ಕಾರವಾರದ ಗುಡ್ಡೆಹಳ್ಳಿಗೆ ಪ್ರವಾಸಿಗರು ಬರುವ ವಿಷಯವಾಗಿ ಕೃಷ್ಣ ಗೌಡ, ತಾಕು ಗೌಡ ಹಾಗೂ ಅಜೀಪ ಗೌಡ ನಡುವೆ ಜಗಳವಾಗಿದೆ. ಅವರೆಲ್ಲರ ಕೈಯಲ್ಲಿ ಕತ್ತಿ ಹಿಡಿದು ಜೀವಬೆದರಿಕೆ ಒಡ್ಡುವಷ್ಟರ ಮಟ್ಟಿಗೆ ಕಚ್ಚಾಟ ನಡೆಸಿದ್ದಾರೆ.
ಕಾರವಾರದ ಬಿಣಗಾ ವ್ಯಾಪ್ತಿಯಲ್ಲಿ ಬರುವ ಗುಡ್ಡೆಹಳ್ಳಿ ಮೂಲಭೂತ ಸೌಕರ್ಯ ವಂಚಿತ ಊರು. ಅದಾಗಿಯೂ ಅಲ್ಲಿನ ಪರಿಸರ ವೀಕ್ಷಣೆಗೆ ಅನೇಕ ಪ್ರವಾಸಿಗರು ಬರುತ್ತಾರೆ. ಪ್ರವಾಸಿಗರ ಆಗಮನ-ಆತಿಥ್ಯ ವಿಷಯವಾಗಿ ಅಲ್ಲಿನ ಗೌಡರ ನಡುವೆ ಮುನಿಸು ಉಂಟಾಗಿದ್ದು, ಅದು ಜಗಳದ ಸ್ವರೂಪ ಪಡೆದಿದೆ.
ಗುಡ್ಡೆಹಳ್ಳಿಯ ಕೃಷ್ಣ ಗೌಡ ಅವರ ಪ್ರಕಾರ ತಾಕು ಗೌಡ ಹಾಗೂ ಅಜೀಪ ಗೌಡ ಸೇರಿ ಕೃಷ್ಣ ಗೌಡರ ಮೇಲೆ ಹಲ್ಲೆಗೆ ಬಂದಿದ್ದಾರೆ. ಜೂನ್ 1ರಂದು ಈ ಗಲಾಟೆ ನಡೆದಿದ್ದು, ಅದೇ ದಿನ ಕೃಷ್ಣ ಗೌಡ ಅವರು ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದರು. ಪೊಲೀಸರು ನ್ಯಾಯಾಲಯದ ಕಡೆ ದಾರಿ ಕಾಣಿಸಿದ್ದರಿಂದ ಕೃಷ್ಣ ಗೌಡ ಅವರು ಅಲ್ಲಿಗೂ ಹೋದರು. ನ್ಯಾಯಾಲಯದ ಅನುಮತಿಪಡೆದು ತಾಕು ಗೌಡ ಹಾಗೂ ಅಜೀಪ ಗೌಡರ ವಿರುದ್ಧ ಪೊಲೀಸ್ ಪ್ರಕರಣ ದಾಖಲಿಸಿದರು.
ರಿಕ್ಷಾಗೆ ಗುದ್ದಿದ ಬುಲೆರೋ: ಇಬ್ಬರಿಗೆ ಗಾಯ
ಹೊನ್ನಾವರದಲ್ಲಿ ರಿಕ್ಷಾಗೆ ಬುಲೆರೋ ಗುದ್ದಿದ ಪರಿಣಾಮ ರಿಕ್ಷಾ ಪ್ರಯಾಣಿಕರು ಗಾಯಗೊಂಡಿದ್ದಾರೆ. ವಲ್ಕಿ ಕುಡ್ಲದ ರಾಮ ಗೌಡ ಅವರು ಚಲಾಯಿಸುತ್ತಿದ್ದ ರಿಕ್ಷಾಗೆ ಅಂಕೋಲಾ ಬೆಳಂಬಾರ ಶಶಿಹಿತ್ಲದ ಸಂಜೀವ ಗೌಡ ಅವರು ಓಡಿಸುತ್ತಿದ್ದ ಬುಲೆರೋ ಡಿಕ್ಕಿಯಾಗಿದೆ.
ಹೊನ್ನಾವರದ ವಲ್ಕಿ ಕುಡ್ಲದ ರಾಮ ಗೌಡ ಅವರು ಜೂ 11ರಂದು ರೈಲು ನಿಲ್ದಾಣದ ಕಡೆ ಹೊರಟಿದ್ದರು. ಅವರ ರಿಕ್ಷಾದಲ್ಲಿ ವಲ್ಕಿ ಕುಡ್ಲದ ಸುನಿತಾ ನಾಯ್ಕ ಅವರು ಆಸೀನರಾಗಿದ್ದರು. ಹೊನ್ನಾವರ ಕರ್ಕಿಯ ರೈಲು ನಿಲ್ದಾಣ ಕ್ರಾಸ್ ತಲುಪಿದಾಗ ಬಲಕ್ಕೆ ತಿರುಗಲು ರಾಮ ಗೌಡ ಅವರು ಇಂಡಿಕೇಟರ್ ಹಾಕಿದರು.
ಆಗ, ಹಿಂದಿನಿoದ ಬುಲೇರೋ ಓಡಿಸಿಕೊಂಡು ಬಂದ ಸಂಜೀವ ಗೌಡ ಆ ರಿಕ್ಷಾಗೆ ತಮ್ಮ ವಾಹನ ಗುದ್ದಿದರು. ಪರಿಣಾಮ ರಿಕ್ಷಾ ಪಲ್ಟಿಯಾಯಿತು. ಸುನಿತಾ ನಾಯ್ಕ ಅವರ ಸೊಂಟ ಮುರಿಯಿತು. ರಾಮು ಗೌಡ ಸಹ ಗಾಯಗೊಂಡಿದ್ದು, ಅಲ್ಲಿದ್ದ ಜನ ಅವರನ್ನು ಉಪಚರಿಸಿ ಆಸ್ಪತ್ರೆಗೆ ಕಳುಹಿಸಿದರು. ಸಂಜೀವ ಗೌಡ ಅವರ ವಿರುದ್ಧ ರಾಮು ಗೌಡ ಪೊಲೀಸ್ ದೂರು ನೀಡಿದರು.