ಯಲ್ಲಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸುತ್ತಿರುವ ಡಾ ದೀಪಕ ಭಟ್ಟ ಹಾಗೂ ಡಾ ಸೌಮ್ಯ ಕೆವಿ ದಂಪತಿ ವರ್ಗಾವಣೆ ವಿಚಾರವಾಗಿ ಬಿಜೆಪಿ ಬೀದಿಗಿಳಿದು ಪ್ರತಿಭಟನೆ ನಡೆಸಲು ನಿರ್ಧರಿಸಿದೆ. `ಶಾಸಕ ಶಿವರಾಮ ಹೆಬ್ಬಾರ್ ಸಹ ನಮ್ಮೊಂದಿಗೆ ಬೀದಿಗೆ ಬಂದು ಪ್ರತಿಭಟಿಸಬೇಕು’ ಎಂದು ಬಿಜೆಪಿ ಮುಖಂಡರು ಮಾಧ್ಯಮದ ಮೂಲಕ ಆಮಂತ್ರಣ ನೀಡಿದ್ದಾರೆ.
`ಜೂ 18ರಂದು ಬೆಳಗ್ಗೆ 10 ಗಂಟೆಗೆ ಯಲ್ಲಾಪುರ ಸರ್ಕಾರಿ ಆಸ್ಪತ್ರೆ ಆವರಣದಿಂದ ದೊಡ್ಡ ಪ್ರಮಾಣದಲ್ಲಿ ಜನರನ್ನು ಸೇರಿಸಿ ಪ್ರತಿಭಟನೆ ಶುರು ಮಾಡಲಾಗುತ್ತದೆ. ಪ್ರತಿಭಟನಾ ಮೆರವಣಿಗೆ ತಹಶೀಲ್ದಾರ್ ಕಚೇರಿಗೆ ಆಗಮಿಸಲಿದ್ದು, ವೈದ್ಯ ದಂಪತಿ ವರ್ಗಾವಣೆ ತಡೆಯಬೇಕು ಎಂದು ಸರ್ಕಾರದ ಮೇಲೆ ಒತ್ತಡ ತರುವ ಪ್ರಯತ್ನ ನಡೆಸಲಾಗುತ್ತದೆ’ ಎಂದು ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ, ಯಲ್ಲಾಪುರ ಮಂಡಳ ಅಧ್ಯಕ್ಷ ಪ್ರಸಾದ ಹೆಗಡೆ ಜಂಟಿಯಾಗಿ ತಿಳಿಸಿದರು. ಜೊತೆಗಿದ್ದ ಉಮೇಶ ಭಾಗ್ವತ ಹಾಗೂ ರಾಘು ಭಟ್ಟ ಇದಕ್ಕೆ ಧ್ವನಿಗೂಡಿಸಿದರು.
`ಯಲ್ಲಾಪುರದಲ್ಲಿ ಉತ್ತಮ ಆಸ್ಪತ್ರೆಯಿದೆ. ಡಾ ದೀಪಕ ಭಟ್ಟ ದಂಪತಿಯಿAದ ಈ ಆಸ್ಪತ್ರೆ ಜನಪ್ರಿಯಗೊಂಡಿದ್ದು, ಆ ವೈದ್ಯರನ್ನು ಇಲ್ಲಿ ಉಳಿಸಿಕೊಳ್ಳಬೇಕು. ಶಾಸಕರು ಈ ವಿಷಯದಲ್ಲಿ ಮೌನವಾಗಿರುವುದು ಬೇರೆ ಸಂದೇಶ ರವಾನೆಯಾಗುತ್ತಿದೆ. ವರ್ಗಾವಣೆ ಹಿಂದೆ ಅನೇಕ ಊಹಾಪೋಹಗಳು ಕೇಳಿ ಬಂದಿದೆ’ ಎಂದು ಪ್ರಸಾದ ಹೆಗಡೆ ಹೇಳಿದರು. `ಬೇರೆ ಬೇರೆ ಕಡೆ ವರ್ಗಾವಣೆ ಪಟ್ಟಿ ಬದಲಾಗಿದೆ. ಅದರ ಪ್ರಕಾರ ಯಲ್ಲಾಪುರದಲ್ಲಿಯೂ ವೈದ್ಯರಿಬ್ಬರ ವರ್ಗಾವಣೆ ವಿಚಾರ ಕೈ ಬಿಡಬೇಕು. ಇಲ್ಲವಾದರೆ ಶಾಸಕರ ಈ ವರ್ಗಾವಣೆಗೆ ಶಾಸಕರ ನಿರ್ಲಕ್ಷ ಕಾರಣ ಎಂಬುದು ಜನಾಭಿಪ್ರಾಯ’ ಎಂದರು.
