ಸಿದ್ದಾಪುರದಲ್ಲಿ ಗ್ಯಾಸ್ ರಿಪೇರಿ ಮಾಡಿ ಬದುಕು ಕಟ್ಟಿಕೊಂಡಿರುವ ತನ್ವೀರ ಶೇಖ್ ಅವರು ಬೈಕಿನಿಂದ ಬಿದ್ದು ಪೆಟ್ಟು ಮಾಡಿಕೊಂಡಿದ್ದಾರೆ. ಡಕಾಯಿತರು ಅವರನ್ನು ಅಟ್ಟಿಸಿಕೊಂಡು ಬಂದಿದ್ದು, ಅವರಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಅವರು ಬೈಕಿನಿಂದ ಬಿದ್ದಿದ್ದಾರೆ.
ಸಿದ್ದಾಪುರದ ಹಳದಕಟ್ಟಾದಲ್ಲಿ ತನ್ವೀರ ಶೇಖ್ ಅವರು ವಾಸವಾಗಿದ್ದಾರೆ. ಗ್ಯಾಸ್ ರಿಪೇರಿ ಮಾಡಿಕೊಂಡಿರುವ ಅವರು ಜೂನ್ 15ರಂದು ಮನೆಯಿಂದ ಹೊರಗೆ ಹೋಗಿದ್ದರು. ತೌದಿ ಪೆಟ್ರೋಲ್ ಬಂಕಿನಲ್ಲಿ 500ರೂ ನೀಡಿ ತಮ್ಮ ಬೈಕಿಗೆ ಪೆಟ್ರೋಲ್ ಹಾಕಿಸಿಕೊಳ್ಳುತ್ತಿದ್ದರು. ಆಗ ಅಲ್ಲಿಗೆ ಬಂದ ಸಿದ್ದಾಪುರದ ಭರತ್ ಪಟೇಲ್ ಎಂಬಾತರು ತನ್ವೀರ್ ಶೇಖ್ ಅವರನ್ನು ಗುರಾಯಿಸಿದರು. ಜೊತೆಗೆ ತನ್ವೀರ್ ಶೇಖ್ ಅವರ ಬೈಕಿನ ಫೋಟೋ ತೆಗೆದರು. ಅದಾದ ನಂತರ ಯಾರಿಗೋ ಫೋನು ಮಾಡಿದರು. ಇದನ್ನು ನೋಡಿದರೂ ತನ್ವೀರ್ ಶೇಖ್ ಏನನ್ನು ಪ್ರಶ್ನಿಸದೇ ಅಲ್ಲಿಂದ ಜಾಗ ಖಾಲಿ ಮಾಡಿದರು.
ಆ ದಿನ ತನ್ವಿರ್ ಶೇಖ್ ಅವರು ಕುಂದಾಪುರಕ್ಕೆ ಹೋಗಿದ್ದರು. ಅಲ್ಲಿನ ಶಂಕರನಾರಾಯಣ ದೇವಾಲಯಕ್ಕೆ ಭೇಟಿ ನೀಡಿ ಸಿದ್ದಾಪುರಕ್ಕೆ ಮರಳುತ್ತಿದ್ದರು. ರಾತ್ರಿ 8 ಗಂಟೆ ವೇಳೆಗೆ ಕುಳಗೋಡ ಕ್ರಾಸಿನ ಬಳಿ ಬಂದಾಗ ಓಮಿನಿಯಲ್ಲಿ ಬಂದ ಜನ ಅವರನ್ನು ಅಡ್ಡಗಟ್ಟಿದರು. ಅಲ್ಲಿದ್ದವರಿಂದ ಬೆದರಿದ ತನ್ವೀರ್ ಶೇಖ್ ಅವರು ಇನ್ನಷ್ಟು ಜೋರಾಗಿ ಬೈಕ್ ಓಡಿಸಿದರು. ಸ್ವಲ್ಪ ದೂರ ಬಂದಾಗ ಬೈಕಿನಿಂದ ಬಿದ್ದು ಗಾಯಗೊಂಡರು.
ಬೆಳಗ್ಗೆ ಪೆಟ್ರೋಲ್ ಹಾಕಿಸುವಾಗ ಗುರಾಯಿಸಿ ಫೋಟೋ ತೆಗೆದಿದ್ದ ಭರತ್ ಪಟೇಲ್ ಮೇಲೆ ತಮಗೆ ಅನುಮಾನವಿದ್ದು, ಅವರನ್ನು ವಿಚಾರಣೆಗೊಳಪಡಿಸಬೇಕು ಎಂದು ತನ್ವರ್ ಶೇಖ್ ಪೊಲೀಸ್ ದೂರು ನೀಡಿದ್ದಾರೆ. `ಈ ಹಿಂದೆ ಸಹ ತಮ್ಮ ಮೇಲೆ ದಾಳಿ ನಡೆದಿತ್ತು’ ಎಂದು ಅವರು ವಿವರಿಸಿದ್ದಾರೆ.