`ರೈತರು ಕೃಷಿಭೂಮಿಯನ್ನು ಕಳೆದುಕೊಳ್ಳಬಾರದು’ ಎಂದು ಸೋಂದಾ ಸ್ವರ್ಣವಲ್ಲಿ ಶ್ರೀಗಳು ನೀಡಿದ ಕರೆಗೆ ವ್ಯಾಪಕ ಸ್ಪಂದನೆ ವ್ಯಕ್ತವಾಗಿದೆ. ಕೃಷಿಭೂಮಿಗಳನ್ನು ಲೇಔಟ್ ಮಾಡಿ ಮಾರುವ ಪ್ರಮಾಣ ಅಲ್ಪ ಮಟ್ಟಿಗೆ ಇಳಿಮುಖವಾಗಿದೆ.
`ಹವ್ಯಕ ಪ್ರತಿಬಿಂಬ’ ಕಾರ್ಯಕ್ರಮದಲ್ಲಿ ಸೋಂದಾ ಸ್ವರ್ಣವಲ್ಲಿ ಸಂಸ್ಥಾನದ ಗಂಗಾಧರೇoದ್ರ ಸರಸ್ವತಿ ಸ್ವಾಮೀಜಿ `ಮುಂದಿನ ತಲೆಮಾರಿನವರಿಗಾಗಿ ಕೃಷಿ ಭೂಮಿ ಉಳಿಸಿಕೊಳ್ಳುವುದು ಅನಿವಾರ್ಯ. ಈ ನಿಟ್ಟಿನಲ್ಲಿ ಸಂಸ್ಥಾನದಿoದ ಕೃಷಿ ಭೂಮಿ ಉಳಿಸಿಕೊಳ್ಳುವ ಆಂದೋಲನ ನಡೆಸಲಾಗುತ್ತದೆ’ ಎಂದಿದ್ದರು. ಉತ್ತರ ಕನ್ನಡ ಜಿಲ್ಲೆ ವೃದ್ಧಾಶ್ರಮ ಆಗದಂತೆ ನಡೆಯಲು ಮಠದಿಂದ ಯೋಜನೆ ರೂಪಿಸಿದ್ದರು.
ಕೃಷಿಭೂಮಿಗಳು ಅನ್ಯರ ಪಾಲಾಗುವುದನ್ನು ತಪ್ಪಿಸಲು ಸೋಂದಾ ಸ್ವರ್ಣವಲ್ಲಿ ಸಂಸ್ಥಾನದ ಗಂಗಾಧರೇoದ್ರ ಸರಸ್ವತಿ ಶ್ರೀಗಳು ಮಹತ್ವದ ನಿರ್ಧಾರವೊಂದನ್ನು ಅಂದು ಪ್ರಕಟಿಸಿದ್ದರು. ಆರ್ಥಿಕ ಹಾಗೂ ಸಾಮಾಜಿಕ ಕಾರಣದಿಂದ ಕೃಷಿಭೂಮಿ ಮಾರಾಟ ಮಾಡಲು ಯತ್ನಿಸುತ್ತಿರುವವರ ಮನವೊಲೈಸುವ ಪ್ರಯತ್ನ ಸ್ವರ್ಣವಲ್ಲಿ ಶ್ರೀಗಳಿಂದ ನಿರಂತರವಾಗಿ ನಡೆಯುತ್ತಿದ್ದು, ಇದಕ್ಕೆ ಪೂರಕವಾಗಿ ಸಂಸ್ಥಾನದ ಅಧೀನದಲ್ಲಿ `ಆಸ್ತಿ ಸಂರಕ್ಷಣಾ ಸಮಿತಿ’ ರಚಿಸಲಾಗಿತ್ತು. ವಿವಿಧ ಬ್ಯಾಂಕ್ ಮತ್ತು ಸಹಕಾರಿ ಸಂಘದ ಪ್ರಮುಖರು ಈ ಕಾರ್ಯಪಡೆಯ ಸದಸ್ಯರಾಗಿದ್ದು, ಕೃಷಿಭೂಮಿ ಮಾರಾಟಕ್ಕೆ ಯತ್ನಿಸುವರಗೆ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸವನ್ನು ಅವರು ಮುಂದುವರೆಸಿದ್ದಾರೆ. ಇದೀಗ ಈ ಕಾರ್ಯಪಡೆಯವರ ಸತತ ಪ್ರಯತ್ನದಿಂದಾಗಿ ಕೃಷಿಭೂಮಿ ಮಾರಾಟ ಮಾಡಲು ನಿರ್ಧರಿಸಿದ ಕೆಲವರು ಗುರುಗಳ ಮಾತಿಗೆ ಮನಸೋತು ತಮ್ಮ ನಿರ್ಧಾರ ಬದಲಿಸಿದ್ದಾರೆ. ಆ ಮೂಲಕ ಪರಂಪರಾಗತವಾಗಿ ಬಂದ ಭೂಮಿಯನ್ನು ತಮ್ಮ ಮುಂದಿನ ತಲೆಮಾರಿನವರಿಗೆ ಉಳಿಸಿಕೊಳ್ಳುವ ನಿರ್ಣಯ ಮಾಡಿದ್ದಾರೆ.