`ಬಿಜೆಪಿ ನಡೆಸುವ ಈ ಪ್ರತಿಭಟನೆಗೆ ತಾಲೂಕಿನ ಮೂಲೆ ಮೂಲೆಯಿಂದ ಜನ ಬರಲಿದ್ದಾರೆ. ಇದು ಮೊದಲ ಹಂತದ ಹೋರಾಟ ಮಾತ್ರವಾಗಿದ್ದು, ಸ್ಥಳೀಯ ಶಾಸಕ ಶಿವರಾಮ ಹೆಬ್ಬಾರ್ ಸಹ ಇದಕ್ಕೆ ಬೆಂಬಲ ನೀಡಬೇಕು. ಇದ್ದ ವ್ಯವಸ್ಥೆ ಹಾಳು ಮಾಡದೇ ಹಾಗೇ ಉಳಿಸಿಕೊಳ್ಳಬೇಕು’ ಎಂದು ಹರಿಪ್ರಕಾಶ ಕೋಣೆಮನೆ ಪುನರುಚ್ಚರಿಸಿದರು. `ಎಷ್ಟೇ ಬೆಲೆ ತೆತ್ತಾದರೂ ಶಾಸಕರು ಆ ಇಬ್ಬರು ವೈದ್ಯರನ್ನು ಇಲ್ಲಿಯೇ ಉಳಿಸಿಕೊಳ್ಳಬೇಕು. ಸರ್ಕಾರದ ಮೇಲೆ ತಮ್ಮ ಪ್ರಭಾವ ಬೀರಿ ಒತ್ತಡ ತರಬೇಕು’ ಎಂದರು. `ಸರ್ಕಾರದಿಂದ ಭರವಸೆ ಸಿಗುವುವರೆಗೂ ಧರಣಿ ಮುಂದುವರೆಯುತ್ತದೆ. ವರ್ಗಾವಣೆ ವಿಷಯದಲ್ಲಿ ಯಾವುದೇ ಭರವಸೆ ಸಿಗದೇ ಇದ್ದರೆ ಪ್ರತಿಭಟನೆ ನಿರಂತರವಾಗಿರುತ್ತದೆ’ ಎಂದು ಹರಿಪ್ರಕಾಶ ಕೋಣೆಮನೆ ಘೋಷಿಸಿದರು.
`ದೀಪಕ ಭಟ್ಟ ಅವರು ಹೆರಿಗೆ ತಜ್ಞರಾಗಿ ಆಗಮಿಸಿದ ದಿನದಿಂದ ಆಸ್ಪತ್ರೆ ಚಿತ್ರಣವೇ ಬದಲಾಗಿದೆ. ಖಾಸಗಿ ಆಸ್ಪತ್ರೆಗಿಂತ ಉತ್ತಮ ಸೇವೆ ಸರ್ಕಾರಿ ಆಸ್ಪತ್ರೆಯಲ್ಲಿ ಸಿಗುತ್ತಿದೆ’ ಎಂದು ಜಿ ಪಂ ಮಾಜಿ ಸದಸ್ಯ ರಾಘು ಭಟ್ಟ ನೆನಪಿಸಿಕೊಂಡರು. `ಗ್ರಾಮೀಣ ಭಾಗದ ಆರೋಗ್ಯ ಕೇಂದ್ರದಲ್ಲಿ ವೈದ್ಯರಿಲ್ಲ. ಹೀಗಾಗಿ ಜನ ತಾಲೂಕು ಆಸ್ಪತ್ರೆಗೆ ಆಗಮಿಸುತ್ತಿದ್ದು, ಇಲ್ಲಿನ ಉತ್ತಮ ವೈದ್ಯರ ವರ್ಗಾವಣೆ ನಡೆದರೆ ಸಮಸ್ಯೆ ಖಚಿತ’ ಎಂದು ಉಮೇಶ ಭಾಗ್ವತ್ ಹೇಳಿದರು. `ಶಿವರಾಮ ಹೆಬ್ಬಾರ್ ಅವರು ಪಕ್ಷೇತರ ಶಾಸಕರಾಗಿರುವುದರಿಂದ ಬಿಜೆಪಿ ಪ್ರತಿಭಟನೆಗೆ ಆಗಮಿಸಿದರೆ ಏನೂ ಸಮಸ್ಯೆ ಇಲ್ಲ’ ಎಂದು ಉಮೇಶ ಭಾಗ್ವತ್ ಅಭಿಪ್ರಾಯಪಟ್ಟರು. ಬಿಜೆಪಿ ತಾಲೂಕು ಮಾಧ್ಯಮ ಸಂಚಾಲಕ ಕೆ ಟಿ ಹೆಗಡೆ, ರೈತ ಮೋರ್ಚಾ ಜಿಲ್ಲಾ ಮುಖಂಡ ಶಿವಲಿಂಗಯ್ಯ ಅಲ್ಲಯ್ಯನವರಮಠ ಇದ್ದರು.