ನಗರದ ಸದ್ದು-ಗದ್ದಲಗಳ ಆಚೆ ಎಲ್ಲೋ ಇರುವ ಹಸಿರನ್ನು ಹಾಗೂ ಪ್ರಕೃತಿಯ ಮಡಿಲಲ್ಲಿ ದೊರೆವ ಶಾಂತತೆಯನ್ನು ಹುಡುಕಿ ಬರುವ ಚಾರಣಿಗರು ಕಡಿಮೆ ಇಲ್ಲ. ವಿವಿಧ ಕೀಟ, ಪಕ್ಷಿಗಳ ಸಂಗೀತ ಆಸ್ವಾದಿಸುತ್ತ, ವೈವಿಧ್ಯಮಯ ಮರ-ಗಿಡಗಳನ್ನು ಕುತೂಹಲದ ಕಣ್ಣುಗಳಿಂದ ನೋಡಿ ಸಾಗುವುದೇ ಚಾರಣದ ವಿಶೇಷ.
ಆದರೆ ಇತ್ತೀಚೆಗೆ ವಾರಾಂತ್ಯದಲ್ಲಿ ಬೆಟ್ಟಗಳನ್ನ ನೋಡಿದರೆ ಊರಿಗೆ ಊರೇ ಗುಳೆ ಎದ್ದು ಬಂದತೆ ಕಾಣಿಸುತ್ತಿದೆ. `ಬೆಟ್ಟ- ಗುಡ್ಡ ಪೂರ್ತಿ ನಮ್ಮದೇ’ ಎನ್ನುವಂತೆ ಕಿರಚುತ್ತಾ, ಸ್ಪೀಕರ್’ಗಳನ್ನು ಬಳಸಿ ಜೋರಾಗಿ ಹಾಡುತ್ತ ಹೋಗುವವರೇ ಅಧಿಕವಾಗಿದ್ದಾರೆ. ಹಲವರಂತೂ ಕುಡಿದು ಮೋಜು ಮಾಡಲೆಂದೇ ಗುಡ್ಡಕ್ಕೆ ಬರುತ್ತಾರೆ. ಅಷ್ಟೇ ಅಲ್ಲದೇ, ಬಾಟಲಿ, ಪ್ಲಾಸ್ಟಿಕ್ ಕವರ್’ಗಳನ್ನು ಎಲ್ಲೆಂದರಲ್ಲಿ ಬಿಸಾಗಿ ಪರಿಸರ ಹಾಳು ಮಾಡುತ್ತಾರೆ.
ಹಿಂದಿನ ವರ್ಷ ಕುಮಾರ ಪರ್ವತ, ದೂದ್ ಸಾಗರ್ ಮೊದಲಾದ ಕಡೆಯಲ್ಲಿ ಪ್ರವಾಸಿಗರಿಗೆ ತಡೆ ಒಡ್ಡಲಾಗಿತ್ತು. ಇತ್ತೀಚೆಗೆ ಎತ್ತಿನ ಬುಜದಲ್ಲಿ ಸಹ ಏಕಕಾಲಕ್ಕೆ 5000ರಷ್ಟು ಜನ ಸೇರಿ ದಾಂಗುಡಿ ಮಾಡಿದ್ದರು. 3-4 ವರ್ಷಗಳ ಹಿಂದೆ ಹೀಗೆಲ್ಲ ಆಗುತ್ತಿರಲಿಲ್ಲ. ಆಗ, ಚಾರಣದ ಬಗ್ಗೆ ಅಷ್ಟು ಒಲವು ಹೊಂದಿರುವವರು, ಪ್ರಕೃತಿಯ ಕುತೂಹಲವನ್ನು ತಿಳಿಯ ಬಯಸುವವರು ಮತ್ತು ಆ ವಿಸ್ಮಯಗಳನ್ನು ಕ್ಯಾಮರಾ ಕಣ್ಣಲ್ಲಿ ಸೆರೆ ಹಿಡಿಯುವವರು