ತಮ್ಮ ಧಾರ್ಮಿಕ ಕಾರ್ಯಗಳೊಂದಿಗೆ ಪರಿಸರ ಹೋರಾಟ, ನೆರೆ ಪ್ರವಾಹದ ವೇಳೆ ನೆರವು, ಭಗವದ್ಗೀತಾ ಅಭಿಯಾನ ಮೊದಲಾದ ಚಟುವಟಿಕೆಗಳಲ್ಲಿ ಸಕ್ರೀಯವಾಗಿರುವ ಶ್ರೀಗಳು ಕೃಷಿ ಭೂಮಿ ಉಳಿಸುವಿಕೆಯ ಅನಿವಾರ್ಯತೆಯ ಬಗ್ಗೆ ಪ್ರತಿಪಾದಿಸಿದ್ದಾರೆ. ಸಂಘಟನೆಯ ಕೊರತೆ, ಸಂಖ್ಯಾಬಲದ ಇಳಿಮುಖ ಹಾಗೂ ಕೃಷಿಭೂಮಿ ಮಾರಾಟ ಸಮುದಾಯದ ಪ್ರಮುಖ ಸಮಸ್ಯೆ ಎಂದು ಅರಿತ ಶ್ರೀಗಳು ಗ್ರಾಮೀಣ ಕೃಷಿಗೆ ಉತ್ತೇಜನ ನೀಡುವುದಕ್ಕಾಗಿ ಕೃಷಿ ಭೂಮಿ ಮಾರಾಟ ಮಾಡದಂತೆ ತಮ್ಮ ಅನುಯಾಯಿಗಳಿಗೆ ಕರೆ ನೀಡಿದ್ದಾರೆ.
`ಆಸ್ತಿ ರಕ್ಷಣಾ ಕಾರ್ಯಪಡೆ’ಯ ಸದಸ್ಯರು ಭೂಮಿ ಮಾರಾಟಕ್ಕೆ ಯತ್ನಿಸಿದ ಸಂತ್ರಸ್ತರನ್ನು ಭೇಟಿ ಮಾಡಿ ಅವರ ಸಮಸ್ಯೆ ಆಲಿಸುತ್ತಾರೆ. ಮಾನಸಿಕವಾಗಿ ಕುಗ್ಗಿದವರಿಗೆ ಸಮಾಧಾನ ಮಾಡುತ್ತಾರೆ. ಆರ್ಥಿಕ ಕಾರಣದಿಂದ ಭೂಮಿ ಮಾರಾಟಕ್ಕೆ ಯತ್ನಿಸುತ್ತಿದ್ದವರಿಗೆ ಬ್ಯಾಂಕ್ ಅಥವಾ ಸೊಸೈಟಿಗಳ ಮೂಲಕ ಅವರವರ ಸಾಮರ್ಥ್ಯಕ್ಕೆ ಅನುಸಾರವಾಗಿ ಹಣಕಾಸಿನ ನೆರವು ಕೊಡಿಸುತ್ತಾರೆ. ಇದಲ್ಲದೇ, ಕೃಷಿ ತಜ್ಞರನ್ನು ಭೇಟಿ ಮಾಡಿಸಿ ಲಾಭದಾಯಿಕ ಕೃಷಿ ಮಾಡಲು ಉತ್ತೇಜಿಸುತ್ತಾರೆ. ಆರ್ಥಿಕ ಸಂಕಷ್ಟ ಎಂಬ ಏಕೈಕ ಕಾರಣದಿಂದ ಭೂಮಿ ಮಾರಾಟ ಮಾಡಲು ಸಿದ್ಧತೆ ನಡೆಸಿದವರನ್ನು `ಮಾದರಿ ಕೃಷಿಕ’ರನ್ನಾಗಿ ಮಾಡುವ ಕನಸು ಶ್ರೀಗಳದ್ದಾಗಿದೆ.
– ಅಚ್ಯುತಕುಮಾರ ಯಲ್ಲಾಪುರ
Discussion about this post