ಅoಕೋಲಾದಿoದ ಅಂತರಾಷ್ಟೀಯ ಮಾರುಕಟ್ಟೆಗೆ ಮೀನು ವ್ಯಾಪಾರ ಮಾಡುವ ಡಿ ಭಾಸ್ಕರ ಶೆಟ್ಟಿ ಕೋಟಿ ರೂ ಕಳೆದುಕೊಂಡಿದ್ದಾರೆ. ನಂಬಿಗಸ್ಥ ವ್ಯವಹಾರ ಮಾಡಿಕೊಂಡಿದ್ದವರೇ ಅವರಿಗೆ ಮೋಸ ಮಾಡಿ 1,02,77,418 ವಂಚಿಸಿದ್ದಾರೆ.
ಉಡುಪಿ ಜಿಲ್ಲೆಯ ಮಣಿಪಾಲಿನ ಭಾಸ್ಕರ ಶೆಟ್ಟಿ ಅವರು ಅಂಕೋಲಾದ ಮೊಗಟಾ ಬಳಿಯ ಕಾರೇಬೈಲಿನಲ್ಲಿ ವನದುರ್ಗಾ ಇಂಪೆಕ್ಸ ಪ್ರೆ ಲಿ ಎಂಬ ಕಂಪನಿ ಕಟ್ಟಿದ್ದಾರೆ. ಆ ಕಂಪನಿಯಲ್ಲಿ ಅವರೇ ಮ್ಯಾನೇಜರ್ ಆಗಿದ್ದು, ಭಾಸ್ಕರ ಶೆಟ್ಟಿ ಅವರ ಪತ್ನಿ ರೂಪಾ ಶೆಟ್ಟಿ ಅವರು ನಿರ್ದೇಶಕರಾಗಿದ್ದಾರೆ. ಸಿಗಡಿ ಮೀನು ಹಾಗೂ ಸಿಗಡಿ ಮೀನಿನ ಉತ್ಪನ್ನಗಳನ್ನು ದೇಶ-ವಿದೇಶಗಳಿಗೆ ಕಳುಹಿಸುವುದು ಅವರ ಕಂಪನಿಯ ಕೆಲಸ. ಆ ಮೂಲಕ ಸ್ಥಳೀಯ ಉತ್ಪನ್ನಗಳ ಮೌಲ್ಯವರ್ಧನೆಗೆ ವನದುರ್ಗಾ ಇಂಪೆಕ್ಸ ಪ್ರೆ ಲಿ ದುಡಿಯುತ್ತಿದೆ.
ದುಬೈಯ ಸಾಜೀದ್ ಕೆ ಎಸ್ ಕಂಪನಿಯವರು ಸಿಗಡಿ ಮೀನು ಖರೀದಿಸಲು ಮುಂದೆ ಬಂದಿದ್ದು, 1,02,77,418 ರೂ ಮೌಲ್ಯದ ಮೀನು ಖರೀದಿಯ ಒಪ್ಪಂದ ಮಾಡಿಕೊಂಡಿದ್ದರು. ಅದರ ಪ್ರಕಾರ ಭಾಸ್ಕರ ಶೆಟ್ಟಿ ಅವರು ಫೆ 10ರಂದು ಕಂಟೇನರ್ ಮೂಲಕ ಮುಂಬೈಗೆ ಸಿಗಡಿ ರವಾನೆ ಮಾಡಿದ್ದರು. ಮುಂಬೈನ ಕೆ ಎನ್ ಓಶಿಯಾನ್ ಪ್ರೆ ಲಿ ಕಂಪನಿಯವರು ಅದನ್ನು ಸ್ವೀಕರಿಸಿ ನೌಕೆ ಮೂಲಕ ದುಬೈಗೆ ಕಳುಹಿಸಿದ್ದರು. ಅದರಂತೆ ಹಣ ಪಾವತಿಗಾಗಿ ಫೆ 25ರಂದು ಭಾಸ್ಕರ ಶೆಟ್ಟಿ ಅವರು ತಮ್ಮ ಬ್ಯಾಂಕ್ ದಾಖಲೆಗಳ ರವಾನಿಸಿದ್ದಾರೆ. ಈ ನಡುವೆ ಮಧ್ಯವರ್ತಿ ಸಂಪತ್ ಶೆಟ್ಟಿ ಎಂಬಾತರಿಗೆ ಫೋನ್ ಮಾಡಿ, `ಪೂರ್ತಿ ಹಣ ಪಾವತಿ ಆಗುವವರೆಗೂ ಕಂಟೇನರ್ ಬಿಟ್ಟುಕೊಡಬೇಡ’ ಎಂದು ಭಾಸ್ಕರ್ ಶೆಟ್ಟಿ ಅವರು ಹೇಳಿದ್ದಾರೆ.
ಆದರೆ, ಸಂಪತ್ ಶೆಟ್ಟಿ ಅವರು ಹಣ ಪಾವತಿ ಆದ ಬಗ್ಗೆ ನಕಲಿ ಬಿಲ್ ಸೃಷ್ಠಿಸಿ ಭಾಸ್ಕರ್ ಶೆಟ್ಟಿ ಅವರಿಗೆ ವಂಚನೆ ಮಾಡಿದ್ದಾರೆ. ಫೆ 27ರಂದು ಕೋಟಿ ರೂ ಮೌಲ್ಯದ ಸಿಗಡಿ ಮೀನು ದುಬೈಗೆ ತಲುಪಿದ್ದು, ದುಬೈನ ಸಾಜೀದ್ ಕೆ ಎಸ್, ಐಸ್ ಜೋನ್, ಹಿಮಾಂಶು ಶರ್ಮಾ, ಚಂಡಿಗಡದ ಅರ್ಷದ್ ಪಾನಕಾಡ್ ಹಾಗೂ ಬ್ರಹ್ಮಾವರದ ಸಂಪತ್ ಶೆಟ್ಟಿ ಎಲ್ಲರೂ ಸೇರಿ ಭಾಸ್ಕರ್ ಶೆಟ್ಟಿ ಅವರಿಂದ ಹೆಚ್ಚುವರಿ ಹಣವನ್ನು ವಸೂಲಿ ಮಾಡಿದ್ದಾರೆ. ಹೆಚ್ಚುವರಿ ಹಣವನ್ನು ಮುಂದಿನ ಕಂಟೇನರ್’ಗೆ ಹೊಂದಾಣಿಕೆ ಮಾಡಿಕೊಳ್ಳುವುದಾಗಿಯೂ ಅವರು ನಂಬಿಸಿದ್ದಾರೆ.
ಅದಾದ ನಂತರ ಭಾಸ್ಕರ್ ಶೆಟ್ಟಿ ಅವರು ಬ್ಯಾಂಕ್‌ಗೆ ಹೋದಾಗ ಮೀನು ಮಾರಾಟದ ಹಣ ಬಾರದ ಬಗ್ಗೆ ಗೊತ್ತಾಗಿದೆ. ಆಗ, ಆ ಎಲ್ಲರೂ ಸೇರಿ ಮೋಸ ಮಾಡಿರುವುದು ಅರಿವಿಗೆ ಬಂದಿದೆ. ಹೀಗಾಗಿ ಕಾರವಾರದ ಸಿಇಎನ್ ಪೊಲೀಸ್ ಠಾಣೆಗೆ ತೆರಳಿ ಭಾಸ್ಕರ್ ಶೆಟ್ಟಿ ಅವರು ವಂಚಕರ ವಿರುದ್ಧ ದೂರು ನೀಡಿದ್ದಾರೆ.