ಕಳೆದ ಎರಡು ವಾರಗಳಿಂದ ಅಂಕೋಲಾ ಹುಲಿದೇವರವಾಡದ ಜನರಿಗೆ ನಿದ್ದೆಯಿಲ್ಲ. ಇದಕ್ಕೆ ಕಾರಣ ಭಾನಾಮತಿಯ ಕಾಟ!
ಬಾಬಿಮನೆ ಪ್ರದೇಶದಲ್ಲಿ ಕಳೆದ 40 ವರ್ಷಗಳಿಂದ ಹಾಳುಬಿದ್ದ ಬಾವಿಯಿಂದ ನಿತ್ಯ ರಾತ್ರಿ ಗಜ್ಜೆಗಳ ಸದ್ದು ಕೇಳಿಬರುತ್ತಿದೆ. ಆ ಸದ್ದಿಗೆ ಜನ ನಲುಗಿದ್ದಾರೆ. ಹಿಂದೂಳಿದವರು ಹಾಗೂ ಮುಸ್ಲಿಂ ಸಮುದಾಯದವರು ಹೆಚ್ಚಿರುವ ಹುಲಿದೇವರವಾಡದಲ್ಲಿ ರಾತ್ರಿ ಎಂದರೆ ಜನ ಹೆದರುತ್ತಿದ್ದಾರೆ. ಕಳೆದ 20 ದಿನಗಳಿಂದ ರಾತ್ರಿ 10.30ರಿಂದ 12ಗಂಟೆಯವರೆಗೂ ಗಜ್ಜೆಯ ಸದ್ದು ಜೋರಾಗಿದೆ. ಆ ಸದ್ದು ಇಡೀ ಊರಿನವರಿಗೆ ಕೇಳುವುದು ಇನ್ನೊಂದು ವಿಶೇಷ.
ಈ ಬಾವಿಯಲ್ಲಿ ಪ್ರೇತಾತ್ಮವಿದೆ ಎಂಬ ವದಂತಿ ಮೊದಲಿನಿಂದಲೂ ಇತ್ತು. ಅದಕ್ಕಾಗಿ ಸಮೀಪದ ಮನೆಯವರು ಹೊಮವನ್ನು ಮಾಡಿಸಿದ್ದರು. ತಿಂಗಳ ಹಿಂದೆ ಬಾವಿಯನ್ನು ಸ್ವಚ್ಛಗೊಳಿಸಿ ಆ ನೀರನ್ನು ಬಳಸಲು ಶುರು ಮಾಡಿದ್ದರು. `ಆ ಮನೆಯವರು ಪ್ರೇತಕ್ಕೆ ಸರಿಯಾಗಿ ದಿಗ್ಬಂಧನ ಹಾಕಿಲ್ಲ. ಅದೇ ಕಾರಣಕ್ಕೆ ಇಡೀ ಊರಿಗೆ ತೊಂದರೆಯಾಗುತ್ತಿದೆ’ ಎಂಬುದು ಸ್ಥಳೀಯರ ಆಕ್ಷೇಪ. `ನಾವು ಹೋಮ ಹಾಕಿ ಆ ನೀರು ಬಳಸುತ್ತಿದ್ದೇವೆ. ನಮಗೆ ಯಾವುದೇ ಸದ್ದು ಕೇಳುತ್ತಿಲ್ಲ. ಊರಿನವರ ಮಾತು ಸುಳ್ಳು’ ಎಂಬುದು ಆ ಮನೆಯವರ ಆರೋಪ.
ಗಜ್ಜೆ ಸದ್ದು ಕೇಳಿದ ಇಬ್ಬರು ಜ್ವರದಿಂದ ಮಲಗಿದ್ದಾರೆ. ಇನ್ನೂ ಕೆಲವರು `ಈ ಊರಿನ ಸಹವಾಸವೇ ಬೇಡ’ ಎಂದು ಸಂಬAಧಿಕರ ಮನೆಗೆ ತೆರಳಿದ್ದಾರೆ. ಗಜ್ಜೆ ಸದ್ದು ಕೇಳಿದ ಒಬ್ಬ 112 ಸಹಾಯವಾಣಿಗೆ ಕರೆ ಮಾಡಿದ್ದು, ಅಲ್ಲಿಗೆ ಬಂದ ಪೊಲೀಸರು `ಮನುಷ್ಯರಿಂದ ತೊಂದರೆ ಆದರೆ ಮಾತ್ರ ನಾವು ಬಗೆಹರಿಸುತ್ತೇವೆ’ ಎಂದಿದ್ದಾರೆ. ಇದೆಲ್ಲದರ ನಡುವೆ ಊರಿನವರೆಲ್ಲ ಸೇರಿ ಭಾನಾಮತಿ ಓಡಿಸಲು ಜ್ಯೋತಿಷಿಯ ಮೊರೆ ಹೋಗಿದ್ದು, ಜ್ಯೋತಿಷಿ 40 ಸಾವಿರ ರೂ ಕೇಳಿದ್ದಾರೆ. `ಈ ಬಾವಿಯಲ್ಲಿ ಸಮಸ್ಯೆ ಇದೆ. ಎರಡು ಜೀವ ಹೋಗುವ ಸಾಧ್ಯತೆ ಹೆಚ್ಚಿದೆ’ ಎಂದು ಜ್ಯೋತಿಷಿ ಹೇಳಿದ್ದರಿಂದ ಜನ ಇನ್ನಷ್ಟು ಹೆದರಿದ್ದಾರೆ. ಹೀಗಾಗಿ ಊರಿನವರೆಲ್ಲ ಸೇರಿ 40 ಸಾವಿರ ಒಟ್ಟು ಹಾಕುತ್ತಿದ್ದರೆ, ಕೆಲವರು `ತನ್ನಲ್ಲಿ ಹಣವಿಲ್ಲ’ ಎನ್ನುತ್ತ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
Discussion about this post