಳನ್ನು ರೈತರು ಮನ್ನಿಸಿದ್ದು, ಈ ಪ್ರಕರಣ ಅಲ್ಲಿಗೆ ಮುಕ್ತಾಯವಾಗಿದೆ.
ಶನಿವಾರ ಕಾಡಿನಲ್ಲಿ ಗಿಡ ನೆಡುವುದಕ್ಕೆ ಹೋಗುವ ಅರಣ್ಯಾಧಿಕಾರಿಗಳು ರೈತರು ಹೊಲದಲ್ಲಿ ಬೆಳೆದಿದ್ದ ಜೋಳ ತುಳಿದಿದ್ದರು. ರೈತರು ಬೆಳೆದ ಬೆಳೆಗಳ ಮೇಲೆ ಟಾಕ್ಟರ್ ಹಾಯಿಸಿ ಉದ್ದಟತನ ಮೆರೆದಿದ್ದರು. ಈ ಬಗ್ಗೆ ಪ್ರಶ್ನಿಸಿದವರಿಗೂ ಹಾರಿಕೆ ಉತ್ತರ ನೀಡಿದ್ದರು. ಆ ಭಾಗದ ಜನ ಇದರಿಂದ ಆಕ್ರೋಶವ್ಯಕ್ತಪಡಿಸಿದ್ದು, ಆಕ್ರೋಶಕ್ಕೆ ಮಣಿದ ಅರಣ್ಯಾಧಿಕಾರಿಗಳು ಈ ದಿನ ರೈತರನ್ನು ಸಮಾಧಾನ ಮಾಡಿದ್ದಾರೆ.
ಸಾಮಾಜಿಕ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ರೈತರಿಗೆ ಆದ ಅನ್ಯಾಯ ನೋಡಿದರು. ಜಾನುವಾರು ಮೇವಿಗೆ ಮೀಸಲಿರುವ ಗೋಮಾಳದಲ್ಲಿಯೂ ಅರಣ್ಯ ಗಿಡ ನೆಡುವುದಿಲ್ಲ ಎಂದು ಭರವಸೆ ನೀಡಿದರು. `ಟಾಕ್ಟರ್ ಚಾಲಕ ಬೆಳೆ ಮೇಲೆ ವಾಹನ ಹಾಯಿಸಿ ತಪ್ಪು ಮಾಡಿದ್ದು, ಆತನ ಪರವಾಗಿ ನಾವು ಕ್ಷಮೆ ಕೇಳುತ್ತೇವೆ’ ಎಂದು ರೈತರ ಮನವೊಲೈಸಿದರು.
ರೈತರ ಪರವಾಗಿ ಹೋರಾಟ ನಡೆಸಿದ ರೈತ ಮುಖಂಡ ರಾಘವೇಂದ್ರ ನಾಯ್ಕ ಕಿರವತ್ತಿ, ರೈತ ಸಂಘದ ತಾಲೂಕಾ ಅಧ್ಯಕ್ಷ ಪ್ರಮೋದ ಜಕ್ಲಣ್ಣನವರ್, ಬಸವರಾಜ ತಳವಾರ್, ಪ್ರಭು ಕ್ಯಾತಣ್ಣನವರ್ ಅಧಿಕಾರಿಗಳು ಕ್ಷಮೆ ಕೇಳಿದ ಕಾರಣ ಈ ಪ್ರಕರಣವನ್ನು ಅಲ್ಲಿಗೆ ಮುಗಿಸಿದರು.