ಕಳೆದ 15 ವರ್ಷಗಳಿಂದ ಯೋಗ ಸಾಧಕರಾಗಿ ಗುರುತಿಸಿಕೊಂಡಿರುವ ಯಲ್ಲಾಪುರದ ಶಿಕ್ಷಕ ಸುಬ್ರಾಯ ಭಟ್ಟ ಆನೆಜಡ್ಡಿ ಅವರು ಯೋಗ ಸ್ಪರ್ಧೆಯಲ್ಲಿ ಬೆಳ್ಳಿ ಹಾಗೂ ಬಂಗಾರದ ಪದಕ ಗೆದ್ದಿದ್ದಾರೆ.
ಸಾಗರದಲ್ಲಿ ಯೋಗ ಫೆಡರೇಶನ್ ಆಫ್ ಇಂಡಿಯಾ ನಡೆಸಿದ ಯೋಗ ಸ್ಪರ್ಧೆಯಲ್ಲಿ ಭಾಗವಹಿಸಿದ ಸುಬ್ರಾಯ ಭಟ್ಟ ಅವರು ಅಲ್ಲಿ ಬೆಳ್ಳಿ ಪದಕ ಗೆದ್ದರು. ಅದಾದ ನಂತರ ಶಿವಮೊಗ್ಗದಲ್ಲಿ ರಾಜ್ಯ ಸರ್ಕಾರಿ ನೌಕರರ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ ಅವರು ಅಲ್ಲಿ ನಡೆದ ಯೋಗ ಸ್ಪರ್ಧೆಯಲ್ಲಿ ಬಂಗಾರದ ಪದಕವನ್ನು ತಮ್ಮದಾಗಿಸಿಕೊಂಡರು.
ಸುಬ್ರಾಯ ಭಟ್ಟ ಆನೆಜಡ್ಡಿ ಅವರು ಯಲ್ಲಾಪುರ ತಾಲೂಕಿನ ಹುಟಕಮನೆ ಶಾಲೆಯಲ್ಲಿ ಶಿಕ್ಷಕರಾಗಿದ್ದಾರೆ. ಪತಂಜಲಿ ಯೋಗ ಸಮಿತಿಯ ಜಿಲ್ಲಾ ಯೋಗ ವಿಸ್ತಾರಕರಾಗಿಯೂ ಕೆಲಸ ಮಾಡುತ್ತಿರುವ ಅವರು ತಮ್ಮ ಓಂಕಾರ್ ಯೋಗ ಕೇಂದ್ರದ ಮೂಲಕ ಯೋಗದ ಬಗ್ಗೆ ಮಾಹಿತಿ, ಕಾರ್ಯಾಗಾರ ಹಾಗೂ ಚಿಕಿತ್ಸೆ ನೀಡುವ ಕಾಯಕ ಮಾಡುತ್ತ ಬಂದಿದ್ದಾರೆ. ಓಂಕಾರ್ ಯೋಗ ಕೇಂದ್ರಕ್ಕೆ 6 ವರ್ಷ ತುಂಬಿದ ಹಿನ್ನಲೆ ಮಕ್ಕಳಿಗಾಗಿ ರಾಮಾಯಣ-ಮಹಾಭಾರತದ ಬಗ್ಗೆ ಪರೀಕ್ಷೆ ಆಯೋಜಿಸುವ ಮೂಲಕ ಅರಿವು ಮೂಡಿಸುವ ಕೆಲಸವನ್ನು ಮಾಡಲು ನಿರ್ಧರಿಸಿದ್ದಾರೆ.
ಸದ್ಯ ರಾಜ್ಯ ಸರ್ಕಾರಿ ನೌಕರರ ರಾಜ್ಯಮಟ್ಟದ ಕ್ರೀಡಾಕೂಟದ ಯೋಗ ವಿಭಾಗದಲ್ಲಿ ಬಂಗಾರ ಪದಕ ಗೆದ್ದ ಕಾರಣ ಅವರು ರಾಷ್ಟçಮಟ್ಟದ ಯೋಗ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶಪಡೆದಿದ್ದಾರೆ.