ಮಾತ್ರ ಚಾರಣದ ಸಾಹಸ ಮಾಡುತ್ತಿದ್ದರು. ಆದರೆ ಇದೀಗ ಅತಿಯಾದ ಸೋಷಿಯಲ್ ಮೀಡಿಯಾ ರೀಲ್ಸ್’ಗಳ ಜೊತೆ ಶೋಕಿ ಮಾಡುವವರಿಂದ ಚಾರಣದ ಅನುಭವವೇ ಬದಲಾಗಿದೆ. ಅದರ ಜೊತೆ ನಾಯಿಕೊಡೆಯಂತೆ ಹುಟ್ಟಿಕೊಂಡ ಟ್ರಾವೆಲ್/ಟ್ರೆಕ್ಕಿಂಗ್ ಕಂಪನಿಗಳು ಪರಿಸರ ಹಾಳು ಮಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ. ಒಂದು ಆರ್ಗನೈಸೇಶನ್ ಜೊತೆ ಒಮ್ಮೆ ಹೋದವರು ಮುಂದಿನ ಬಾರಿ ಅವರದೇ ಆದ ಇನ್ನೊಂದು ಆರ್ಗನೈಸೇಶನ್ ರೂಪಿಸಿಕೊಳ್ಳುತ್ತಾರೆ.
ಇಲ್ಲಿ ಚಾರಣಗಳಿಗೆ ಹೋಗುವುದು ತಪ್ಪು ಅಥವಾ ಹೋಗಲೇಬಾರದು ಎಂಬುದು ನನ್ನ ವಾದವಲ್ಲ. ನಾನೂ ಚಾರಣವನ್ನು ಇಷ್ಟ ಪಡುವವಳೇ. ಆದರೆ ಹೋಗುವವರು, ಕರೆದುಕೊಂಡು ಹೋಗುವವರು ಹಾಗೂ ಅರಣ್ಯ ಇಲಾಖೆಯವರು ಈ ಬಗ್ಗೆ ಹೆಚ್ಚಿನ ಗಮನವಹಿಸಿ ಜನರಿಗೆ ಜವಾಬ್ದಾರಿ ಬರುವಂತೆ ಮಾಡಬೇಕು. ಇದಕ್ಕೆ ಸಂಬoಧಿಸಿ ನಿಯಮಗಳನ್ನು ರೂಪಿಸಿ ಅದರ ಪಾಲನೆ ಕಡೆ ಗಮನಹರಿಸಬೇಕು. ಚಾರಣಗಳಿಗೆ ಹೋಗುವವರಲ್ಲಿ ಅತ್ಯಧಿಕ ಜನ ವಿದ್ಯಾವಂತರು. ಆದರೆ, ಅವುಗಳನ್ನು ಅರ್ಥ ಮಾಡಿಕೊಂಡು ಪಾಲಿಸುವಷ್ಟು ಶಕ್ತಿ ಇದ್ದವರಲ್ಲ!
ಚಾರಣಕ್ಕೆ ಹೋಗುವ ಮೊದಲು ನಾವು ಅಲ್ಲಿ ಏನು ಮಾಡಬೇಕು, ಏನು ಮಾಡಬಾರದು? ಎಂಬ ಬಗ್ಗೆ ಅರಿವಿರಬೇಕು. ಹೀಗಾಗಿ ಚಾರಣಿಗರಿಕಾಗಿ ಬರೆದ ಸಲಹೆಗಳು ಇಲ್ಲಿದ್ದು, ಇನ್ನೇನಾದರೂ ಇದ್ದರೆ ಅದನ್ನು ಸೇರಿಸಿಕೊಳ್ಳಿ.
