ಪೊಲೀಸರ ಏಕಪಕ್ಷೀಯ ನಡವಳಿಕೆ ಬಗ್ಗೆ ಆಕ್ಷೇಪವ್ಯಕ್ತಪಡಿಸಿರುವ ದಾಂಡೇಲಿಯ ನ್ಯಾಯವಾದಿಗಳು `ತಮಗೆ ರಕ್ಷಣೆ ನೀಡಿ’ ಎಂದು ಮುಖ್ಯಮಂತ್ರಿಗಳಿಗೆ ಪತ್ರ ರವಾನಿಸಿದ್ದಾರೆ. ಇದರೊಂದಿಗೆ ವಿವಿಧ ಬೇಡಿಕೆಗಳ ಈಡೇರಿಕೆಗೂ ಒತ್ತಾಯಿಸಿದ್ದಾರೆ.
ಅಖಿಲ ಭಾರತ ವಕೀಲರ ಒಕ್ಕೂಟದ ದಾಂಡೇಲಿ ಸಮಿತಿಯಿಂದ ಮುಖ್ಯಮಂತ್ರಿಗಳಿಗೆ ಪತ್ರ ರವಾನಿಸಲಾಗಿದೆ. `ಪೊಲೀಸರ ಏಕಪಕ್ಷೀಯ ವರ್ತನೆಗಳಿಂದ ವಕೀಲರಿಗೆ ರಕ್ಷಣೆ ನೀಡಬೇಕು. ವಕೀಲರ ಸಂರಕ್ಷಣೆ ಕಾಯ್ದೆ 2024ಕ್ಕೆ ಸೂಕ್ತ ತಿದ್ದುಪಡಿ ತರಬೇಕು. ಸರ್ವೋಚ್ಚ ನ್ಯಾಯಾಲಯ ಮತ್ತು ಉಚ್ಚ ನ್ಯಾಯಾಲಯದ ಮಾರ್ಗಸೂಚಿಯನ್ನು ಪಾಲಿಸಬೇಕು’ ಎಂದು ವಕೀಲರು ಆಗ್ರಹಿಸಿದ್ದರೆ.
`ಅಖಂಡ ಅಖಿಲ ಭಾರತ ಬಾರ್ ಪರೀಕ್ಷೆ ರದ್ದುಪಡಿಸಬೇಕು. ಕಿರಿಯ ವಕೀಲರಿಗೆ 2 ವರ್ಷಗಳ ಕಾಲ ಮಾಸಿಕ 10 ಸಾವಿರ ರೂ ಸಹಾಯಧನ ನೀಡಬೇಕು. ತಾಲೂಕು ವಕೀಲರ ಸಂಘಕ್ಕೆ ವರ್ಷಕ್ಕೆ 5 ಲಕ್ಷ ಹಾಗೂ ಜಿಲ್ಲಾ ಸಂಘಕ್ಕೆ 10 ಲಕ್ಷ ರೂ ಅನುದಾನ ನೀಡಬೇಕು. ವಕೀಲರಿಗೆ ವೈದ್ಯಕೀಯ ಮತ್ತು ಜೀವ ವಿಮಾ ಸೌಲಭ್ಯ ನೀಡಬೇಕು’ ಎಂದು ಒತ್ತಾಯಿಸಿದ್ದಾರೆ.
ಹೆಚ್ಚುವರಿ ನ್ಯಾಯಾಲಯಗಳ ಸ್ಥಾಪನೆ ಹಾಗೂ ಮೂಲಭೂತ ಸೌಲಭ್ಯದ ಬಗ್ಗೆಯೂ ಪತ್ರದಲ್ಲಿ ಬರೆದಿದ್ದಾರೆ. ವಕೀಲರ ವಾಹನಗಳಿಗೆ ಟೋಲ್ ಶುಲ್ಕಪಡೆಯಬಾರದು’ ಎಂಬ ಬೇಡಿಕೆಯನ್ನು ಮುಂದಿಟ್ಟಿದ್ದು, 1 ತಿಂಗಳ ಒಳಗೆ ಬೇಡಿಕೆ ಈಡೇರದೇ ಇದ್ದರೆ ವಿಧಾನಸೌಧದ ಎದುರು ಪ್ರತಿಭಟಿಸುವುದಾಗಿ ಎಚ್ಚರಿಸಿದ್ದಾರೆ.
ವಕೀಲರುಗಳಾದ ವಿಶ್ವನಾಥ ಜಾಧವ, ಎಸ್ ಸಾಲಿ, ಮಂಜುನಾಥ ಬಿ ಕಾರೆಕರ್, ರತ್ನದೀಪ ಎನ್ ಎಂ ಸುಮಿತ್ರಾ ಕೆ, ಕೋಮಲ್ ಶಿಂದೆ, ಅಪೂರ್ವ ಮಹೇಶ್ವರಿ ಈ ಪತ್ರ ರವಾನಿಸಿದ ವಕೀಲರು.