ನಾಲ್ಕು ತಿಂಗಳು ಕಳೆದರೂ ಶಿರಸಿಗೆ ತಹಶೀಲ್ದಾರ್ ನೇಮಕ ಆಗದ ಕಾರಣ ಜೂ 23ರ ಸೋಮವರ `ಕಾರವಾರ ಚಲೋ’ ಹೋರಾಟ ನಡೆಸುವುದಾಗಿ ಸಾಮಾಜಿಕ ಕಾರ್ಯಕರ್ತ ಅನಂತಮೂರ್ತಿ ಹೆಗಡೆ ಘೋಷಿಸಿದ್ದಾರೆ. ಇದರೊಂದಿಗೆ ಶಿರಸಿ ಶಾಸಕರ ಮುಂದಾಳತ್ವದಲ್ಲಿ ಅಧಿಕಾರಿಗಳ ವರ್ಗಾವಣೆ ದಂಧೆ ನಡೆಯುತ್ತಿರುವ ಬಗ್ಗೆಯೂ ಅವರು ಅನುಮಾನವ್ಯಕ್ತಪಡಿಸಿದ್ದಾರೆ.
`ಕಳೆದ 4 ತಿಂಗಳಿನಿoದ ಶಿರಸಿಯಲ್ಲಿ ತಹಶೀಲ್ದಾರ್ ಹುದ್ದೆ ಖಾಲಿ ಇದ್ದರೂ ಜನಪ್ರತಿನಿಧಿಗಳು ಗಮನವಹಿಸುತ್ತಿಲ್ಲ. ಇದರಿಂದ ಜನರ ಕೆಲಸ ಸರಿಯಾಗಿ ಆಗುತ್ತಿಲ್ಲ’ ಎಂದವರು ಅಸಮಧಾನವ್ಯಕ್ತಪಡಿಸಿದರು. `ಶಿರಸಿಗೆ ಖಾಯಂ ತಹಶೀಲ್ದಾರರನ್ನು ನೇಮಕಗೊಳಿಸದ ಕಾರಣ ಜೂ 23ರಂದು `ಕಾರವಾರ ಚಲೋ’ ನಡೆಸುವುದಾಗಿ ಸುದ್ದಿಗೋಷ್ಠಿಯಲ್ಲಿ ಘೋಷಿಸಿದರು. `ಜೂ 23ರಂದು ಬೆಳಿಗ್ಗೆ 8 ಗಂಟೆಗೆ ಶಿರಸಿಯಿಂದ ಬಸ್ ತೆರಳುತ್ತದೆ. ಹೋರಾಟಕ್ಕೆ ಆಗಮಿಸುವವರು ಮುಂಚಿತವಾಗಿ ತಿಳಿಸಬೇಕು. ಹೋರಾಟದಲ್ಲಿ ನಮ್ಮ ಜತೆ ಕೈಜೋಡಿಸಬೇಕು’ ಎಂದು ವಿನಂತಿಸಿದರು.
`ತಹಶೀಲ್ದಾರ್ ಆಗಿದ್ದ ಶ್ರೀಧರ ಮುಂದಲಮನಿ ವರ್ಗಾವಣೆ ನಂತರ ಡಾಂಡೇಲಿ ತಹಶೀಲ್ದಾರ ಶೈಲೇಶ ಪರಮಾನಂದ ಅವರಿಗೆ ಪ್ರಭಾರ ಅಧಿಕಾರ ನೀಡಲಾಯಿತು. ಅದಾದ ನಂತರ ಮುಂಡಗೋಡಿನ ತಹಶೀಲ್ದಾರ ಶಂಕರ ಗೌಂಡಿ ಅವರಿಗೆ ಅಧಿಕಾರ ನೀಡಲಾಗಿದೆ. ಖಾಯಂ ತಹಶೀಲ್ದಾರ್ ನೇಮಕಕ್ಕೆ ಸರ್ಕಾರ ಆಸಕ್ತಿವಹಿಸಿಲ್ಲ’ ಎಂದವರು ದೂರಿದರು. `ತಹಶೀಲ್ದಾರ್ ನೇಮಕಾತಿ ವಿಚಾರದಲ್ಲಿ ಸರ್ಕಾರ ಹಾಗೂ ಶಾಸಕರ ನಡೆಯಿಂದ ಜನರಿಗೆ ನೋವಾಗಿದೆ’ ಎಂದರು.
`ಪಿಎಸ್‌ಐ ಹುದ್ದೆಗೆ ಇಷ್ಟು.. ತಹಶೀಲ್ದಾರ್ ಹುದ್ದೆಗೆ ಇಷ್ಟು.. ಎಂದು ವರ್ಗಾವಣೆ ದಂಧೆ ನಡೆಯುತ್ತಿರುವ ಬಗ್ಗೆ ಜನ ಮಾತನಾಡುತ್ತಿದ್ದಾರೆ. ಶಿರಸಿಯಲ್ಲಿಯೂ ಅದೇ ರೀತಿ ಆಗುತ್ತಿರುವ ಬಗ್ಗೆ ಸಂಶಯ ಕಾಡುತ್ತಿದೆ’ ಎಂದರು. `ತಹಶೀಲ್ದಾರ್ ನೇಮಕಾತಿ ಬಗ್ಗೆ ಮನವಿ ಸಲ್ಲಿಸಿ ತಿಂಗಳು ಕಳೆದರೂ ಮನವಿಗೆ ಕಿಮ್ಮತ್ತು ನೀಡಿಲ್ಲ. ಶಿರಸಿ ಸಹಾಯಕ ಆಯುಕ್ತರನ್ನು ಭಟ್ಕಳದ ಪ್ರಭಾರಿಯಾಗಿ ನೇಮಕ ಮಾಡಲಾಗಿದೆ. ಶಿರಸಿ ನಗರಸಭೆ ಅಧಿಕಾರಿ ಸಹ ಪ್ರಭಾರಿಯಾಗಿರುವುದು ಜನರಿಗೆ ಸಮಸ್ಯೆಯಾಗಿದೆ’ ಎಂದರು.
ಸದಾ ಅನಂತಮೂರ್ತಿ ಅವರ ಜೊತೆಗಿರುವ ರಮೇಶ ನಾಯ್ಕ ಕುಪ್ಪಳ್ಳಿ, ಉಷಾ ಹೆಗಡೆ, ನಾರಾಯಣ ಹೆಗಡೆ, ಶೋಭಾ ನಾಯ್ಕ, ರಾಘವೇಂದ್ರ ನಾಯ್ಕ ಬಿಸ್ಲಕೊಪ್ಪ, ರಂಗಪ್ಪ ಪರ್ಶೇರ್ ದಾಸನಕೊಪ್ಪ ಈಗಲೂ ಅವರ ಜೊತೆಯಿದ್ದು, ಧ್ವನಿಗೂಡಿಸಿದರು.