1. ಚಾರಣ ಎಷ್ಟು ದೂರ… ಎಷ್ಟು ಕಷ್ಟ? ನಾವು ಅಷ್ಟು ದೂರ ಹೋಗುವ ತಯಾರಿಯಲ್ಲಿದ್ದೇವಾ? ಎಂದು ಮೊದಲು ಯೋಚಿಸಬೇಕು. ಯಾವುದೇ ಸಿದ್ಧತೆ ಇಲ್ಲದೇ ಕೇವಲ ಯಾವುದೋ ರೀಲ್ಸ್’ನಲ್ಲಿ ನೋಡಿ ಅಲ್ಲಿಗೆ ತೆರಳಿದರೆ ಎಲ್ಲರಿಗೂ ತೊಂದರೆ.
2. ದಯವಿಟ್ಟು ಮದ್ಯಪಾನ ಮತ್ತು ಧೂಮಪಾನಗಳನ್ನು ಮಾಡಬೇಡಿ. ಅದೇ ನಿಮಗೆ ಹೆಚ್ಚು ಖುಷಿ ಕೊಡುವುದಾದರೆ ಮನೆಯಲ್ಲಿಯೇ ಇದ್ದು ಆರಾಮಾಗಿರಿ.
3. ಕೆಲವೊಂದು ಅಪಾಯದ ಸ್ಥಳಗಳಲ್ಲಿ `ಪ್ರವೇಶವಿಲ್ಲ’ ಎಂದು ಬರೆದಿದ್ದರೆ ಅಲ್ಲಿ ಹೋಗಬೇಡಿ. ಅಪಾಯ ಎಂಬ ಅರಿವಿದ್ದರೂ ಹೋದರೆ ನಿಮ್ಮ ಜೀವಕ್ಕೆ ತೊಂದರೆ ಆಗುವುದು ನಿಶ್ಚಿತ.
4. ತಿಂಡಿ- ಊಟಗಳನ್ನ ತೆಗೆದುಕೊಂಡು ಹೋದ ಬಾಕ್ಸ, ಇತರೆ ಪ್ಲಾಸ್ಟಿಕ್ ಕವರ್’ಗಳು, ನೀರಿನ ಬಾಟಲ್’ಗಳನ್ನ ಜವಾಬ್ದಾರಿಯುತರಾಗಿ ಮರಳಿತಂದು ಕಸದ ಡಬ್ಬಿಗಳಲ್ಲಿ ಹಾಕಿ. ದೊಡ್ಡದಾದ ಭಾಷಣ, ಮ್ಯುಸಿಕ್’ಗಳಿಗೆ ಕಡಿವಾಣವಿರಲಿ.
5. ಹಳ್ಳಿಯ ಮಣ್ಣು ದಾರಿಗಳಲ್ಲಿ ಬೇಕಾಬಿಟ್ಟಿ ವಾಹನ ಓಡಿಸುವುದು ನಿಮಗೆ ಶೋಭೆಯಲ್ಲ. ಇದರಿಂದ ಊರಿನವರಿಗೆ ಆಗುವ ತೊಂದರೆಯನ್ನು ಅರಿತುಕೊಳ್ಳಿ
6. ಜಿಗಣೆಗಳಿಂದ ತಪ್ಪಿಸಿಕೊಳ್ಳಲು ರಾಸಾಯನಿಕ ಉತ್ಪನ್ನ ಬಳಸದಿರಿ. ಅವು ಅಲ್ಲಿನ ಜೀವಿಗಳ ಜೊತೆ ನಿಮಗೂ ಅಪಾಯಕಾರಿ.
ಒಟ್ಟಿನಲ್ಲಿ ಚಾರಣಿಗರು `ಹೆಜ್ಜೆಗಳನ್ನು ಹೊರತುಪಡಿಸಿ ಏನನ್ನೂ ಅಲ್ಲಿ ಬಿಡಬಾರದು. ನೆನಪುಗಳನ್ನು ಹೊರತುಪಡಿಸಿ ಏನನ್ನೂ ತರಬಾರದು’
Let’s be responsible and happy trekkers…
– ಪೂರ್ಣಿಮಾ ಭಟ್ಟ
Discussion about this post